ಭೋಪಾಲ್‌ನಲ್ಲಿ ಮ್ಯಾಜಿಕ್ ಸ್ಪಾಟ್ ಕೆಫೆಗೆ ನುಗ್ಗಿ ದಾಂಧಲೆ ನಡೆಸಿದ ದುರುಳರಿಗೆ ಮಧ್ಯಪ್ರದೇಶದ ಪೊಲೀಸರು ತಾಲಿಬಾನ್ ಸ್ಟೈಲಲ್ಲಿ ಶಿಕ್ಷೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಐವರು ಆರೋಪಿಗಳ ಶರ್ಟ್ ಬಿಚ್ಚಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.

ಕೆಫೆಗೆ ನುಗ್ಗಿ ಕಾಲೇಜು ಯುವಕರ ದಾಂಧಲೆ:

ಭೋಪಾಲ್‌ನಲ್ಲಿ ಮ್ಯಾಜಿಕ್ ಸ್ಪಾಟ್ ಕೆಫೆಗೆ ನುಗ್ಗಿ ದಾಂಧಲೆ ನಡೆಸಿದ ದುರುಳರಿಗೆ ಮಧ್ಯಪ್ರದೇಶದ ಪೊಲೀಸರು ತಾಲಿಬಾನ್ ಸ್ಟೈಲಲ್ಲಿ ಶಿಕ್ಷೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಐವರು ಆರೋಪಿಗಳ ಶರ್ಟ್ ಬಿಚ್ಚಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಭೋಪಾಲ್‌ನ ಕೆಫೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳ ತಂಡವೊಂದು ಅಲ್ಲಿದ ಗಾಜಿನ ಪೀಠೋಪಕರಣಗಳನ್ನು ದೊಣ್ಣೆಯಿಂದ ಹೊಡೆದು ಹುಡಿ ಮಾಡಿ ಅಲ್ಲಿ ದಾಂಧಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿಸಿದ ಆರೋಪಿಗಳನ್ನು ಪೊಲೀಸರು ಈಗ ಅರೆಬೆತ್ತಲೆಯಾಗಿ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ.

ದಾದಾಗಿರಿ ತೋರಿಸಿದವರಿಗೆ ಪೊಲೀಸರು ಮಾಡಿದ್ದೇನು?

ಕೆಲ ದಿನಗಳ ಹಿಂದೆ ಭೋಪಾಲ್‌ನ ಕೆಫೆಯೊಂದಕ್ಕೆ ನುಗ್ಗಿದ್ದ ಈ ದುಷ್ಕರ್ಮಿಗಳ ತಂಡ ಅಲ್ಲಿ ದಾದಾಗಿರಿ ಮೆರೆದಿದ್ದರು. ಅಲ್ಲಿನ ಕೌಂಟರ್‌ಗೆ ಹಾನಿ ಮಾಡಿದ್ದಲ್ಲದೇ ಅಲ್ಲಿನ ಗಾಜಿನ ಪೀಠೋಪಕರಣಗಳು, ಡಿಸ್‌ಪ್ಲೇಗಳು ಗಾಜಿನ ಪ್ಯಾನೆಲ್‌ಗಳನ್ನು ಹುಡಿ ಮಾಡಿದ್ದರು. ಇದೇ ವೇಳೆ ಅಲ್ಲಿದ್ದ ಯುವಕ ಹಾಗೂ ಯುವತಿಯರು ಅಲ್ಲಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು. ಘಟನೆ ಕೆಫೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದಾದ ನಂತರ ಆರೋಪಿಗಳ ಬಂಧಿಸಿದ ಮಿಸ್ರೋಡ್ ಪೊಲೀಸರು ಆರೋಪಿಗಳನ್ನು ಅವರು ದಾಂಧಲೆ ನಡೆಸಿದ ಕೆಫೆಯ ಬಳಿಯಿಂದ ಪ್ರಮುಖ ಮಾರುಕಟ್ಟೆಯವರೆಗೆ ಮೆರವಣಿಗೆ ಮೂಲಕ ಕರೆತಂದಿದ್ದಾರೆ. ರಾಜಧಾನಿಯಲ್ಲಿ ಇಂತಹ ಹಿಂಸಾತ್ಮಕ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸಂದೇಶ ನೀಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ವೈರಲ್ ಆದ ಸಿಸಿಟಿವಿ ವೀಡಿಯೋದಲ್ಲಿ, ಪುರುಷರು ಜೊತೆಯಾಗಿ ನಡೆದುಕೊಂಡು ಬಂದು ಕೆಫೆಯಲ್ಲಿ ದಾಳಿ ನಡೆಸಿ ಅಲ್ಲಿಂದ ಏನನ್ನೂ ತೆಗೆದುಕೊಳ್ಳದೇ ಹೊರಟು ಹೋಗಿದ್ದಾರೆ.

