ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಬಿಜೆಪಿಯಲ್ಲಿ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹೀಗಿರುವಾಗ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರ ಮುಸ್ಲಿಂ ಅಭಿಮಾನಿಯೊಬ್ಬರು ನೆಕ್ಸ್ಟ್ ಪಿಎಂ ಯೋಗಿ ಎಂದು ಟ್ಯಾಟೋ ಹಾಕಿಸಿಕೊಂಡ ವಿಡಿಯೋ ವೈರಲ್ ಆಗಿದೆ.
ಲಕ್ನೋ (ಸೆ.16): ರಾಜಕೀಯ ನಾಯಕರ ಮೇಲಿನ ಅಭಿಮಾನವನ್ನು ಜನರು ಪೋಸ್ಟರ್, ಬಾವುಟ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ವ್ಯಕ್ತಪಡಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ವಕೀಲರೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲಿನ ತಮ್ಮ ಅತಿಯಾದ ಅಭಿಮಾನವನ್ನು ಪ್ರದರ್ಶಿಸಲು ಇಡೀ ದೇಶವೇ ಬೆರಗಾಗುವಂತಹ ವಿಭಿನ್ನ ಹಾದಿಯನ್ನು ಕಂಡುಕೊಂಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ವಕೀಲರೊಬ್ಬರು ತಮ್ಮ ಎದೆಯ ಮೇಲೆಯೇ ಸಿಎಂ ಯೋಗಿ ಅವರ ಪರವಾದ ಹಚ್ಚೆ (Tattoo) ಹಾಕಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ವಕೀಲರಾಗಿರುವ ತಾಬಿಶ್ ನಿಸಾರ್ (Tabish Nisar) ಎಂಬುವವರೇ ಸಿಎಂ ಯೋಗಿ ಮೇಲಿನ ಅಭಿಮಾನದಿಂದ ಸುದ್ದಿಯಲ್ಲಿರುವವರು. ತಾವು ಯೋಗಿ ಆದಿತ್ಯನಾಥ್ ಅವರ 'ಡೈ-ಹಾರ್ಡ್ ಫ್ಯಾನ್' (Die-hard fan) ಎಂದು ಹೇಳಿಕೊಳ್ಳುವ ನಿಸಾರ್, ತಮ್ಮ ಎದೆಯ ಮೇಲೆ 'ನೆಕ್ಸ್ಟ್ ಪಿಎಂ, ಸಿಎಂ ಸಾಹಬ್ ಮಹಾರಾಜ್ ಜಿ ಯೋಗಿ ಜಿ ಬಿಜೆಪಿ' (Next PM, CM Sahib Maharaj Ji Yogi Ji BJP) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಪ್ರಚಾರಕ್ಕಾಗಿ ಅಲ್ಲ, ಸರ್ಕಾರದ ಕೆಲಸ ಮೆಚ್ಚಿ ಟ್ಯಾಟೂ:
ತಾನು ಯಾವುದೇ ಪ್ರಚಾರಕ್ಕಾಗಿ ಅಥವಾ ಗಿಮಿಕ್‌ಗಾಗಿ ಈ ಟ್ಯಾಟೂ ಹಾಕಿಸಿಕೊಂಡಿಲ್ಲ ಎಂದು ತಾಬಿಶ್ ನಿಸಾರ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತ ವೈಖರಿ ಹಾಗೂ ಸರ್ಕಾರದ ಕೆಲಸಗಳ ಮೇಲಿನ ಮೆಚ್ಚುಗೆಯಿಂದ ತಾವಾಗಿಯೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. 'ಇಂಡಿಯಾ ಟುಡೇ' ವರದಿಯ ಪ್ರಕಾರ, ಯುಪಿ ಸರ್ಕಾರದ ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳು ತಮಗೆ ಬಹಳ ಇಷ್ಟವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯೋಗಿ ಆಡಳಿತದ ಬಗ್ಗೆ ಮುಕ್ತಕಂಠದ ಪ್ರಶಂಸೆ:
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳನ್ನು ಬಿಜ್ನೋರ್‌ನ ಈ ವಕೀಲರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕರ್ಫ್ಯೂ ವಾತಾವರಣವೇ ಇಲ್ಲದಂತಾಗಿದೆ ಎಂದಿರುವ ಅವರು, ಅಪರಾಧಗಳನ್ನು ಹತ್ತಿಕ್ಕುವ ಹಾಗೂ ದಮನ ಮಾಡುವ ಸರ್ಕಾರದ ಶೈಲಿ ತಮಗೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ. ಅಲ್ಲದೆ, ಸರ್ಕಾರದ ಕಲ್ಯಾಣ ಯೋಜನೆಗಳು ಯಾವುದೇ ಜಾತಿ-ಧರ್ಮದ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ನೇರವಾಗಿ ತಲುಪುತ್ತಿವೆ ಎಂದು ನಿಸಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗೆ ಆಡಳಿತ ನೀಡುತ್ತಿರುವ ಆದ್ಯತೆಯನ್ನು ಅವರು ಕೊಂಡಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್:
ತಾಬಿಶ್ ನಿಸಾರ್ ತಮ್ಮ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಅವರ ಹೆಸರು ಮತ್ತು ಮುಂದಿನ ಪ್ರಧಾನಿ ಎಂಬ ಬರಹವಿರುವ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಚರ್ಚೆ ಮುಂದುವರೆದಿದೆ.
ಯೋಗಿ ಆದಿತ್ಯನಾಥ್ ಅವರನ್ನು 'ಮುಂದಿನ ಪ್ರಧಾನಿ' ಎಂದು ಬಣ್ಣಿಸುವ ಈ ಟ್ಯಾಟೂ ನೇರವಾದ ರಾಜಕೀಯ ಸಂದೇಶವನ್ನೂ ರವಾನಿಸುತ್ತಿದೆ. ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಯೋಗಿ ಆದಿತ್ಯನಾಥ್ ಪ್ರಬಲ ನಾಯಕರಾಗಿ ಮುಂದುವರಿದಿದ್ದು, ಈ ಘಟನೆ ಈಗ ಯುಪಿ ರಾಜಕೀಯದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ.


