ಉತ್ತರ ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನಿ ನೌಕಾಪಡೆಯ ಹಡಗು ಭಾರತೀಯ ಯುದ್ಧನೌಕೆಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದಿದೆ. ಈ ಅಪಾಯಕಾರಿ ಕೃತ್ಯವು 1991ರ ದ್ವಿಪಕ್ಷೀಯ ಒಪ್ಪಂದದ ನೇರ ಉಲ್ಲಂಘನೆಯಾಗಿದ್ದು, ಭಾರತವು ಪಾಕಿಸ್ತಾನದ ರಾಯಭಾರಿಗೆ ತೀವ್ರ ಎಚ್ಚರಿಕೆ ನೀಡಿದೆ.
ಉತ್ತರ ಅರೇಬಿಯನ್ ಸಮುದ್ರದ ಅಂತರರಾಷ್ಟ್ರೀಯ ಜಲ ಗಡಿಪ್ರದೇಶದಲ್ಲಿ ಪಾಕಿಸ್ತಾನಿ ನೌಕಾಪಡೆಯು ಅತ್ಯಂತ ಅಪಾಯಕಾರಿ ಹಾಗೂ ವೃತ್ತಿಪರತೆ ಇಲ್ಲದ ರೀತಿಯಲ್ಲಿ ವರ್ತಿಸಿದೆ. ಭಾರತೀಯ ಯುದ್ಧನೌಕೆಗೆ ತನ್ನ ಹಡಗಿನಿಂದ ಪಾಕಿಸ್ತಾನ ಢಿಕ್ಕಿ ಹೊಡೆಸಿದೆ. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಪಾಕಿಸ್ತಾನದ ಉನ್ನತ ರಾಯಭಾರಿ ಚಾರ್ಜ್ ಡಿ ಅಫೇರ್ಸ್ ಅವರನ್ನು ಕರೆಸಿ ಎಚ್ಚರಿಕೆ ಮತ್ತು ದೂರು ನೀಡಿದೆ.
ಘಟನೆ ನಡೆದಿದ್ದು ಯಾವಾಗ? ಹೇಗೆ?
ಸೆಪ್ಟೆಂಬರ್ 15ರ ಸಂಜೆ ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆಯೊಂದು ಉತ್ತರ ಅರೇಬಿಯನ್ ಸಮುದ್ರದಲ್ಲಿ ನಿಗದಿತ ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ.
ಜುಲೈ 2024 ರಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪಾಕಿಸ್ತಾನ ನೌಕಾಪಡೆಯ ಕಡಲಾಚೆಯ ಗಸ್ತು ಹಡಗು 'ಪಿಎನ್‌ಎಸ್ ಹುನೈನ್' ಭಾರತೀಯ ಯುದ್ಧನೌಕೆಯನ್ನು ರಹಸ್ಯವಾಗಿ ಹಿಂಬಾಲಿಸಿತು. ಅಂತರರಾಷ್ಟ್ರೀಯ ಕಡಲ ರೇಡಿಯೋ ಚಾನೆಲ್ 16ರ ಮೂಲಕ ಭಾರತೀಯ ನೌಕಾಪಡೆ ಸಾಲು ಸಾಲು ಎಚ್ಚರಿಕೆಗಳನ್ನು ನೀಡಿದರೂ, ಪಾಕಿಸ್ತಾನಿ ನೌಕೆ ಲಕ್ಷಿಸದೆ ವೇಗವನ್ನು ಹೆಚ್ಚಿಸಿತು.
ಅತ್ಯಂತ ವೇಗವಾಗಿ ಬಂದ ಪಿಎನ್‌ಎಸ್ ಹುನೈನ್, ಭಾರತೀಯ ಯುದ್ಧನೌಕೆಯ ಕಡೆಗೆ ಹಠಾತ್ತನೆ ತಿರುಗಿ ಅದರ ತುದಿ (Bow) ಭಾಗಕ್ಕೆ ಢಿಕ್ಕಿ ಹೊಡೆಯಿತು. ಆದರೆ, ಭಾರತೀಯ ಸಿಬ್ಬಂದಿಯ ಜಾಗರೂಕತೆಯಿಂದಾಗಿ ಭಾರತೀಯ ಯುದ್ಧನೌಕೆಗೆ ಯಾವುದೇ ರಚನಾತ್ಮಕ ಹಾನಿಯಾಗಲಿ ಅಥವಾ ನೌಕಾ ಸಿಬ್ಬಂದಿಗೆ ಗಾಯಗಳಾಗಲಿ ಸಂಭವಿಸಿಲ್ಲ. ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಂದುವರಿಸಲಾಯಿತು.
