ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದಹಿಫಾಲೆ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳ ನಂತರ ಹೆಣ್ಣು ಮಗುವೊಂದು ಜನಿಸಿದೆ. ಈ ಅಪರೂಪದ ಸಂಭ್ರಮವನ್ನು ಆಚರಿಸಲು, ಕುಟುಂಬವು ನವಜಾತ ಶಿಶುವನ್ನು ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಮನೆಗೆ ಭವ್ಯವಾಗಿ ಸ್ವಾಗತಿಸಿದೆ.

ಬೀಡ್ (ಸೆ.2): ಸಮಾಜದಲ್ಲಿ ಇಂದಿಗೂ ಹೆಣ್ಣು ಮಗುವಿನ ಜನನದ ಬಗ್ಗೆ ಸಂಕುಚಿತ ಮನೋಭಾವ ಹೊಂದಿರುವ ಜನರಿರುವಾಗ, ಮಹಾರಾಷ್ಟ್ರದ ಕುಟುಂಬವೊಂದು ತನ್ನ ಮನೆಗೆ ಕಾಲಿಟ್ಟ ನವಜಾತ ಹೆಣ್ಣು ಮಗುವನ್ನು ರಾಜಪೋಷಾಕಿನಲ್ಲಿ ರಥದ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುವ ಮೂಲಕ ಭವ್ಯವಾಗಿ ಸ್ವಾಗತಿಸಿದೆ! ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದಹಿಫಾಲೆ (Dahifale) ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳು ಅಂದರೆ 4 ತಲೆಮಾರುಗಳ (Generations) ನಂತರ ಹೆಣ್ಣು ಮಗುವೊಂದು ಜನಿಸಿದ್ದು, ಈ ಅಪರೂಪದ ಸಂಭ್ರಮಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಗಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನವಜಾತ ಶಿಶು ಮತ್ತು ಆಕೆಯ ತಾಯಿಯನ್ನು ದಹಿಫಾಲೆ ಕುಟುಂಬಸ್ಥರು ಬ್ಯಾಂಡ್‌, ಡೊಳ್ಳು, ತಾಳ ಮತ್ತು ನೃತ್ಯದೊಂದಿಗೆ ವೈಭವೋಪೇತವಾಗಿ ಮೆರವಣಿಗೆ ಮಾಡಿ ಮನೆಗೆ ಕರೆತಂದಿದ್ದಾರೆ. ಮಗುವಿಗೆ 'ಗಾರ್ಗಿ' ಎಂದು ನಾಮಕರಣ ಮಾಡಲಾಗಿದೆ.

ಭಾವಪರವಶರಾದ ಅಜ್ಜ-ಅಜ್ಜಿ

ಗಾರ್ಗಿಯ ಆಗಮನದಿಂದ ಭಾವುಕರಾದ ಅಜ್ಜ ಲಿಂಬಾಜಿ ದಹಿಫಾಲೆ, ಕುಟುಂಬದಲ್ಲಿ ಹೆಣ್ಣು ಮಗು ಜನಿಸಿರುವುದು ನಮ್ಮ ಸೌಭಾಗ್ಯ. ಇಷ್ಟೊಂದು ವರ್ಷಗಳಿಂದ ನಮ್ಮ ಕುಟುಂಬದಲ್ಲಿ ಹೆಣ್ಣು ಮಗುವಿಲ್ಲ ಎಂಬ ಕೊರಗಿತ್ತು. ಇಂದು ಆ ಕನಸು ನನಸಾಗಿದೆ. ನಾನು ನನ್ನ ಇಬ್ಬರೂ ಸೊಸೆಯಂದಿರನ್ನು ಸ್ವಂತ ಹೆಣ್ಣುಮಕ್ಕಳಂತೆಯೇ ನೋಡಿಕೊಂಡಿದ್ದೇನೆ. ಈಗ ಮೊಮ್ಮಗಳನ್ನು ರಥದಲ್ಲಿ, ಸಂಗೀತ-ನೃತ್ಯದೊಂದಿಗೆ ಮನೆಗೆ ಕರೆತರುತ್ತಿರುವುದಕ್ಕೆ ಅಪಾರ ಸಂತೋಷವಾಗುತ್ತಿದೆ ಎಂದಿದ್ದಾರೆ.

ಅಜ್ಜಿ ಸುರೇಖಾ ದಹಿಫಾಲೆ ಮಾತನಾಡಿ, ನಮ್ಮ ಮನೆಗೆ ಸ್ವತಃ ಸಾಕ್ಷಾತ್ ಲಕ್ಷ್ಮಿಯೇ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ಮಗು ಹುಟ್ಟಿದ ತಕ್ಷಣವೇ ಈ ಆಗಮನವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದೆವು ಎಂದು ಹರ್ಷ ವ್ಯಕ್ತಪಡಿಸಿದರು.

ಹೂವಿನಂತೆ ಸಾಕಿ ಬೆಳೆಸುತ್ತೇವೆಂದ ತಂದೆ

ಮಗುವಿನ ತಂದೆ ತಮ್ಮ ಸಂತಸ ಹಂಚಿಕೊಳ್ಳುತ್ತಾ, ಸಾಮಾನ್ಯವಾಗಿ ಜನರು ಗಂಡು ಮಗುವನ್ನು ಬಯಸುತ್ತಾರೆ. ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಆನಂದ ಮತ್ತು ಅನುಭವವೇ ಬೇರೆ. ಹೆಣ್ಣುಮಕ್ಕಳು ತಂದೆಯೊಂದಿಗೆ ಹೆಚ್ಚು ಸಾಮೀಪ್ಯ ಹೊಂದಿರುತ್ತಾರೆ. ನಾವು ನಮ್ಮ ಮಗಳನ್ನು ಹೂವಿನಂತೆ ಮುದ್ದಾಗಿ ಸಾಕಿ ಬೆಳೆಸುತ್ತೇವೆ ಎಂದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅನಂತ್ ಇಂಗ್ಳೆ ಅವರು ಈ ಕುಟುಂಬದ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಂದಿಗೂ ಸಮಾಜದ ಕೆಲ ಭಾಗಗಳಲ್ಲಿ ಹೆಣ್ಣು ಮಗುವಿನ ಜನನದ ಬಗ್ಗೆ ಕೀಳು ಅರಿವಿದೆ. ಆದರೆ ದಹಿಫಾಲೆ ಕುಟುಂಬವು ಗಾರ್ಗಿಯ ಆಗಮನವನ್ನು ಈ ರೀತಿ ಹಬ್ಬದಂತೆ ಆಚರಿಸುವ ಮೂಲಕ ಇಡೀ ಸಮಾಜಕ್ಕೇ ಅತ್ಯಂತ ಧನಾತ್ಮಕ ಹಾಗೂ ಆದರ್ಶಪ್ರಾಯವಾದ ಸಂದೇಶ ರವಾನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.