love in old age: ಅಜ್ಜ ಅಜ್ಜಿಯ ಲವ್ ಸ್ಟೋರಿಯೊಂದು ಕೋರ್ಟ್ ಮೆಟ್ಟಿಲೇರಿದೆ. ಅಜ್ಜ ಅಜ್ಜಿಯ ಪ್ರೇಮ ಪ್ರಕರಣದ ವಿಚಾರ ಅಜ್ಜಿಯ ಗಂಡನಿಗೆ ಗೊತ್ತಾಗುತ್ತಿದ್ದಂತೆ ಅಜ್ಜಿಯ ಪ್ರೇಮಿಯ ವಿರುದ್ಧ ಅತ್ಯಾ*ಚಾರದ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈಗ ಕೋರ್ಟ್ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.

ಕೋರ್ಟ್‌ ಮೆಟ್ಟಿಲೇರಿದ ಅಜ್ಜ ಅಜ್ಜಿಯ ಲವ್ ಸ್ಟೋರಿ

ಅಜ್ಜ ಅಜ್ಜಿಯ ಲವ್ ಸ್ಟೋರಿಯೊಂದು ಕೋರ್ಟ್ ಮೆಟ್ಟಿಲೇರಿದೆ. ಅಜ್ಜ ಅಜ್ಜಿಯ ಪ್ರೇಮ ಪ್ರಕರಣದ ವಿಚಾರ ಅಜ್ಜಿಯ ಗಂಡನಿಗೆ ಗೊತ್ತಾಗುತ್ತಿದ್ದಂತೆ ಅಜ್ಜಿಯ ಪ್ರೇಮಿಯ ವಿರುದ್ಧ ಅತ್ಯಾ*ಚಾರದ ಪ್ರಕರಣ ದಾಖಲಾಗಿತ್ತು. ಈಗ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವೂ 64 ವರ್ಷದ ವೃದ್ಧನಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಸಂತ್ರಸ್ತ ಹಿರಿಯ ನಾಗರಿಕ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದರೆ, ಆರೋಪಿ ದೆಹಲಿಯ ರೋಹಿಣಿ ಪ್ರದೇಶದ ನಿವಾಸಿಯಾಗಿದ್ದಾರೆ.

ಹಿರಿಯ ನಾಗರಿಕ ಮಹಿಳೆ ನೀಡಿದ ದೂರಿನಲ್ಲಿ ಏನಿದೆ?

ಅತ್ಯಾ*ಚಾರಕ್ಕೊಳಗಾದ ಆರೋಪ ಮಾಡುತ್ತಿರುವ ವೃದ್ಧೆ ಮಹಿಳೆ, ನೀಡಿದ ದೂರಿನಲ್ಲಿ ತಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಮಯದಲ್ಲಿ ಆರೋಪಿ, ಹರಿದ್ವಾರದ ಯೋಗಾರಾಮ್‌ನಲ್ಲಿ ಚಿಕಿತ್ಸೆ ಪಡೆಯುವಂತೆ ಹಾಗೂ ಇದರಿಂದ ಆರೋಗ್ಯ ಸುಧಾರಿಸಬಹುದು ಎಂದು ಸಲಹೆ ನೀಡಿದ್ದರು. ಅದರಂತೆ 12 /8/2025ರಂದು(ಆಗಸ್ಟ್ 12 ರಂದು) ದೂರುದಾರ ಮಹಿಳೆ ಹಾಗೂ ಅವರ ಪತಿ ಆ ಆರೋಪಿ ಹೇಳಿದ ಸ್ಥಳಕ್ಕೆ ಚಿಕಿತ್ಸೆಗಾಗಿ ಹೋಗಿದ್ದರು. ಈ ಸಮಯದಲ್ಲಿ ಸಂತ್ರಸ್ತ ಮಹಿಳೆ ಅಲ್ಲಿ ಚಿಕಿತ್ಸೆಗಾಗಿ ವಾಸವಿದ್ದ ಸಮಯದಲ್ಲಿ ಆರೋಪಿ ಆಕೆಯನ್ನು ಆಗಾಗ ಭೇಟಿ ಮಾಡಿದ್ದಾರೆ ಅಲ್ಲದೇ ಚಿಕಿತ್ಸಾಲಯದ ಹೊರಗೆ ಭೇಟಿಯಾಗುವಂತೆ ಹೇಳಿದ್ದಾರೆ. ಇದಾದ ನಂತರ 19/8/2025ರಂದು ಅಲ್ಲಿ ಅವರಿಗೆ ಚಿಕಿತ್ಸೆ ಮುಗಿದಿದೆ ಹಾಗೂ ಮಹಿಳೆ ಬೆಂಗಳೂರಿಗೆ ಬರಲು ಸಿದ್ಧರಾಗಿದ್ದರು.

