husband kills wife: ಬಿಹಾರದ ಕಾತಿಹಾರ್ ಜಿಲ್ಲೆಯಲ್ಲಿ, ತಾನು ಕಪ್ಪಗಿದ್ದು ಮಗು ಕೆಂಪಾಗಿ ಜನಿಸಿದ್ದಕ್ಕೆ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನೆರೆಹೊರೆಯವರ ಅಪಹಾಸ್ಯದಿಂದ ಮನನೊಂದು ಪತಿ ಈ ಕೃತ್ಯವೆಸಗಿದ್ದಾನೆ.
ಮಗುವಿನ ಬಣ್ಣ ನೋಡಿ ಹೆಂಡ್ತಿ ಕತೆ ಮುಗಿಸಿದ ಗಂಡ:
ಜನಿಸುತ್ತಲೇ ಯಾವ ಮಕ್ಕಳೂ ಕೂಡ ಕಪ್ಪು ಬಿಳುಪು ಇರುವುದಿಲ್ಲ, ಬಹುತೇಕ ಎಲ್ಲಾ ಮಕ್ಕಳು ಕೆಂಪಾಗಿಯೇ ಇರುತ್ತವೆ. ಆದರೆ ಇಲ್ಲೊಂದು ಕಡೆ ಪಾಪಿಯೋರ್ವ ಮಗು ಕೆಂಪಾಗಿದೆ ಎಂದು ಅನುಮಾನದಿಂದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ. ಬಿಹಾರದ ಕಾತಿಹಾರ್ ಜಿಲ್ಲೆಯ ಅಬಾದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗು ಕೆಂಪಾಗಿ ಜನಿಸಿದೆ ಎಂದು ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ ಗಂಡ ಆಕೆಯ ಕತ್ತುಸೀಳಿ ಕೊಲೆ ಮಾಡಿದ್ದಾನೆ. ಘಟನೆಯ ಬಳಿಕ ರೋಪಿ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಪ್ಪಾಗಿದ್ದ ಗಂಡ: ಕೆಂಪು ಕೆಂಪಾಗಿತ್ತು ಮಗು:
ಅಜಮ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಲ್ಕಿ ಗ್ರಾಮದ ನಿವಾಸಿ ಸುಕುಮಾರ್ ದಾಸ್ ಎಂಬಾತನ ಪತ್ನಿ ಮೂರು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಈಗಾಗಲೇ ಒಬ್ಬ ಮಗನಿದ್ದು, ಈಗ ಜನಿಸಿದ ಮಗು ಬಹಳ ಸುಂದರವಾಗಿರುವುದನ್ನು ನೋಡಿ ಸುಕುಮಾರ್ ದಾಸ್‌ಗೆ ತನ್ನ ಪತ್ನಿಯ ಶೀಲದ ಮೇಲೆ ಅನುಮಾನ ಬಂದಿದೆ. ಸುಕುಮಾರ್ ಕೃಷ್ಣವರ್ಣವನ್ನು ಹೊಂದಿದ್ದ ಹೀಗಾಗಿ ಮಗು ಹೇಗೆ ಕೆಂಪು ಕೆಂಪಾಗಿದೆ ಎಂಬುದು ಆತನ ಅನುಮಾನವಾಗಿತ್ತು. ಆತನ ಅನುಮಾನಕ್ಕೆ ನೆರೆಹೊರೆಯ ಮನೆಯವರು ಧ್ವನಿಗೂಡಿಸಿದ್ದಾರೆ.
ಪತಿಯ ಅನುಮಾನಕ್ಕೆ ನೀರೆರೆದ ನೆರೆಹೊರೆಯ ಜನ:
ನೀನು ಕಪ್ಪಾಗಿದ್ದೀಯಾ ಆದರೆ ನಿನ್ನ ಮಗ ಹೇಗೆ ಬೆಳ್ಳಗೆ ಕೆಂಪು ಕೆಂಪಾಗಿದ್ದಾನೆ ಇದು ಹೇಗೆ ಸಾಧ್ಯ ಎಂದು ಆತನ ಸ್ನೇಹಿತರು ನೆರೆಹೊರೆಯ ಮನೆಯವರು ಅಪಹಾಸ್ಯ ಮಾಡುತ್ತಾ ಆತನ ಅನುಮಾನಕ್ಕೆ ಮತ್ತಷ್ಟು ನೀರೆರೆದಿದ್ದಾರೆ. ಇದಾದ ನಂತರ ಈ ಮಗು ತನ್ನದಲ್ಲ ಎಂಬ ಅನುಮಾನ ಆತನಿಗೆ ದಟ್ಟವಾಗಿದ್ದು, ಇದೇ ಕಾರಣಕ್ಕೆ ಸುಕುಮಾರ್ ದಾಸ್ ತನ್ನ ಪತ್ನಿ ಮೌಸಮಿ ದಾಸ್ ಜೊತೆ ನಿರಂತರ ಜಗಳ ಮಾಡುವುದಕ್ಕೆ ಶುರು ಮಾಡಿದ್ದಾನೆ. ಈ ವೇಳೆ ಪತ್ನಿ ಮೌಸಮಿ ಈ ಮಗು ನಿಮ್ಮದೇ ಎಂದು ಆತನಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಸುಕುಮಾರ್ ದಾಸ್‌ಗೆ ಮಾತ್ರ ತನ್ನ ಅನುಮಾನ ಹೆಚ್ಚಾಗುತ್ತಾ ಹೋಯ್ತೇ ಹೊರತು ಕಡಿಮೆ ಆಗಲಿಲ್ಲ, ಹೆಂಡತಿಯ ಪ್ರತಿ ನಡತೆಯನ್ನು ಅನುಮಾನದ ಕಣ್ಣುಗಳಿಂದಲೇ ನೋಡುತ್ತಿದ್ದ ಸುಕುಮಾರ್ ದಾಸ್ ದಿನವೂ ಮಗುವಿನ ತಂದೆ ಯಾರು ಎಂದು ಕೇಳುತ್ತಾ ಹಿಂಸೆ ನೀಡುವುದಕ್ಕೆ ಶುರು ಮಾಡಿದ್ದಾನೆ.
