ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ಪಕ್ಷದ ಪ್ರತಿಭಟನೆಗೆ 35 ದಿನಗಳ ಕಾಲ ಉಚಿತ ಆಹಾರ ನೀಡಿದ್ದ ಮೊಹಮ್ಮದ್ ಜುನೈದ್, ಇದೀಗ ಕಣ್ಣೀರು ಹಾಕಿದ್ದಾರೆ. ಪ್ರತಿಭಟನೆ ಯಶಸ್ವಿಯಾದ ಬಳಿಕ ನಾಯಕರು ಸ್ಟಾರ್ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದು, ತಮಗೆ ಸಹಾಯ ಮಾಡಿದ ಜುನೈದ್‌ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಮೆರಿಕದಿಂದ ಭಾರತವನ್ನು ಉದ್ಧಾರ ಮಾಡಲು ಬಂದ ಅಭಿಜೀತ್​ ದೀಪ್ಕೆ ಮತ್ತು ಅವರ ಸಿಜೆಪಿ ಪಕ್ಷದ ಜಿರಳೆಗಳು ಕೊನೆಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಪಡೆದದ್ದು ಆಯಿತು. ಪ್ರತಿಭಟನೆಯ ವೇಳೆ ಕಲ್ಲು ತೂರಾಟ, ವಿದೇಶಿ ಬಾವುಟಗಳ ಪ್ರದರ್ಶನ, ಖಲೀಸ್ತಾನಿಗಳು, ಪಾಕಿಸ್ತಾನದಿಂದ ಭಾರಿ ಬೆಂಬಲ... ಇವೆಲ್ಲವುಗಳ ನಡುವೆಯೂ ದೆಹಲಿಯ ಜಂತರ್​ಮಂತರ್​ನಲ್ಲಿ ಯಶಸ್ವಿಯಾಗಿ ಪ್ರತಿಭಟನೆ ಮುಗಿಸಿದ ಜಿರಳೆಗಳು, ಬಳಿಕ ಸ್ಟಾರ್​ ಹೋಟೆಲ್​ನಲ್ಲ ಭರ್ಜರಿ ಪಾರ್ಟಿ ಮಾಡಿದ್ದು ಆಯತು. ಪಾರ್ಟಿಯ ಗಮ್ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಪಾರ್ಟಿಗೆ ಖರ್ಚಾದ ಲಕ್ಷಾಂತರ ರೂಪಾಯಿ ಕೊಟ್ಟವರುಯಾರು ಎನ್ನುವ ಬಗ್ಗೆ ಜೋರಾಗಿ ಚರ್ಚೆ ಶುರುವಾಗಿದೆ.

ಉಚಿತ ನೀರು, ಆಹಾರ

ಅದರ ನಡುವೆಯೇ, ಪ್ರತಿಭಟನೆಯ ಸಮಯದಲ್ಲಿ ಸತತ 35 ದಿನ, ಪ್ರತಿಭಟನಾಕಾರರಿಗೆ ಊಟವನ್ನು ನೀಡಿದವರು ಮೊಹಮ್ಮದ್​ ಜುನೈದ್​.ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಿರಂತರ 35 ದಿನಗಳ ಕಾಲ ಉಚಿತ ಆಹಾರ ಮತ್ತು ನೀರು ಪೂರೈಸಿ ಸುದ್ದಿಯಲಿದ್ದಾರೆ ಗಾಜಿಯಾಬಾದ್​ನ ಮೊಹಮ್ಮದ್​. ಕೊನೆಗೆ ಇವರ ಮನೆಯ ಮೇಲೆ ದಾಳಿ ನಡೆದಿದೆ ಎನ್ನುವ ಸುಳ್ಳು ಆಪಾದನೆಯನ್ನೂ ಹೊರಿಸಲಾಯಿತು. ಕೊನೆಗೆ ಸತ್ಯಾಂಶ ಹೊರಬಂದು ಅಂಥದ್ದು ಏನೂ ನಡೆದಿಲ್ಲ ಎನ್ನುವುದು ತಿಳಿಯಿತು. ಅಷ್ಟಕ್ಕೂ ಈ ಸುಳ್ಳು ಸುದ್ದಿ ಹರಡಿದ್ದು, ಇದೇ ಜಿರಳೆಗಳ ಪರ ನಿಂತಿರುವ ಪಾಕಿಸ್ತಾನದ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ಗಳು ಎನ್ನುವುದು ತಿಳಿಯಿತು.

