ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಮಂಡಿಸಿದ ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್ ಆಗಿದೆ. ವಿಪಕ್ಷಗಳ ಭಾರಿ ಗದ್ದಲದ ನಡುವೆ ಧ್ವನಿಮತದ ಮೂಲಕ ಬಿಲ್ ಪಾಸ್ ಮಾಡಲಾಗಿದೆ.

ನವದೆಹಲಿ (ಜು.29)ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಶುರುವಾದ ಪ್ರತಿಭಟನೆ, ಗದ್ದಲ ತೀವ್ರಗೊಳ್ಳುತ್ತಲೆ ಇದೆ. ಲೋಕಸಭೆಯಲ್ಲಿ ವಿಪಕ್ಷಗಳು ಭಾರಿ ಗದ್ದಲದ ನಡುವೆ ಸಾರ್ವಜನಿಕ ಪರೀಕ್ಷೆ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ವಿಧೇಯಕ 2026' (Public Examinations Amendment Bill 2026) ಪಾಸ್ ಆಗಿದೆ. ಗದ್ದಲದ ನಡುವೆ ಸ್ಪೀಕರ್ ಮಸೂದೆಯನ್ನು ಧ್ವನಿಮತಕ್ಕೆ ಹಾಕಲಾಯಿತು. ಬಿಲ್ ಪರವಾಗಿದ್ದ ಸದಸ್ಯರು ಧ್ವನಿ ಮತದ ಮೂಲಕ ಬಿಲ್ ಪರ ಬೆಂಬಲ ಸೂಚಿಸಿದರು. ಈ ಮೂಲಕ ತಿದ್ದುಪಡಿ ಮಸೂದೆ ಲೋಕಲಭೆಯಲ್ಲಿ ಪಾಸ್ ಆಗಿದೆ.

ಪ್ರತಿಪಕ್ಷಗಳ ಘೋಷಣೆ, ಪ್ರತಿಭಟನೆ ಮತ್ತು ಕೋಲಾಹಲದ ನಡುವೆಯೇ ಕೇಂದ್ರ ಸಚಿವಾಲಯ ಮತ್ತು ತರಬೇತಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಡಿಸಿದ್ದ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕ ಧ್ವನಿ ಮತದ ಮೂಲಕ ಪಾಸ್ ಮಾಡಿತು. ಈ ವಿಧೇಯಕವು ಸರ್ಕಾರಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆಗೆ ತಡೆ ಒಡ್ಡುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ನಿಬಂಧನೆಗಳನ್ನು ಹೊಂದಿದೆ.

ಅಮಿತ್ ಶಾ ಹಾಜರಿಗೆ ಪಟ್ಟು ಹಿಡಿದ ರಾಹುಲ್ ಗಾಂಧಿ

ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ದ ಗಂಭೀರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮವನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ. ಪೆಲೆಟ್ ಗನ್, ಬುಲೆಟ್ ಬಳಕೆ ಮಾಡಿದ ಕ್ರಮಕ್ಕೆ ಸರ್ಕಾರ ಕ್ಷಮೆ ಕೇಳಬೇಕು. ಈ ಆದೇಶವನ್ನು ನೀಡಿದ ಗೃಹ ಸಚಿವ ಅಮಿತ್ ಶಾ ಸದನಕ್ಕೆ ಹಾಜರಾಗಿ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳ ಗದ್ದಲದ ನಡುವೆ ಬಿಲ್ ಪಾಸ್ ಆಗಿದೆ.

ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದ ಶಿಕ್ಷಣ ಸಚಿವಾಲಯವನ್ನು ಶಿಕ್ಷಣ ಸಚಿವರಲ್ಲ, ಬದಲಾಗಿ ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ. ದೇಶದ ಪ್ರತಿಯೊಂದು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲೂ ಆರ್‌ಎಸ್‌ಎಸ್ ಹಿನ್ನೆಲೆಯವರನ್ನೇ ಇದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಈ ಇಡೀ ಪರೀಕ್ಷಾ ವ್ಯವಸ್ಥೆಯನ್ನು ಬಲವಂತವಾಗಿ ಕಬಳಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.