ಕಾವೇರಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ಕುರಿತು ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ತೀವ್ರ ವಾಗ್ವಾದ ನಡೆಯಿತು. ಸರ್ಕಾರದ ಕ್ರಮಗಳನ್ನು ಸ್ಟಾಲಿನ್ ಪ್ರಶ್ನಿಸಿದರೆ, ರೈತರ ಹಿತರಕ್ಷಣೆಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಸಿಎಂ ವಿಜಯ್ ತಿರುಗೇಟು ನೀಡಿದರು.
ಚೆನ್ನೈ: ಕಾವೇರಿ ನೀರು ಹಂಚಿಕೆ ಹಾಗೂ ಪ್ರಸ್ತಾವಿತ ಮೇಕೆದಾಟು ಜಲಾಶಯ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಿಧಾನಸಭೆಯಲ್ಲಿ ಶುಕ್ರವಾರದ ಕಲಾಪ ತೀವ್ರ ಕಾವು ಪಡೆದುಕೊಂಡಿತ್ತು. ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ಬಿಸಿಬಿಸಿ ವಾಗ್ವಾದ ನಡೆಯಿತು. ವಿಧಾನಸಭೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಈ ವಿಷಯವನ್ನು ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್, ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯನ್ನು ಮುಂದುವರಿಸದಂತೆ ತಡೆಯಲು ವಿಜಯ್ ನೇತೃತ್ವದ ಸರ್ಕಾರ ಪೂರ್ಣಪ್ರಮಾಣದ ಕ್ರಮ ಕೈಗೊಂಡಿಲ್ಲ ಎಂದು ನೇರವಾಗಿ ಆರೋಪಿಸಿದರು.
ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಆರೋಪವೇನು?
ಕರ್ನಾಟಕದಲ್ಲಿ ತಮ್ಮ ರಾಜ್ಯದ ಹಕ್ಕುಗಳಿಗಾಗಿ ಎಲ್ಲ ಪಕ್ಷಗಳು ಒಂದಾಗಿ 'ಐಕ್ಯರಂಗ' ಪ್ರದರ್ಶಿಸುತ್ತಿವೆ ಹಾಗೂ ಸರ್ವಪಕ್ಷ ಸಭೆ ಕರೆದಿವೆ. ಆದರೆ, ತಮಿಳುನಾಡಿನ ಪರವಾಗಿ ಒಗ್ಗಟ್ಟು ಪ್ರದರ್ಶಿಸಲು ಟಿವಿಕೆ (TVK) ಸರ್ಕಾರ ಸರ್ವಪಕ್ಷ ಸಭೆ ಕರೆಯಲು ಏಕೆ ಹಿಂಜರಿಯುತ್ತಿದೆ ಎಂದು ಉದಯನಿಧಿ ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಕಾವೇರಿ ಕುರಿತು ಚರ್ಚಿಸಲು ಬೆಂಗಳೂರಿಗೆ ಭೇಟಿ ನೀಡುವ ಯೋಜನೆ ರೂಪಿಸಿದ್ದರು. ಆ ವಿಷಯ ಮಾಧ್ಯಮಗಳಿಗೆ ಸೋರಿಕೆಯಾದ ಬಳಿಕ, ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ವಿಜಯ್ ಅವರು ತಮ್ಮ ಭೇಟಿಯನ್ನು ನಿರಾಕರಿಸಿದರು ಎಂದು ಕಿಡಿಕಾರಿದರು.
ವಿಪಕ್ಷಗಳ ದಾಳಿಗೆ ಸಿಎಂ ವಿಜಯ್ ನೀಡಿದ ತಿರುಗೇಟು
ವಿರೋಧ ಪಕ್ಷದ ಆರೋಪಗಳನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಜೋಸೆಫ್ ವಿಜಯ್, ಕಾವೇರಿ ವಿಷಯದಲ್ಲಿ ನಾನು ಕೆಟ್ಟ ರಾಜಕೀಯ ಮಾಡಲು ಬಯಸುವುದಿಲ್ಲ. ತಮಿಳುನಾಡು ರೈತರ ಹಿತರಕ್ಷಣೆಗಾಗಿ ನಮ್ಮ ಸರ್ಕಾರ ಯಾವುದೇ ರೀತಿಯ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧವಾಗಿದೆ ಎಂದರು. ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೆ, ಯೋಜನೆಗೆ ಅನುಮತಿ ನೀಡದಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸುದೀರ್ಘ ಪತ್ರ ಬರೆಯಲಾಗಿದೆ. ತಮಿಳುನಾಡಿನ ಹಕ್ಕನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು. ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, 1969ರ ಅವಧಿಯಲ್ಲೇ ಡಿಎಂಕೆ ಸರ್ಕಾರ ಕರ್ನಾಟಕದ ಯೋಜನೆಯೊಂದಕ್ಕೆ ಮೊದಲ ಅನುಮತಿ ನೀಡುವ ಮೂಲಕ ಕಾವೇರಿ ಹಕ್ಕಿಗೆ ಧಕ್ಕೆ ತಂದಿತ್ತು ಎಂದು ತಿರುಗೇಟು ನೀಡಿದರು.