ದಿನವೂ ಈ ವಿಚಾರಕ್ಕೆ ಪತ್ನಿ ಜೊತೆ ಆರೋಪಿ ಜಗಳ:
ದಿನವೂ ಮನೆಯಲ್ಲಿ ಇದೇ ವಿಚಾರಕ್ಕೆ ಜಗಳಗಳಾಗುತ್ತಿದ್ದಿದ್ದರಿಂದ ಬೇಸತ್ತ ಪತ್ನಿ ನಂತರ ತನ್ನ ತವರಾದ ನಾರಾಯಣಪುರದಲ್ಲಿರುವ ಮನೆಗೆ ಹೋಗಿದ್ದಾರೆ. ಆದರೆ ಅಲ್ಲಿಗೂ ಹೋಗಿ ಕಿರುಕುಳ ನೀಡಲು ಶುರು ಮಾಡಿದ ಸುಕುಮಾರ್ ಅಲ್ಲಿ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಸುಕುಮಾರ್ ದಾಸ್ ಮಾವ ಶಷ್ಟಿ ದಾಸ್, ಬುಧವಾರ ನನ್ನ ಅಳಿಯ ಮನೆಗೆ ಬಂದಿದ್ದ, ಅಲ್ಲಿ ಆತನಿಗೆ ಹೆಂಡ್ತಿ ತವರು ಮನೆಯವರು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಇದ್ಯಾವುದರಿಂದಲೂ ಸಮಾಧಾನಗೊಳ್ಳದ ಸುಕುಮಾರ್ ಅದೇ ದಿನ ರಾತ್ರಿ ಎಲ್ಲರೂ ಮಲಗಿ ನಿದ್ದೆ ಮಾಡಿದ ನಂತರ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಮರುದಿನವೇ ಈ ವಿಚಾರ ಮನೆಯವರಿಗೆ ತಿಳಿದಿದೆ.
ಕೋಣೆಯ ಬಾಗಿಲು ತೆಗೆದಿದ್ದು, ಮಗು ಒಂದೇ ಸಮನೇ ಅಳುವುದನ್ನು ಕೇಳಿ ಅಲ್ಲಿಗೆ ಹೋದ ಮನೆ ಮಂದಿಗೆ ಮೌಸಮಿ ದಾಸ್ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೊಲೆ ಮಾಡಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಕೂಡಲೇ ಮೌಸಮಿ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮೌಸಮಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಹಾಗೂ ಘಟನೆಯ ಬಳಿಕ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಟ್ಟಿನಲ್ಲಿ ಪತ್ನಿ ಮೇಲಿನ ಪತಿಯ ಅನುಮಾನಕ್ಕೆ ಏನೂ ಅರಿಯದ ಮುಗ್ಧ ಮಗುವೊಂದು ಅನಾಥವಾಗಿದೆ.
ಇದನ್ನೂ ಓದಿ: ಮೊಮ್ಮಕ್ಕಳಿಗೆ ಬುದ್ಧಿ ಹೇಳುವ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ಧ ವೃದ್ಧ ಜೋಡಿ: ವೃದ್ಧಾಪ್ಯ ವೇತನ ಪಡೆಯೋ ವಯಸ್ಸಲ್ಲಿ ಪ್ರೇಮಾಯಣ
ಇದನ್ನೂ ಓದಿ: ಕೆಫೆಯಲ್ಲಿ ದಾಂಧಲೆ ನಡೆಸಿದವರಿಗೆ ಅಫ್ಘಾನ್ ಸ್ಟೈಲ್ ಶಿಕ್ಷೆ ನೀಡಿದ ಪೊಲೀಸರು