ಈ ವೇಳೆ ಆರೋಪಿ ಆಕೆಗೆ ಹರಿದ್ವಾರದ ರೈಲು ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದಾರೆ. ಅಲ್ಲಿ ಆಕೆಯ ಲಗೇಜ್‌ಗಳು ಆರೋಪಿಯ ಕಾರಿಗೆ ಹಾಕಲಾಗಿದೆ. ಈ ವೇಳೆ ಆರೋಪಿ ಅಲ್ಲಿನ ದೇವಾನಂದಿ ಹೊಟೇಲ್‌ನಲ್ಲಿ ಗಂಗಾರತಿ ಹಾಗೂ ಪೂಜೆ ಇರುವುದಾಗಿ ಹೇಳಿದ್ದಾನೆ. ಈ ವೇಳೆ ದೂರುದಾರ ಮಹಿಳೆ ಆರೋಪಿಯ ಜೊತೆ ಆ ಹೊಟೇಲ್‌ಗೆ ಹೋಗಿದ್ದು, ಅಲ್ಲಿ ರೂಮ್ ಬುಕ್ ಮಾಡಲಾಗಿತ್ತು. ಅಲ್ಲಿಗೆ ಹೋದ ನಂತರ ಆರೋಪಿ ರೂಮ್ ಲಾಕ್ ಮಾಡಿ ತನ್ನ ಮೇಲೆ ಅತ್ಯಾ*ಚಾರವೆಸಗಿದ್ದಾರೆ ಅಲ್ಲದೇ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅನಾರೋಗ್ಯ ಸಮಸ್ಯೆಯಿಂದಾಗಿ ಮಹಿಳೆಗೆ ತಲೆ ತಿರುಗಿ ಬಿದ್ದಿದ್ದು, ಇದರಿಂದ ಭಯಗೊಂಡ ಆರೋಪಿ ಅಲ್ಲಿಂದ ಹೊರಟು ಹೋಗಿದ್ದಾನೆ. ಇದಾದ ನಂತರ ಬಂದ ಆರೋಪಿ ಈ ವಿಚಾರವನ್ನು ಯಾರಿಗಾದರು ಹೇಳಿದರೆ ಚೆನ್ನಾಗಿರುವುದಿಲ್ಲ ಎಂದು ಬೆದರಿಕೆಯೊಡ್ಡಿ, ಆಕೆಯನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಿದ್ದಾನೆ. ನಂತರ ಬೆಂಗಳೂರಿಗೆ ಬಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಇದು ಮಹಿಳೆಯ ದೂರಿನಲ್ಲಿರುವ ಅಂಶ

ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯಲ್ಲೇನಿದೆ?

