ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಅರವಣ ಪಾಯಸಂ ಪ್ರಸಾದದ ಕೊರತೆ ಉಂಟಾಗಿದ್ದು, ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ. ಪ್ರಸಾದ ಘಟಕದ ನವೀಕರಣ ಹಾಗೂ ಭಕ್ತರ ದಿಢೀರ್ ಆಗಮನವೇ ಈ ಸಮಸ್ಯೆಗೆ ಕಾರಣವಾಗಿದೆ. ಇದನ್ನು ಶೀಘ್ರವೇ ಬಗೆಹರಿಸುವುದಾಗಿ ಸಚಿವ ಕೆ.ಮುರಳೀಧರನ್ ಭರವಸೆ ನೀಡಿದ್ದಾರೆ.
ತಿರುವನಂತಪುರ: ಹಿಂದೂಗಳ ಪವಿತ್ರ ಯಾತ್ರಾಕ್ಷೇತ್ರ ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ಅತ್ಯಂತ ಪ್ರಿಯವಾದ ಅರವಣ ಪಾಯಸಂ ಪ್ರಸಾದದ ಕೊರತೆ ಉಂಟಾಗಿದೆ. ಇದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಕೇರಳಂ ದೇವಸ್ವಂ ಸಚಿವ ಕೆ.ಮುರಳೀಧರನ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ದೇವಸ್ಥಾನ ಬಾಗಿಲು ಹಾಕಿದ್ದಾಗಿ ಪ್ರಸಾದ ಘಟಕದ ನವೀಕರಣ ಕಾರ್ಯ ನಡೆಯುತ್ತದೆ. ಮುಂಬರುವ ಶಬರಿಮಲೆ ಯಾತ್ರೆಗೂ ಮುನ್ನ ಅರವಣ ಘಟಕದ ನವೀಕರಣ ಆಗಬೇಕಿದ್ದು, ಈ ಕಾರ್ಯ ನಡೆಯುತ್ತಿದೆ. ಈ ನಡುವೆ ಮುಂದಿನ ಸಂಕ್ರಾಂತಿ ವೇಳೆ ಜನಸಂದಣಿ ಆಗಬಹುದು ಎಂದು ಈಗಲೇ ಭಕ್ತರು ಭಾರಿ ಸಂಖ್ಯೆಯಲ್ಲಿ ಶಬರಿಮಲೆಗೆ ಬರುತ್ತಿದ್ದಾರೆ. ಹೀಗಾಗಿ ಅರವಣ ಪ್ರಸಾದದ ಕೊರತೆ ಉಂಟಾಗಿದೆ.
‘ಇದನ್ನು ಸರಿಪಡಿಸಲು ನಾನು ತಿರುವಾಂಕೂರು ದೇವಸ್ವಂ ಬೋರ್ಡ್(ಟಿಡಿಬಿ) ಅಧ್ಯಕ್ಷ ಕೆ.ಜಯಕುಮಾರ್ ಅವರ ಜತೆ ಮಾತನಾಡಿದ್ದೇನೆ’ ಎಂದು ಮುರಳೀಧರನ್ ಹೇಳಿದರು.
ಶಬರಿಮಲೆ ಯಾತ್ರೆ ಶುರುವಾದ ಬಳಿಕವೂ ಪ್ರಸಾದದ ಕೊರತೆ ಉಂಟಾಗಬಹುದು ಎಂಬ ಆತಂಕ ಭಕ್ತರಲ್ಲಿದೆ. ಆ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಎಂದು ಸಚಿವ ತಿಳಿಸಿದರು. ಅಕ್ಟೋಬರ್ ವೇಳೆಗೆ ನವೀಕರಣ ಪೂರ್ಣಗೊಳ್ಳುವ ವಿಶ್ವಾಸವಿದೆ.
ಏನಿದು ಪ್ರಸಾದ?:
ಅರವಣ ಪಾಯಸಂ ಒಂದು ಸಿಹಿ ಪ್ರಸಾದವಾಗಿದ್ದು, ಅತ್ಯಂತ ಪ್ರಸಿದ್ಧವಾಗಿದೆ. ಇದನ್ನು ಕೆಂಪು ಅಕ್ಕಿ, ಬೆಲ್ಲ ಮತ್ತು ತುಪ್ಪ ಬಳಸಿ ಈ ಸಾಂಪ್ರದಾಯಿಕ ಪ್ರಸಾದ ಮಾಡಲಾಗುತ್ತದೆ.
ಶಬರಿಮಲೆ ಯಾತ್ರೆ ಮುಗಿಸಿ ಬರುತ್ತಿದ್ದ ಕಲಬುರಗಿ ಭಕ್ತ ಸಾವು
ಶಬರಿಮಲೆ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಅಯ್ಯಪ್ಪ ಮಾಲಾಧಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಮಹಾದೇವ ಅಟ್ಟೂರು (56) ಮೃತ ದುರ್ದೈವಿ. ಬಸಯ್ಯ ಸಾಲಿಮಠ ಗುರುಸ್ವಾಮಿ ಸನ್ನಿಧಾನದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಭಕ್ತರ ತಂಡವು ವಾಪಸಾಗುವ ವೇಳೆ ಸೆ.20ರಂದು ಯಶವಂತಪುರದಿಂದ ಕಲಬುರಗಿಗೆ ಬರುತ್ತಿದ್ದ ಬಸವ ಎಕ್ಸ್‌ಪ್ರೆಸ್ (17307) ರೈಲಿನಲ್ಲಿ ಈ ದುರ್ಘಟನೆ ನಡೆದಿದೆ. ರಾತ್ರಿ ಸುಮಾರು 11.30ರ ವೇಳೆಗೆ ರೈಲು ಗುಂತಕಲ್ ಜಂಕ್ಷನ್ ಸಮೀಪ ತಲುಪಿದಾಗ ಮಹಾದೇವ ಅಟ್ಟೂರು ಅವರಿಗೆ ಏಕಾಏಕಿ ಅರೊಗ್ಯದಲ್ಲಿ ಏರುಪೇರಾಯ್ತು. ತಕ್ಷಣ ಸಹಯಾತ್ರಿಕರು ನೆರವಿಗೆ ಧಾವಿಸಿದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಶಬರಿಮಲೆ ಯಾತ್ರೆ ಮುಗಿಸಿ ಮನೆಗೆ ಮರಳುವ ವೇಳೆ ಸಂಭವಿಸಿದ ಈ ದುರ್ಘಟನೆ ಅಯ್ಯಪ್ಪ ಭಕ್ತರಲ್ಲಿ ಹಾಗೂ ಕುಟುಂಬಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ.


