ಬೆಳಗ್ಗೆ ಅಕ್ಕನ ಮನೆಗೆ ಹೋಗಿ ಖುಷಿ ಖುಷಿಯಾಗಿ ರಾಖಿ ಕಟ್ಟಿಸಿಕೊಂಡು ಬಂದಿದ್ದ. ಸಂಜೆ ವೇಳೆಗೆ ಅದೇ ಅಕ್ಕನಿಗೆ ಶಾಕಿಂಗ್ ಮೆಸೇಜ್ ಒಂದು ಬಂದಿತ್ತು. ಮಮತೆಯ ತೊಟ್ಟಿಲಾಗಿದ್ದ ಅಕ್ಕನಿಗೆ ರಕ್ಷಾ ಬಂಧನ್ ದಿನವೇ ತಮ್ಮ ಮರೆಯಲಾಗದ ನೆನಪನ್ನು ಕೊಟ್ಟು ಹೋಗಿದ್ದಾನೆ.
ಜಲಗಾಂವ್ (ಮಹಾರಾಷ್ಟ್ರ) : "ಹ್ಯಾಪಿ ರಕ್ಷಾಬಂಧನ್ ದೀದಿ... ದಯವಿಟ್ಟು ಅಮ್ಮ ಮತ್ತು ಅಪ್ಪನನ್ನು ಒಬ್ಬಂಟಿಯಾಗಿ ಬಿಡಬೇಡ.. ಇವು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕೊನೆಯ ಕ್ಷಣಗಳಲ್ಲಿ ಅಕ್ಕನಿಗೆ ಕಳುಹಿಸಿದ ಕಣ್ಣೀರು ತರಿಸುವ ಭಾವನಾತ್ಮಕ ಸಂದೇಶಗಳು. ರಕ್ಷಾಬಂಧನ ಹಬ್ಬದಂದೇ ಯುವಕ ನೇಣು ಬಿಗಿದುಕೊಂಡು ಬದುಕಿನ ಪಯಣವನ್ನು ಮುಗಿಸಿದ್ದಾನೆ.
ಅಕ್ಕನಿಂದ ರಾಖಿ ಕಟ್ಟಿಸಿಕೊಂಡು ಮನೆಗೆ ಮರಳಿದ್ದ
ಮೃತ ವಿದ್ಯಾರ್ಥಿಯನ್ನು ರೋಹಿತ್ ಸಾಹೇಬ್ರಾವ್ ಧಂಗರ್ (17) ಎಂದು ಗುರುತಿಸಲಾಗಿದೆ. ಈತ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ರಕ್ಷಾಬಂಧನದ ಶುಭ ದಿನದಂದು ರೋಹಿತ್ ತನ್ನ ತಂದೆಯೊಂದಿಗೆ ಅಕ್ಕನ ಮನೆಗೆ ಭೇಟಿ ನೀಡಿ ಕೈಗೆ ರಾಖಿ ಕಟ್ಟಿಸಿಕೊಂಡು ಅತ್ಯಂತ ಖುಷಿಯಿಂದ ಮನೆಗೆ ಮರಳಿದ್ದ.
ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಸ್ಟೇಟಸ್
ಮನೆ ತಲುಪಿದ ನಂತರ ರೋಹಿತ್ ತನ್ನ ಅಕ್ಕನೊಂದಿಗೆ ರಾಖಿ ಕಟ್ಟಿಸಿಕೊಂಡ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದನು. ಫೋಟೋದೊಂದಿಗೆ, ಎಲ್ಲವನ್ನೂ ಜಾಗ್ರತೆಯಾಗಿ ನೋಡಿಕೋ ದೀದಿ. ಅಮ್ಮ ಮತ್ತು ಅಪ್ಪನನ್ನು ಒಬ್ಬಂಟಿಯಾಗಿ ಬಿಡಬೇಡ. ನಾನು ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದ. ಮತ್ತೊಂದು ಸ್ಟೇಟಸ್‌ನಲ್ಲಿ ಆತ, ಮುಂದಿನ ಬಾರಿ ನಾನು ಮರಳಿ ಬಂದಾಗ, ಎಲ್ಲರ ಅತ್ಯಂತ ಪ್ರೀತಿಯವನಾಗುತ್ತೇನೆ. ಈಗ ಉಳಿದಿರುವ ಕಲೆಗಳನ್ನು ಅಳಿಸಿಹಾಕುತ್ತೇನೆ. ಆಗ ಯಾರ ಕಣ್ಣೂ ಒದ್ದೆಯಾಗುವುದಿಲ್ಲ ಮತ್ತು ನಾನು ಯಾರ ಹೃದಯದಿಂದಲೂ ದೂರವಾಗುವುದಿಲ್ಲ.. ಎಂದು ಬರೆದಿದ್ದ.
ಸ್ನೇಹಿತನಿಗೆ ಕಳುಹಿಸಿದ ವಿಡಿಯೋ ಸಂದೇಶವೇನು?
ಪ್ರಾಥಮಿಕ ಮಾಹಿತಿಯ ಪ್ರಕಾರ.. ರೋಹಿತ್ ಇತ್ತೀಚೆಗೆ ಆನ್‌ಲೈನ್ ಗೇಮಿಂಗ್ ಆಡುವ ವ್ಯಸನಕ್ಕೆ ಒಳಗಾಗಿದ್ದ. ಅದರಲ್ಲಿ ದೊಡ್ಡ ಪ್ರಮಾಣದ ಹಣ ಕಳೆದುಕೊಂಡಿದ್ದ. ಇದೇ ಮಾನಸಿಕ ಒತ್ತಡದಲ್ಲಿದ್ದ ಆತ, ತಾನು ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ತನ್ನ ಸ್ನೇಹಿತನಿಗೆ ವಿಡಿಯೋ ಸಂದೇಶ ಕಳುಹಿಸಿದ್ದ. ಈ ಸಂದೇಶವನ್ನು ನೋಡಿ ಆತಂಕಗೊಂಡ ಆತನ ಸ್ನೇಹಿತ ಮತ್ತು ಇತರ ಗೆಳೆಯರು ತಕ್ಷಣವೇ ರೋಹಿತ್ ಮನೆಗೆ ಧಾವಿಸಿದರು. ಆದರೆ ಅವರು ಮನೆಗೆ ತಲುಪುವಷ್ಟರಲ್ಲೇ ತಡವಾಗಿತ್ತು. ರೋಹಿತ್ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕುಟುಂಬಸ್ಥರು ರೋಹಿತ್‌ನನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಪೊಲೀಸರು ಈ ಕುರಿತು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆನ್‌ಲೈನ್ ಗೇಮಿಂಗ್ ಹದಿಹರೆಯದ ಯುವಕರ ಜೀವಕ್ಕೆ ಕಂಟಕವಾಗುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಆತಂಕಕಾರಿ ಉದಾಹರಣೆಯಾಗಿದೆ.