ತಮಿಳುನಾಡಿನ ಜನರಿಗಾಗಿ ಅವಮಾನ ಸಹಿಸಿಕೊಳ್ಳಲೂ ಸಿದ್ಧ : ಸಿಎಂ ವಿಜಯ್
ಕರ್ನಾಟಕದೊಂದಿಗೆ ಮಾತುಕತೆ ನಡೆಸುವ ತಮ್ಮ ಪ್ರಸ್ತಾಪವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ವಿಜಯ್, ನೆರೆಯ ರಾಜ್ಯದೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸುವುದು ಅಪರಾಧವಲ್ಲ ಎಂದರು. ಜಗತ್ತಿನಲ್ಲಿ ತೀವ್ರ ಶತ್ರುತ್ವ ಹೊಂದಿರುವ ರಾಷ್ಟ್ರಗಳೇ ಮಾತುಕತೆಯ ಮೂಲಕ ತಮ್ಮ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುತ್ತಿರುವಾಗ, ನಮ್ಮದೇ ನೆರೆಯ ರಾಜ್ಯದೊಂದಿಗೆ ಮಾತುಕತೆ ನಡೆಸುವುದರಲ್ಲಿ ತಪ್ಪೇನಿದೆ? ಬೆಂಗಳೂರು ಭೇಟಿಯಿಂದ ನನಗೆ ಅವಮಾನವಾಗಬಹುದು ಎಂದು ಕೆಲವರು ಹೇಳಿದರು. ತಮಿಳುನಾಡಿನ ಜನರ ಹಿತದೃಷ್ಟಿಗಾಗಿ ಅಂತಹ ನೂರಾರು ಅವಮಾನಗಳನ್ನು ಸಹಿಸಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದರು.
ತಮಿಳುನಾಡು ಸರ್ಕಾರ ಕಾವೇರಿ ಬಿಕ್ಕಟ್ಟನ್ನು ಕಾನೂನಾತ್ಮಕವಾಗಿಯೇ ನಿಭಾಯಿಸಲಿದ್ದು, 1969ರಿಂದ ಅನುಸರಿಸಿಕೊಂಡು ಬಂದಿರುವ ರಾಜತಾಂತ್ರಿಕ ಹಾಗೂ ನ್ಯಾಯಾಂಗ ಮಾರ್ಗವನ್ನೇ ಅನುಸರಿಸಲಿದೆ ಎಂದು ವಿಜಯ್ ಪುನರುಚ್ಚರಿಸಿದರು.
ಮೇಕೆದಾಟು ಯೋಜನೆ ಮತ್ತು ಪ್ರಸ್ತುತ ಸ್ಥಿತಿ
ಕರ್ನಾಟಕದ ರಾಮನಗರ (ಈಗಿನ ಬೆಂಗಳೂರು ದಕ್ಷಿಣ) ಜಿಲ್ಲೆಯ ಬಳಿ ಪ್ರಸ್ತಾವಿತ ಮೇಕೆದಾಟು ಜಲಾಶಯ ಯೋಜನೆಯು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಪ್ರಮುಖ ಗುರಿಯನ್ನು ಹೊಂದಿದೆ. ತಮಿಳುನಾಡಿಗೆ ಹಂಚಿಕೆಯಾದ ಕಾವೇರಿ ನೀರಿನ ಪ್ರಮಾಣದಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದು, ಪರಿಷ್ಕೃತ ಯೋಜನಾ ವರದಿಯನ್ನು (DPR) ಸಲ್ಲಿಸಲು ಕರ್ನಾಟಕ ತಯಾರಿ ನಡೆಸುತ್ತಿದೆ.
ಆದರೆ, ಈ ಯೋಜನೆಯಿಂದ ತಮಿಳುನಾಡಿಗೆ ಸಿಗಬೇಕಾದ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂದು ತಮಿಳುನಾಡು ಆತಂಕ ವ್ಯಕ್ತಪಡಿಸುತ್ತಲೇ ಇದೆ. ಈ ನಡುವೆ, ಮಾತುಕತೆಗಾಗಿ ಸಿಎಂ ವಿಜಯ್ ಅವರ ಬೆಂಗಳೂರು ಭೇಟಿಯನ್ನು ಸದ್ಯದ ಮಟ್ಟಿಗೆ ಮುಂದೂಡುವಂತೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದು, ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ತಿಳಿಯಾದ ಬಳಿಕ ಸೌಹಾರ್ದಯುತ ವಾತಾವರಣದಲ್ಲಿ ಅವರನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.