ಆದರೆ ಅತ್ಯಾ*ಚಾರದ ಆರೋಪ ಎದುರಿಸುತ್ತಿರುವ ದೂರುದಾರರು ಈ ಪ್ರಕರಣ ಅತ್ಯಾಚಾರವಲ್ಲ, ಮಹಿಳೆ ಸ್ವಇಚ್ಛೆಯಿಂದಲೇ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದಾರೆ. 2019ರಿಂದಲೂ ನಮ್ಮ ಮಧ್ಯೆ ಸಂಬಂಧ ಇತ್ತು. ಹಲವು ವರ್ಷಗಳಿಂದ ಈ ಸಂಬಂಧ ಮುಂದುವರೆದಿತ್ತು. ಈ ಸಂಬಂಧವು ಹಲವು ವರ್ಷಗಳಿಂದ ನಡೆಯುತ್ತಿದೆ ಎಂಬ ಅಂಶವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ದೂರುದಾರರ ನಡುವೆ 7½ ಗಂಟೆಗಳ ಅವಧಿಯಲ್ಲಿ ಸುಮಾರು 120 ಕರೆಗಳ ವಿನಿಮಯವಾಗಿದೆ. ಈ ಕರೆಗಳಲ್ಲಿ ದೂರುದಾರರು ಆರೋಪಿಯ ಜೊತೆ ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಇಬ್ಬರ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಂತೆ ಪರಸ್ಪರ ಜೀವನದ ಆತ್ಮೀಯ, ವೈಯಕ್ತಿಕ ಮತ್ತು ಲೈಂಗಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಒಮ್ಮತದ, ಭಾವನಾತ್ಮಕ ಮತ್ತು ಲೈಂಗಿಕ ಸಂಬಂಧಗಳನ್ನು ಹೊಂದಿದ್ದಾರೆ. ಅಲ್ಲದೇ ಇಬ್ಬರು ಐ ಲವ್‌ಯೂ ಎಂಬ ಸಂದೇಶವನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. ಅಲ್ಲದೇ ಮಹಿಳೆಯೂ ಆರೋಪಿ ತನ್ನ ಮೇಲೆ ಅತ್ಯಾ*ಚಾರ ಮಾಡಿದ್ದಾನೆ ಎಂದು ಉಲ್ಲೇಖಿಸಿದ ದಿನದಂದೇ ರಾತ್ರಿ ಅಂದರೆ 19/8/2025ರಂದು ರಾತ್ರಿ ಮತ್ತೆ ಆತನಿಗೆ ಐ ಲವ್ ಯೂ ಎಂಬ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರುದಾರರು ಕೋರ್ಟ್‌ಗೆ ಹೇಳಿದ್ದು, ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಕೆಫೆಯಲ್ಲಿ ದಾಂಧಲೆ ನಡೆಸಿದವರಿಗೆ ಅಫ್ಘಾನ್ ಸ್ಟೈಲ್ ಶಿಕ್ಷೆ ನೀಡಿದ ಪೊಲೀಸರು

ಅರ್ಜಿದಾರರ ಪ್ರಕಾರ ದೂರುದಾರ ಮಹಿಳೆಯ ಗಂಡನಿಗೆ ಈ ವಿಚಾರ ತಿಳಿದ ನಂತರ ತಮ್ಮ ಮರ್ಯಾದೆಯನ್ನು ಉಳಿಸಿಕೊಳ್ಳುವ ಸಲುವಾಗಿ ಹಾಗೂ ತಮ್ಮ ಸಾಮಾಜಿಕ ಘನತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಅವರ ಪತಿಯ ಒತ್ತಾಯದ ಕಾರಣದಿಂದ ಈ ದೂರು ದಾಖಲಿಸಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದೊಂದು ವಿವಾಹೇತರ ಸಂಬಂಧ ಎಂಬುದು ಅವರ ಪತಿಗೂ ತಿಳಿದಿದೆ ಎಂದು ದೂರುದಾರರು ಕೋರ್ಟ್ ಮುಂದೆ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿಯನ್ನು ಆಲಿಸಿದ ಬೆಂಗಳೂರು ನ್ಯಾಯಾಲಯವು ಈಗ 64 ವರ್ಷದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 74, 78, 64 ಮತ್ತು 351(2) ಅಡಿಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬೆಂಗಳೂರು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಜಿ. ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಆರೋಪಿ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

ಒಟ್ಟಿನಲ್ಲಿ ಮಕ್ಕಳು ಮೊಮ್ಮಕ್ಕಳಿಗೆ ಬುದ್ಧಿ ಹೇಳುವ ಕಾಲದಲ್ಲಿ, ವೃದ್ಧಾಪ್ಯ ವೇತನ ಪಡೆಯುವ ಸಮಯದಲ್ಲಿ ಈ ವೃದ್ಧ ಜೋಡಿ ಪ್ರೀತಿಸುವುದಕ್ಕೆ ಹೋಗಿ ಫಜೀತಿಗೆ ಸಿಲುಕಿದ್ದು, ಮಕ್ಕಳ ಮುಂದೆ ತಲೆ ತಗ್ಗಿಸುವಂತಾಗಿದೆ.

ಇದನ್ನೂ ಓದಿ: ಅವಮಾನಕ್ಕೊಳಗಾದ ವೇದಿಕೆಯಲ್ಲೇ ಸನ್ಮಾನ: ಮಿಸ್ ಮೆಕ್ಸಿಕೋಗೆ ಮಿಸ್‌ ಯುನಿವರ್ಸ್ ಪಟ್ಟ