1991ರ ದ್ವಿಪಕ್ಷೀಯ ಒಪ್ಪಂದದ ನೇರ ಉಲ್ಲಂಘನೆ
ಪಾಕಿಸ್ತಾನಿ ಹಡಗಿನ ಈ ಕೆಟ್ಟ ವರ್ತನೆಯು 1991ರ ಏಪ್ರಿಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ 'ಮಿಲಿಟರಿ ಅಭ್ಯಾಸಗಳು ಹಾಗೂ ಪಡೆಗಳ ಚಲನವಲನದ ಮುಂಗಡ ಸೂಚನೆ' ಒಪ್ಪಂದದ ವಿಧಿ 10 ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ವಿದೇಶಾಂಗ ಸಚಿವಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಒಪ್ಪಂದದ ವಿಧಿ 10 ಏನು ಹೇಳುತ್ತದೆ?
ಅಂತರರಾಷ್ಟ್ರೀಯ ಜಲಗಡಿಯಲ್ಲಿ ಕಾರ್ಯನಿರ್ವಹಿಸುವಾಗ ಯಾವುದೇ ಅಪಘಾತಗಳನ್ನು ತಡೆಯಲು ಭಾರತ ಮತ್ತು ಪಾಕಿಸ್ತಾನದ ನೌಕಾ ಹಡಗುಗಳು ಹಾಗೂ ಜಲಾಂತರ್ಗಾಮಿಗಳು ಪರಸ್ಪರ ಕನಿಷ್ಠ 3 ನಾಟಿಕಲ್ ಮೈಲುಗಳಷ್ಟು (ಸುಮಾರು 5.6 ಕಿ.ಮೀ) ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಇಂತಹ ಘಟನೆಗಳು ಭವಿಷ್ಯದಲ್ಲಿ ಪುನರಾವರ್ತನೆಯಾಗದಂತೆ ತನ್ನ ಎಲ್ಲಾ ಮಿಲಿಟರಿ ಘಟಕಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಭಾರತವು ಇಸ್ಲಾಮಾಬಾದ್‌ನಲ್ಲಿರುವ ತನ್ನ ರಾಜತಾಂತ್ರಿಕ ಅಧಿಕಾರಿಗಳ ಮೂಲಕವೂ ಪಾಕಿಸ್ತಾನದ ವಿದೇಶಾಂಗ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಪತ್ರಬರೆದಿದೆ.
ಕಳೆದ ಆರು ತಿಂಗಳಿನಲ್ಲಿ ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನದ ಪಡೆಗಳು ಕಡಲ್ ಕಳ್ಳತನ ವಿರೋಧಿ ಪಡೆಯಲ್ಲಿದ್ದ ಭಾರತೀಯ ನೌಕೆಗಳ ಬಳಿ ಈ ರೀತಿಯ ಅಪಾಯಕಾರಿ ಸಾಹಸಕ್ಕೆ ಕೈಹಾಕುತ್ತಿರುವುದು ಇದು ಎರಡನೇ ಬಾರಿಯಾಗಿದೆ.
2011ರ ಹಳೆಯ ಘಟನೆಯ ನೆನಪು
ಅಂತರರಾಷ್ಟ್ರೀಯ ಜಲಸಂಪನ್ಮೂಲದಲ್ಲಿ ಪಾಕಿಸ್ತಾನ ಇಂತಹ ಬೇಜವಾಬ್ದಾರಿ ತಂತ್ರಗಳನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲೇನಲ್ಲ. 2011ರಲ್ಲಿ ಏಡನ್ ಕೊಲ್ಲಿಯಲ್ಲಿ ಸೋಮಾಲಿ ಕಡಲ್ಗಳ್ಳರಿಂದ ಬಿಡುಗಡೆಯಾಗಿದ್ದ ಎಂವಿ ಸೂಯೆಜ್ ಹಡಗಿಗೆ ಬೆಂಗಾವಲಾಗಿ ನಿಂತಿದ್ದ ಭಾರತದ 'ಐಎನ್‌ಎಸ್ ಗೋದಾವರಿ' ಯುದ್ಧನೌಕೆಯನ್ನು, ಪಾಕಿಸ್ತಾನದ 'ಪಿಎನ್‌ಎಸ್ ಬಾಬರ್' ಅತ್ಯಂತ ಹತ್ತಿರದಿಂದ ವೇಗವಾಗಿ ದಾಟಿ ಹೋಗುವಾಗ ಢಿಕ್ಕಿಯಾಗಿ ಭಾರತೀಯ ನೌಕೆಯ ಫ್ಲೈಟ್ ಡೆಕ್ ನೆಟ್‌ಗೆ ಹಾನಿ ಉಂಟಾಗಿತ್ತು. ಅಂದೂ ಕೂಡ ಭಾರತವು ವಿಡಿಯೋ ಹಾಗೂ ಛಾಯಾಚಿತ್ರ ಸಾಕ್ಷ್ಯಗಳೊಂದಿಗೆ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಮತ್ತೆ ಇದೇ ರೀತಿಯಲ್ಲಿ ಪಾಕಿಸ್ತಾನ ಕುತಂತ್ರ ಬುದ್ದಿ ತೋರಿದೆ.


