ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ಗೆ ಥಳಿಸಿದ ಆರೋಪದ ಮೇಲೆ ಮಾಜಿ ಸಿಎಂ ಕರುಣಾನಿಧಿ ಅವರ ಮೊಮ್ಮಗಳು ಕಯಲ್‌ವಿಳಿ ಅಳಗಿರಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಅನುಮತಿ ಇಲ್ಲದೆ ಚೆನ್ನೈ ಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದಾರೆ.
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗಳು ಹಾಗೂ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಮಗಳು ಕಯಲ್‌ವಿಳಿ ಅಳಗಿರಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರು ಕಯಲ್‌ವಿಳಿ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಂಧನವನ್ನು ಅಧಿಕೃತವಾಗಿ ದಾಖಲಿಸಿಕೊಂಡರು. ನಂತರ, ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಪೊಲೀಸರು ಕರೆದಾಗ ವಿಚಾರಣೆಗೆ ಹಾಜರಾಗಬೇಕು ಮತ್ತು ಅನುಮತಿ ಇಲ್ಲದೆ ಚೆನ್ನೈ ನಗರವನ್ನು ಬಿಟ್ಟು ಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಸಿಸಿಟಿವಿ ದೃಶ್ಯ ಆಧರಿಸಿ ಬಂಧನ
ಕೆಲವು ದಿನಗಳ ಹಿಂದೆ, ಕಯಲ್‌ವಿಳಿ ಅವರು ಎಸ್‌ಬಿಐ ಅಡ್ಯಾರ್ ಶಾಖೆಯ ಮ್ಯಾನೇಜರ್‌ಗೆ ಥಳಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದ್ದವು. ಈ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇದೀಗ ಅವರನ್ನು ಬಂಧಿಸಿದ್ದಾರೆ.
ಚೆನ್ನೈನ ಅಡ್ಯಾರ್‌ನಲ್ಲಿರುವ ಕಯಲ್‌ವಿಳಿ ಮಾಲೀಕತ್ವದ ಕಟ್ಟಡದಲ್ಲೇ ಎಸ್‌ಬಿಐ ಶಾಖೆ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡದ ಲಿಫ್ಟ್‌ನಲ್ಲಿ ದೋಷವಿತ್ತು. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಈ ಮೊದಲೇ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುವವರಿಗೆ ಮಾಹಿತಿ ನೀಡಿದ್ದರು. ಕಟ್ಟಡಕ್ಕೆ ಕಯಲ್‌ವಿಳಿ ಬಂದಿದ್ದಾಗ, ಮ್ಯಾನೇಜರ್ ಲಿಫ್ಟ್ ಸಮಸ್ಯೆಯನ್ನು ನೇರವಾಗಿ ಅವರ ಗಮನಕ್ಕೆ ತಂದರು. ಈ ವೇಳೆ ಮಾತಿಗೆ ಮಾತು ಬೆಳೆದು, ಕೋಪಗೊಂಡ ಕಯಲ್‌ವಿಳಿ ಮ್ಯಾನೇಜರ್ ಮುಖಕ್ಕೆ ಹೊಡೆದಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ನಂತರ ಬಹಿರಂಗಗೊಂಡಿದ್ದವು.

