ರಾಹುಲ್ ಗಾಂಧಿ ಅವರ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ರಾಹುಲ್ ಗಾಂಧಿ, ಅಮ್ಮ ಸೋನಿಯಾ ಗಾಂಧಿ ಅವರ ಫೆವರೆಟ್ ನೂರಿ ಜೊತೆ ಕಾಣಿಸಿಕೊಂಡಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸೋಶಿಯಲ್ ಮೀಡಿಯಾ ವೇದಿಕೆ X ನಲ್ಲಿ ವಿಶೇಷ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ಸಾಕು ನಾಯಿ ನೂರಿ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ವಿಡಿಯೋ ಮೂಲಕ ರಾಹುಲ್ ಗಾಂಧಿ, ಮೂಕ ಪ್ರಾಣಿಗಳ ಬಗ್ಗೆ ಪ್ರೀತಿ, ಗೌರವ ಮತ್ತು ಸಹಾನುಭೂತಿಯನ್ನು ತೋರಿಸುವಂತೆ ಜನರಿಗೆ ಮನವಿ ಮಾಡಿದೆ.
ನೂರಿ ಜೊತೆ ರಾಹುಲ್ ಗಾಂಧಿ
ನೂರಿ ಜೊತೆ ರಾಹುಲ್ ಗಾಂಧಿ ಇರುವ ವಿಡಿಯೋ ಪೋಸ್ಟ್ ಮಾಡಿದ ಕಾಂಗ್ರೆಸ್, ಪ್ರತಿಯೊಂದು ಪ್ರಾಣಿಯೂ ಪ್ರೀತಿ, ಗೌರವ ಮತ್ತು ವಾತ್ಸಲ್ಯಕ್ಕೆ ಅರ್ಹವಾಗಿದೆ. ಇಂದು ನೂರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾ ಮೂಲಕ ಮುಂದೆ ಬಂದಿದ್ದಾರೆ ಎಂದು ಬರೆದಿದೆ.
ನೂರಿ ಯಾವ ಜಾತಿ ನಾಯಿ?
ಪ್ರಾಣಿಗಳ ಹಕ್ಕು ಮತ್ತು ಅವುಗಳ ಆರೈಕೆ ಬಗ್ಗೆ ರಾಹುಲ್ ಗಾಂಧಿ ಆಗಾಗ ಮಾತನಾಡ್ತಿರುತ್ತಾರೆ. ಇತ್ತೀಚೆಗೆ, ಪ್ರಾಣಿಗಳಿಗೆ ಮಾನವರಂತೆಯೇ ಸಮಾನ ಗೌರವದೊಂದಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂದು ಅವರು ಹೇಳಿದ್ದರು. ನೂರಿ ಜ್ಯಾಕ್ ರಸೆಲ್ ಟೆರಿಯರ್ ನಾಯಿ. ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿಗೆ ಅಚ್ಚರಿಯ ಉಡುಗೊರೆಯಾಗಿ ಗೋವಾದಿಂದ ಅದನ್ನು ತಂದಿದ್ದರು.
ರಾಹುಲ್ ಗಾಂಧಿಯವರನ್ನು ಏನು ಕೇಳಿದರು?
ರಾಹುಲ್ ಗಾಂಧಿ ಇನ್ಸ್ಟಾಗ್ರಾಂನಲ್ಲಿ 'Ask Me Anything' ಸೆಷನ್ ನಡೆಸಿದ್ದಾರೆ. ವಿದ್ಯಾರ್ಥಿಗಳು ಹಾಗೂ Gen-Z ಯುವಕರು ಕೇಳುವ ಯಾವುದೇ ಪ್ರಶ್ನೆಗಳಿಗೆ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ರಾಹುಲ್ ಗಾಂಧಿ ಉತ್ತರ ನೀಡುತ್ತಾರೆ. ಒಬ್ಬರು ನಾಯಿ ಮೇಲಿನ ಪ್ರೀತಿ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ. ವಿಡಿಯೋದಲ್ಲಿ, ಪ್ರಾಣಿಗಳ ರಕ್ಷಣೆ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ನೂರಿ ಜೊತೆ ವಿಡಿಯೋ ಮಾಡಿರೋದಕ್ಕೆ ಅಮ್ಮ ಸೋನಿಯಾ ಗಾಂಧಿ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಆದ್ರೆ ಅದನ್ನು ಆಮೇಲೆ ನೋಡಿಕೊಳ್ತೇನೆ ಅಂತ ತಮಾಷೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ನೂರಿ ಕತ್ತಿಗೆ ಮೈಕ್ ಹಾಕಿರೋದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ. ಆದ್ರೆ ರಾಹುಲ್ ಪ್ರಾಣಿಗಳ ಆರೈಕೆ ಬಗ್ಗೆ ನೀಡಿದ ಸಲಹೆಯನ್ನು ಮೆಚ್ಚಿಕೊಂಡಿದ್ದಾರೆ.


