Woman burnt alive by husband: ಉ.ಕ. ಜಿಲ್ಲೆಯ ಯಲ್ಲಾಪುರದಲ್ಲಿ, ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೆ ಏಳು ದಿನಗಳ ಬಳಿಕ ಮೃತಪಟ್ಟಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಕಾರವಾರ (ಅ.12): ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಬೊಂಬಡಿಕೊಪ್ಪದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಪತ್ನಿಯ ಶೀಲ ಶಂಕಿಸಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಪತಿ ಬಾಬು ಎಕ್ಕು ಖಾತ್ರೋಟ, ಬೆಂಕಿ ಹಚ್ಚಿದ ಆರೋಪಿ. ಜನ್ನಿ ಬಾಬು ಖಾತ್ರೋಟ (32) ಏಳು ದಿನಗಳ ಕಾಲ ನರಳಾಡಿ ಪತ್ನಿ ಅಕ್ಟೋಬರ್ 10ರಂದು ಮೃತಪಟ್ಟಿದ್ದಾರೆ.

ಪ್ರಕರಣ ಹಿನ್ನೆಲೆ ಏನು?

ಕೂಲಿ ಕೆಲಸ ಮಾಡಿಕೊಂಡಿದ್ದ ಜನ್ನಿ ಮತ್ತು ಬಾಬು ದಂಪತಿಗಳು ಯಲ್ಲಾಪುರದ ಕಿರವತ್ತಿ ಬೊಂಬಡಿಕೊಪ್ಪದ ನಿವಾಸಿಗಳಾಗಿದ್ದರು. ಆದರೆ, ಮದುವೆಯಾದ ದಿನದಿಂದಲೂ ಬಾಬುಗೆ ತನ್ನ ಪತ್ನಿಯ ಶೀಲದ ಬಗ್ಗೆ ಅನುಮಾನವಿತ್ತು. ಈ ಕಾರಣಕ್ಕಾಗಿ ಜನ್ನಿಯನ್ನು ಪದೇ ಪದೇ ಮಾನಸಿಕವಾಗಿ ಹಿಂಸಿಸುತ್ತಿದ್ದ. ಅಕ್ಟೋಬರ್ 3ರಂದು ಇಬ್ಬರ ನಡುವೆ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಬಾಬು, 'ನೀ ಮೊದಲಿನಿಂದಲೂ ಬೇರೆಯವರ ಜೊತೆಗಿರೋ ವಿಷಯ ಗೊತ್ತಿದೆ' ಎಂದು ಕೂಗಾಡಿದ್ದಾನೆ. ಇದಕ್ಕೆ ಜನ್ನಿ, 'ನನ್ನನ್ನು ಏಕೆ ಬೈಯುವೆ?' ಎಂದು ಮರುಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ಬಾಬು, ಬೈಕ್‌ಗೆ ಹಾಕಲು ತಂದಿದ್ದ ಪೆಟ್ರೋಲ್ ಅನ್ನು ಜನ್ನಿಯ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.

ಬೆಂಕಿ ಹಚ್ಚಿದ ಜ್ವಾಲೆಯಲ್ಲೆ ತವರುಮನೆಯತ್ತ ಓಡಿದ ಜನ್ನಿ:

ಪತಿ ಏಕಾಏಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಜನ್ನಿ ಮೈಮೇಲೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆಯಲ್ಲಿ ಸಿಕ್ಕಿ ಕಿರುಚಾಡುತ್ತಾ ಜನ್ನಿ ತಮ್ಮ ತವರು ಮನೆಯ ಕಡೆಗೆ ಓಡಿದ್ದಾರೆ. ತವರು ಮನೆಯವರು ತಕ್ಷಣ ಬೆಂಕಿ ಆರಿಸಿ ಜನ್ನಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಜನ್ನಿಯ ಸಹೋದರ ಗಂಗಾರಾಮ ಬಾಬು ಎಡಗೆ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಪೊಲೀಸರು ಜನ್ನಿಯನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಸಾಯುವ ಮುನ್ನ ಜನ್ನಿಯಿಂದ ಪೊಲೀಸರಿಗೆ ಮಾಹಿತಿ:

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಜನ್ನಿ, ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಎರಡು ದಿನಗಳ ಚಿಕಿತ್ಸೆಯ ನಂತರ, ಅಕ್ಟೋಬರ್ 5ರಂದು ಜನ್ನಿ ತವರು ಮನೆಗೆ ಮರಳಿದ್ದರು. ಐದು ದಿನಗಳ ಕಾಲ ತವರು ಮನೆಯಲ್ಲಿಯೇ ಆರೈಕೆಯಲ್ಲಿದ್ದ ಜನ್ನಿ, ಗಾಯದಿಂದಾಗಿ ನಿರಂತರವಾಗಿ ನರಳುತ್ತಿದ್ದರು. ಅಂತಿಮವಾಗಿ, ಅಕ್ಟೋಬರ್ 10ರಂದು ಜನ್ನಿ ಮೃತಪಟ್ಟಿದ್ದಾರೆ.

ಪತಿ ಬಾಬು ಬಂಧನ:

ಜನ್ನಿಯ ಸಾವಿಗೆ ಕಾರಣನಾದ ಆರೋಪಿ ಬಾಬು ಎಕ್ಕು ಖಾತ್ರೋಟ ವಿರುದ್ಧ ಜನ್ನಿಯ ಸಹೋದರ ಗಂಗಾರಾಮ ಬಾಬು ಎಡಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಸ್ಥಳೀಯ ಸಮುದಾಯದಲ್ಲಿ ಆಘಾತ ಮೂಡಿಸಿದ್ದು, ಕುಟುಂಬದೊಳಗಿನ ಅನುಮಾನ ಮತ್ತು ಹಿಂಸೆಯ ದುಷ್ಪರಿಣಾಮಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.