ಆದರೆ, ಇದೀಗ ಅತ್ತ ಸ್ಟಾರ್​ ಹೋಟೆಲ್​ನಲ್ಲಿ ಭರ್ಜರಿ ಪಾರ್ಟಿ ಮಾಡುತ್ತಿದ್ದರೆ, ಇತ್ತ 35 ದಿನಗಳ ಕಾಲ ಉಚಿತ ಆಹಾರ-ನೀರು ನೀಡಿದ್ದ ಮೊಹಮ್ಮದ್​ ಜುನೈದ್​ ಕಣ್ಣೀರು ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಬಂದಿರುವ ಅವರು, ಅಂದು ನಾನು ಅವರಿಗೆ ಆಹಾರ ನೀಡಿದೆ. ಇಂದು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್​ ದೀಪ್ಕೆ, ಪ್ರತಿಭಟನೆ ಮುಗಿದ ಬಳಿಕ ನನ್ನತ್ತ ಕಣ್ಣು ಕೂಡ ಹಾಯಿಸಿಲ್ಲ ಎಂದು ಗಳಗಳನೆ ಅತ್ತಿದ್ದಾರೆ.

ಅಂದು ಹೇಳಿದ್ದೇನು?

ಪ್ರತಿಭಟನಾಕಾರರಿಗೆ ಉಚಿತ ಆಹಾರ ಮತ್ತು ನೀರು ವಿತರಿಸುತ್ತಿದ್ದ ಸಮಯದಲ್ಲಿ, ದೆಹಲಿ ಪೊಲೀಸರು ಎಂದು ಹೇಳಿಕೊಂಡ ಕೆಲವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಇದೇ ಜುನೈದ್​ ಆರೋಪಿಸಿದ್ದರು. ಜುಲೈ 24ರ ರಾತ್ರಿ ಸುಮಾರು 10:50ರ ಸುಮಾರಿಗೆ ನನಗೆ ನಾಯಿ ಕಚ್ಚಿತ್ತು. ಚಿಕಿತ್ಸೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ತೆರಳಿ, ರಾತ್ರಿ 12:10ರ ವೇಳೆಗೆ ವಾಪಸ್ ಆಟೋದಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ನಾನು 50-60 ಮೀಟರ್ ದೂರ ಹೋಗುತ್ತಿದ್ದಂತೆ ಕೆಲವು ವಾಹನಗಳು ನಮ್ಮನ್ನು ತಡೆದವು. ನಮ್ಮನ್ನು ಕೊಲ್ಲಲು ಬಂದಿದ್ದಾರೆ ಎಂದೇ ನಾವು ಭಯಪಟ್ಟಿದ್ದೆವು. ಆದರೆ ಅವರು ತಾವು ದೆಹಲಿ ಪೊಲೀಸರು ಎಂದು ಹೇಳಿಕೊಂಡರು. ನಂತರ ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋದರು. ಇಡೀ ರಾತ್ರಿ ನಮ್ಮನ್ನು ಅಲ್ಲಿಯೇ ಕೂರಿಸಿದ್ದರು ಎಂದು ಜುನೈದ್ ಅಳಲು ತೋಡಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ತಾವು ಮಾಡಿರುವುದು ತಪ್ಪೆಂದು ಗೊತ್ತಾಗಿದೆ, ಆಹಾರ ವಿತರಿಸಿದವರೇ ಉಲ್ಟಾ ಹೊಡೆದರು ಎಂದು ಕಣ್ಣೀರು ಹಾಕಿದ್ದಾರೆ.