ಇದನ್ನೂ ಓದಿ: ಅವಮಾನಕ್ಕೊಳಗಾದ ವೇದಿಕೆಯಲ್ಲೇ ಸನ್ಮಾನ: ಮಿಸ್ ಮೆಕ್ಸಿಕೋಗೆ ಮಿಸ್‌ ಯುನಿವರ್ಸ್ ಪಟ್ಟ

ಪ್ರಾಥಮಿಕ ತನಿಖೆಯಲ್ಲಿ ಈ ಪುಂಡರು ದರೋಡೆ ಉದ್ದೇಶದಿಂದ ಈ ಕೃತ್ಯ ಎಸಗಿಲ್ಲ ಎಂಬುದು ತಿಳಿದು ಬಂದಿದೆ. ದಾಳಿಕೋರರು ಏನನ್ನೂ ತೆಗೆದುಕೊಳ್ಳಲು ಪ್ರಯತ್ನಿಸಲಿಲ್ಲ. ಕೆಫೆಯನ್ನು ಧ್ವಂಸ ಮಾಡುವ ಏಕೈಕ ಉದ್ದೇಶದಿಂದ ಅವರು ಬಂದಿದ್ದರು. ಕೇವಲ ಎರಡು ನಿಮಿಷದ ಒಳಗೆ ಎಲ್ಲವೂ ನಡೆದು ಹೋಯ್ತು ಎಂದು ಡಿಸಿಪಿ ವಲಯ 2ನ ವಿವೇಕ್ ಸಿಂಗ್ ಹೇಳಿದ್ದಾರೆ. ಕೆಲ ವರದಿಗಳ ಪ್ರಕಾರ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವಿನ ವೈಯಕ್ತಿಕ ದ್ವೇಷಕ್ಕೆ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 16 ರಂದು ಕತಾರಾ ಹಿಲ್ಸ್‌ನಲ್ಲಿ ನಡೆದ ಘರ್ಷಣೆಯಲ್ಲಿ ಯೋಗಿ ಎಂಬ ಯುವಕನನ್ನು ಅಭಿಷೇಕ್ ರಜಪೂತ್ ಮತ್ತು ಅವನ ಸ್ನೇಹಿತರು ಥಳಿಸಿದ್ದರು. ಈ ಅಭಿಷೇಕ್ ಕೆಫೆ ಪಾಲುದಾರರಲ್ಲಿ ಒಬ್ಬರ ಸ್ನೇಹಿತ ಎಂದು ವರದಿಯಾಗಿದೆ. ಈ ಗಲಾಟೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಕೆಫೆಗೆ ನುಗ್ಗಿದ ಯುವಕರ ಗುಂಪು ಅಲ್ಲಿ ದಾಂಧಲೆ ನಡೆಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಅನೇಕ ಗುಂಪುಗಳಲ್ಲಿ ವ್ಯಾಪಕವಾಗಿ ಪೋಸ್ಟ್ ಮಾಡಲಾಗಿದ್ದು, ಇದು ಹಲವಾರು ದಾಳಿಕೋರರನ್ನು ಗುರುತಿಸಲು ಸಹಾಯ ಮಾಡಿದೆ ಎಂದು ಕೆಫೆ ಮಾಲೀಕರು ಹೇಳಿದ್ದಾರೆ. ನನಗೆ ಯಾವುದೇ ದಾಳಿಕೋರರ ವೈಯಕ್ತಿಕ ಪರಿಚಯವಿಲ್ಲ, ಅಥವಾ ನನಗೆ ಯಾರೊಂದಿಗೂ ಯಾವುದೇ ದ್ವೇಷವೂ ಇಲ್ಲ ಎಂದು ಕೆಫೆ ಮಾಲೀಕ ಸಕ್ಷಮ್ ಹೇಳಿದ್ದಾರೆ. ದಾಳಿಯಿಂದಾಗಿ ನನ್ನ ಕೆಫೆಗೆ ಸುಮಾರು ಎರಡೂವರೆಯಿಂದ ಮೂರು ಲಕ್ಷ ರೂಪಾಯಿಗಳ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕೃತ್ಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಮಿಸ್ರೋಡ್, ಬಾಗ್ಸೆವಾನಿಯಾ ಮತ್ತು ಕಟಾರಾ ಹಿಲ್ಸ್ ಪೊಲೀಸ್ ಠಾಣೆಗಳ ಜಂಟಿ ತಂಡಗಳು ತನಿಖೆ ನಡೆಸಿ ಅರೋಪಿಗಳ ಬಂಧಿಸಿದ್ದಾರೆ.

ಇದನ್ನೂ ಓದಿ: ಖುಷಿಖುಷಿಯಾಗಿ ಮದುವೆಯ ಎಲ್ಲಾ ಸಂಪ್ರದಾಯಗಳು ಮುಗಿದ ನಂತರ ರಾತ್ರೋರಾತ್ರಿ ಎಸ್ಕೇಪ್ ಆದ ವಧು