ಉಜ್ಜಯಿನಿ ಜಿಲ್ಲೆಯ ಚೋಪ್ರಾ ಗ್ರಾಮದ 700 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಗಣೇಶನ ಮೂರ್ತಿಯಿಂದ ಕಣ್ಣೀರು ಬಂದಿರುವ ಘಟನೆ ನಡೆದಿದೆ. ಸತತ ಎಂಟು ಗಂಟೆಗಳ ಕಾಲ ಕಣ್ಣೀರು ಹರಿದಿದ್ದು, ಭಕ್ತರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ. ಗ್ರಾಮಸ್ಥರು ಪೂಜೆ ಸಲ್ಲಿಸಿ ಕ್ಷಮೆ ಕೇಳಿದ ನಂತರವಷ್ಟೇ ಕಣ್ಣೀರು ನಿಂತಿದೆ.
ಉಜ್ಜಯಿನಿ: ಈಗ ಎಲ್ಲೆಲ್ಲೂ ಗಣೇಶನ ಹಬ್ಬದ ಸಂಭ್ರಮ. ಮೊನ್ನೆ ಮಂಗಳವಾರದಿಂದ ಹಬ್ಬ ನಡೆಯುತ್ತಿದ್ದು, ಇನ್ನೂ ಕೆಲವು ದಿನಗಳವರೆಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಭಕ್ತಾದಿಗಳು ಹಬ್ಬವನ್ನು ಆಚರಿಸುತ್ತಾರೆ. ಆದರೆ ಗಣೇಶ ಚತುರ್ಥಿಗೆ ಮುನ್ನ, ಕಳೆದ ಶನಿವಾರ, ಉಜ್ಜಯಿನಿ ಜಿಲ್ಲೆಯ ತಾಜ್‌ಪುರ ತಹಸಿಲ್‌ನಲ್ಲಿರುವ ಮಾತಾಜಿಯ ಚೋಪ್ರಾ ಗ್ರಾಮದಲ್ಲಿರುವ ಗಣೇಶ ಮೂರ್ತಿಯೊಂದು ಕಣ್ಣೀರು ಹಾಕಿರುವುದಾಗಿ ಹೇಳಲಾಗುತ್ತಿದ್ದು, ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರ ವಿಡಿಯೋ ಭಕ್ತರಲ್ಲಿ ಆತಂಕ ಉಂಟು ಮಾಡುತ್ತಿದೆ.
ಕಳೆದ ಶನಿವಾರ ಬೆಳಿಗ್ಗೆಯಿಂದ ಸುಮಾರು ಎಂಟು ಗಂಟೆಗಳ ಕಾಲ ಈ ಘಟನೆ ನಡೆದಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಈ ಸುದ್ದಿ ಹರಡುತ್ತಿದ್ದಂತೆ, ಹತ್ತಿರದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ದೇವಾಲಯದಲ್ಲಿ ನಡೆಯುತ್ತಿರುವ ಈ ಅಚ್ಚರಿಯನ್ನು ನೋಡಲು ಧಾವಿಸಿ ಬರುತ್ತಿದ್ದಾರೆ. ವಿಗ್ರಹದ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿರುವುದನ್ನು ಕಾಣಬಹುದು ಎನ್ನುತ್ತಿದ್ದಾರೆ ಗ್ರಾಮಸ್ಥರು. ಗಣೇಶನ ಕಣ್ಣಿನಿಂದ ಸುಮಾರು ಎಂಟು ಗಂಟೆಗಳ ನೀರು ಬರುತ್ತಿತ್ತು ಎನ್ನಲಾಗಿದೆ. ಬಳಿಕ ಗ್ರಾಮಸ್ಥರು ಸೇರಿ ನಗರ ಪೂಜೆ ನಡೆಸಿದ ಬಳಿಕ ಕಣ್ಣೀರು ನಿಂತಿತು ಎಂದು ಹೇಳಲಾಗುತ್ತಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.
ಮಹಾ ಆರತಿ ಮಾಡುತ್ತಿದ್ದ ಭಕ್ತರು
ಗಣೇಶನ ಕಣ್ಣೀರಿನ ಸುದ್ದಿ ಕೇಳಿ ಗ್ರಾಮದಲ್ಲಿ ಭಕ್ತರ ದೊಡ್ಡ ಗುಂಪು ಸೇರಿತ್ತು. ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಲು ಜನರು ಆಗಮಿಸಿದರು. ಸ್ಥಳದಲ್ಲಿಯೇ ಭಕ್ತರು ಮಹಾ ಆರತಿಯನ್ನೂ ನಡೆಸಿದರು. ವಿಗ್ರಹದ ಕಣ್ಣೀರಿನ ಬಗ್ಗೆ ಮಾಹಿತಿ ಪಡೆದ ನಂತರ, ಸುತ್ತಮುತ್ತಲಿನ ಪ್ರದೇಶಗಳ ಜನರು ಸಹ ಪೂಜೆ ಸಲ್ಲಿಸಲು ಆಗಮಿಸಿದರು. ಈ ದೇವಾಲಯವು ಸುಮಾರು 700 ರಿಂದ 800 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ.
ಆಗಿದ್ದೇನು?
ಎರಡು ದಿನಗಳ ಹಿಂದೆ ನಗರದ ಎಲ್ಲಾ ದೇವಾಲಯಗಳಿಗೆ ವಸ್ತ್ರಗಳನ್ನು ಅರ್ಪಿಸಲಾಗುತ್ತಿತ್ತು, ಆದರೆ ಭಕ್ತರು ಈ ದೇವಾಲಯದಲ್ಲಿ ವಸ್ತ್ರಗಳನ್ನು ಅರ್ಪಿಸಿರಲಿಲ್ಲ. ಈ ಹಿನ್ನೆಲೆಯಲ್ಲಿಇಂಥದ್ದೊಂದು ಘಟನೆ ನಡೆದಿದೆ ಎನ್ನಲಾಗಿದೆ. ಕೊನೆಗೆ ಜನರು ಪೂಜೆ ಸಲ್ಲಿಸಿ ತಮ್ಮನ್ನು ಕ್ಷಮಿಸುವಂತೆ ಗಣಪತಿಯಲ್ಲಿ ಕೇಳಿದ ಬಳಿಕ ಕಣ್ಣೀರು ನಿಂತಿದೆ ಎಂದು ಹೇಳಲಾಗುತ್ತಿದೆ.


