ಒಡಿಶಾದ ಬಾಲಾಸೋರ್ ಬಳಿ ರಕ್ಷಿಸಲ್ಪಟ್ಟ ಐದು ಅಪರೂಪದ ಒರಾಂಗುಟಾನ್ ಮರಿಗಳನ್ನು ನಂದನಕಾನನ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ತೀವ್ರ ಆತಂಕದಲ್ಲಿರುವ ಈ ಮರಿಗಳಿಗೆ ಸಂಗೀತ ಚಿಕಿತ್ಸೆ ಸೇರಿದಂತೆ ವಿಶೇಷ ಆರೈಕೆ ನೀಡಲಾಗುತ್ತಿದ್ದು, ಇವುಗಳ ಆಗಮನದ ಹಿಂದೆ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲದ ಶಂಕೆ ವ್ಯಕ್ತವಾಗಿದೆ.

ಒಡಿಶಾ ರಾಜ್ಯದ ಬಾಲಾಸೋರ್ ಜಿಲ್ಲೆಯ ಭೋಗ್ರೈ ಬ್ಲಾಕ್‌ನಲ್ಲಿರುವ ವಿಚಿತ್ರಪುರ ಮ್ಯಾಂಗ್ರೂವ್ ಅಭಯಾರಣ್ಯದ ಸಮೀಪವಿರುವ ಗಾಳಿಮರ ನೆಡುತೋಪಿನಲ್ಲಿ ಇತ್ತೀಚೆಗೆ ಐದು ಅಪರೂಪದ ಒರಾಂಗುಟಾನ್ (ನರವಾನರ) ಮರಿಗಳನ್ನು ರಕ್ಷಿಸಲಾಗಿದೆ. ಭುವನೇಶ್ವರ-ಕೋಲ್ಕತ್ತ ಹೆದ್ದಾರಿಯ ಬಳಿ ಪತ್ತೆಯಾದ ಈ ಮರಿಗಳನ್ನು ತಕ್ಷಣವೇ ಖೋರ್ದಾ ಜಿಲ್ಲೆಯ ಪ್ರಸಿದ್ಧ ‘ನಂದನಕಾನನ’ ಮೃಗಾಲಯಕ್ಕೆ ರವಾನಿಸಲಾಗಿದ್ದು, ಸದ್ಯ ಅಲ್ಲಿನ ತಜ್ಞ ಪಶುವೈದ್ಯರ ಉಸ್ತುವಾರಿಯಲ್ಲಿ ವಿಶೇಷ ಆರೈಕೆ ನೀಡಲಾಗುತ್ತಿದೆ.

ಆತಂಕ ಹಾಗೂ ಬದಲಾಗುತ್ತಿರುವ ವರ್ತನೆ

ಸಾಮಾನ್ಯವಾಗಿ ಮಲೇಷ್ಯಾ, ಇಂಡೊನೇಷ್ಯಾ ಮತ್ತು ಬೋರ್ನಿಯೊ ದ್ವೀಪಗಳ ದಟ್ಟ ಮಳೆಕಾಡುಗಳಲ್ಲಿ ಮಾತ್ರ ಕಂಡುಬರುವ ಈ ಜೀವಿಗಳ ವರ್ತನೆಯಲ್ಲಿ ಈಗ ವಿಚಿತ್ರ ವ್ಯತ್ಯಾಸಗಳು ಗೋಚರಿಸುತ್ತಿವೆ. ಮೃಗಾಲಯದ ಪ್ರತ್ಯೇಕವಾಸದಲ್ಲಿರುವ ಮರಿಗಳು ಕೆಲವೊಮ್ಮೆ ಅತ್ಯಂತ ಉತ್ಸಾಹದಿಂದ ಆಟವಾಡುತ್ತಿದ್ದರೆ, ಮರುಕ್ಷಣವೇ ತೀವ್ರ ಆತಂಕಕ್ಕೆ ಒಳಗಾಗುತ್ತಿವೆ. ಭಯಗೊಂಡ ತಕ್ಷಣವೇ ಒಂದನ್ನೊಂದು ಗಟ್ಟಿಯಾಗಿ ಅಪ್ಪಿಕೊಂಡು ಕುಳಿತುಕೊಳ್ಳುವ ಚಿತ್ರಣ ಕಂಡುಬರುತ್ತಿದೆ. "ಈ ಮರಿಗಳು ಹೊರನೋಟಕ್ಕೆ ಆರಾಮವಾಗಿ ಕಂಡರೂ, ತಾಯಿಯಿಂದ ಪ್ರತ್ಯೇಕಗೊಂಡಿರುವುದರಿಂದ ತೀವ್ರ ಸ್ವರೂಪದ ಭಾವನಾತ್ಮಕ ಒತ್ತಡ ಹಾಗೂ ಆತಂಕವನ್ನು ಎದುರಿಸುತ್ತಿರಬಹುದು" ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶೇಷ ಆರೈಕೆ ಮತ್ತು ಒತ್ತಡ ನಿರ್ವಹಣೆಯ ಕ್ರಮಗಳು

ಮರಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲ್ವಿಚಾರಣೆಗಾಗಿ ಪಶುವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು, ಅವುಗಳ ನಿರಾತಂಕ ವಾತಾವರಣಕ್ಕಾಗಿ ಮೃಗಾಲಯ ಆಡಳಿತ ಮಂಡಳಿಯು ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಮರಿಗಳನ್ನು ಕ್ವಾರಂಟೈನ್‌ (ಪ್ರತ್ಯೇಕವಾಸ) ವಿಭಾಗದಲ್ಲಿ ಇರಿಸಲಾಗಿದ್ದು, ನೈಸರ್ಗಿಕ ವಿಟಮಿನ್ ಡಿ ಪೂರೈಕೆಗಾಗಿ ಬೆಳಗಿನ ಎಳೆಯ ಬಿಸಿಲಿಗೆ ಒಡ್ಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ ಆಹಾರವಾಗಿ ಹಾಲು, ಬೇಯಿಸಿ ಹಿಸುಕಿದ ಸೇಬು ಹಣ್ಣು ಮತ್ತು ಬಾಳೆಹಣ್ಣುಗಳನ್ನು ನೀಡಲಾಗುತ್ತಿದೆ. ಪ್ರತ್ಯೇಕವಾಸದ ಆವರಣದಲ್ಲಿ ಮರಿಗಳಿಗೆ ಮಾನಸಿಕ ಚಟುವಟಿಕೆ ನೀಡಲು ಉಯ್ಯಾಲೆಗಳನ್ನು ಅಳವಡಿಸಲಾಗಿದ್ದು, ಆಟಿಕೆಗಳ ಜೊತೆ ಕಾಲ ಕಳೆಯಲು ಅನುಕೂಲ ಮಾಡಿಕೊಡಲಾಗಿದೆ.

ಶಾಸ್ತ್ರೀಯ ಸಂಗೀತ ಥೆರಪಿ

ಆತಂಕವನ್ನು ತಗ್ಗಿಸಿ, ಪ್ರಕೃತಿದತ್ತ ಹಿತಕರ ವಾತಾವರಣವನ್ನು ಸೃಷ್ಟಿಸಲು ಶಾಸ್ತ್ರೀಯ ಸಂಗೀತವನ್ನು ಪ್ರಸಾರ ಮಾಡಲಾಗುತ್ತಿದೆ. ತಜ್ಞರ ಸಲಹೆಯಂತೆ ಈ ಸಂಗೀತ ಚಿಕಿತ್ಸೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಮೃಗಾಲಯದ ಉಪ ನಿರ್ದೇಶಕ ಪ್ರದೀಪ್ ಮಿರಾಸೆ ಸ್ಪಷ್ಟಪಡಿಸಿದ್ದಾರೆ. ಪಶುವೈದ್ಯರು ಮರಿಗಳ ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಶೀಘ್ರದಲ್ಲೇ ಅವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಲಿವೆ ಎಂದು ಮೃಗಾಲಯದ ನಿರ್ದೇಶಕರಾದ ಎನ್. ಸನತ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಕಂಡುಬರದ ಅಪರೂಪದ ಪ್ರಾಣಿಗಳು

ಭಾರತದ ನೈಸರ್ಗಿಕ ವಾಸಸ್ಥಾನದಲ್ಲಿ ಕಂಡುಬರದ ಈ ಪ್ರಾಣಿಗಳು ರಾಜ್ಯಕ್ಕೆ ಹೇಗೆ ಬಂದವು ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದ್ದು, ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸ್‌ನ ವಿಶೇಷ ಕಾರ್ಯಪಡೆ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಜಂಟಿ ತನಿಖೆ ಆರಂಭಿಸಿವೆ. ರಕ್ಷಿಸಲ್ಪಟ್ಟ 5 ಒರಾಂಗುಟನ್‌ಗಳಲ್ಲಿ 3 ಗಂಡು ಹಾಗೂ 2 ಹೆಣ್ಣು ಮರಿಗಳಿದ್ದು, ಇವುಗಳ ವಯಸ್ಸು 6 ತಿಂಗಳಿಂದ 1 ವರ್ಷದ ಒಳಗಿದೆ. ಇವುಗಳನ್ನು ಭುವನೇಶ್ವರದ ಪ್ರಸಿದ್ಧ ನಂದನಕಾನನ ಮೃಗಾಲಯದಲ್ಲಿಯೇ ಉಳಿಸಿಕೊಳ್ಳಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಮನವಿ ಮಾಡಿದೆ.

ಕಪ್ಪು ಥಾರ್ ಸಂಶಯಾಸ್ಪದ ಓಡಾಟ:

ಸೋಮವಾರ ರಾತ್ರಿ ಘಟನಾ ಸ್ಥಳದ ಸಮೀಪ ಕಪ್ಪು ಬಣ್ಣದ ಮಹೀಂದ್ರಾ ಥಾರ್ ಎಸ್‌ಯುವಿ ವಾಹನವೊಂದು ಸಂಶಯಾಸ್ಪದವಾಗಿ ಸಂಚರಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಾಹನದ ಚಲನವಲನ ಹಾಗೂ ಅದರ ಮಾಲೀಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಪರೂಪದ ಒರಾಂಗುಟನ್‌ಗಳನ್ನು ಇದೇ ವಾಹನದಲ್ಲಿ ತಂದು ಬಿಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಅಂತಾರಾಷ್ಟ್ರೀಯ ಜಾಲದ ಶಂಕೆ:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಒರಾಂಗುಟನ್ ಬೆಲೆ 20-25 ಲಕ್ಷ ರು.ನಷ್ಟಿದೆ. ಇವು ಮೂಲತಃ ಮಲೇಷ್ಯಾ ಮತ್ತು ಇಂಡೋನೇಷ್ಯಾದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತವೆ. ವಿಮಾನ, ಹಡಗು ಅಥವಾ ರೈಲು ಮಾರ್ಗವಾಗಿ ಇವುಗಳನ್ನು ಭಾರತಕ್ಕೆ ತಂದಿರುವ ಸಾಧ್ಯತೆಯಿದ್ದು, ತನಿಖೆಗಾಗಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ರೈಲ್ವೆ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.