ಆ ಊರಿನ ವ್ಯಕ್ತಿ ಮೃತಪಟ್ಟಿದ್ದರು. ಗ್ರಾಮಸ್ಥರೆಲ್ಲ ತುಂಬಾ ನೋವಿನಿಂದ ಮೃತದೇಹವನ್ನು ಸ್ಮಶಾನಕ್ಕೆ ತಂದು ಬೆಂಕಿಯಿಟ್ಟು ಕಣ್ಣೀರು ಇಟ್ಟಿದ್ದರು. ಮಾರನೇಯ ದಿನ ಅಸ್ತಿ ತರಲು ಸ್ಮಶಾನಕ್ಕೆ ಅದೇ ಗ್ರಾಮಸ್ಥರು ದಂಗಾಗಿ ಹೋಗಿದ್ದಾರೆ. ಅಸಲಿಗೆ ಆಗಿದ್ದೇನು? ಈ ಸ್ಟೋರಿಯಲ್ಲಿದೆ ಕಂಪ್ಲೀಟ್ ಮಾಹಿತಿ.
ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿ ಅತ್ಯಂತ ನಿಗೂಢ ಹಾಗೂ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ಮರುದಿನ ಚಿತೆಯ ಮೇಲೆ ಮದ್ಯದ ಬಾಟಲಿಗಳು, ಸಿಹಿ ತಿಂಡಿ ಹಾಗೂ ಮೇಕೆಯ ತಲೆಬುರುಡೆಯನ್ನು ಇಟ್ಟು ಮಾಟ-ಮಂತ್ರ ಮಾಡಿದ ಶಂಕೆ ವ್ಯಕ್ತವಾಗಿದೆ. ಇದು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ಮೂಡಿಸಿದೆ. ಸದ್ಯ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಿತೆಯ ಮೇಲೆ ಪೂಜಾ ಸಾಮಗ್ರಿಗಳು!
ಲುಧಿಯಾನದ ಜಗ್ರಾಂ ವ್ಯಾಪ್ತಿಯ 'ಲೀಲಾ ಮೇಘ್ ಸಿಂಗ್' ಎಂಬ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಗ್ರಾಮದ ನಿವಾಸಿ 45 ವರ್ಷದ ಜಗದೀಪ್ ಸಿಂಗ್ ಎಂಬುವರು ಇತ್ತೀಚೆಗೆ ನಿಧನರಾಗಿದ್ದರು. ನಿಯಮದಂತೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಮರುದಿನ ಕುಟುಂಬಸ್ಥರು ಅಸ್ಥಿ ಸಂಗ್ರಹಿಸಲು ಸ್ಮಶಾನಕ್ಕೆ ತೆರಳಿದಾಗ ಚಿತೆಯ ಮೇಲೆ ಬಲಿ ನೀಡಿದ ಮೇಕೆಯ ತಲೆಬುರುಡೆ, ಮದ್ಯದ ಬಾಟಲಿಗಳು, ಲಾಡು ಹಾಗೂ ಇತರ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ಇದನ್ನು ಕಂಡು ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ
ಈ ಕೃತ್ಯದ ಹಿಂದೆ ಮಾಟ-ಮಂತ್ರ ಅಥವಾ ತಾಂತ್ರಿಕ ಕ್ರಿಯೆಯ ಕೈವಾಡವಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಸ್ಮಶಾನದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಗ್ರಾಮಸ್ಥರು ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಕಾರೊಂದರಲ್ಲಿ ವ್ಯಕ್ತಿಯೊಬ್ಬ ಸ್ಮಶಾನಕ್ಕೆ ಬಂದು ಹೋಗುತ್ತಿರುವುದು ಪತ್ತೆಯಾಗಿದೆ. ಆ ಕಾರು ಅದೇ ಗ್ರಾಮದ ನಿವಾಸಿಯೊಬ್ಬನಿಗೆ ಸೇರಿದ್ದಾಗಿದೆ ಎಂದು ಗುರುತಿಸಲಾಗಿದೆ. ಇದರಿಂದ ಕುಪಿತರಾದ ಕೆಲವು ಗ್ರಾಮಸ್ಥರು ಕೈಯಲ್ಲಿ ಕೋಲುಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸಿಧ್ವಾನ್ ಬೇಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಮರ್‌ಜೀತ್ ಸಿಂಗ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದೊಯ್ಯಲು ಮುಂದಾದಾಗ ಗ್ರಾಮಸ್ಥರು ಪೊಲೀಸ್ ವಾಹನವನ್ನು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಶಾಂತರಾಗಿದ್ದಾರೆ.
ನಮ್ಮ ಗ್ರಾಮದ ಇತಿಹಾಸದಲ್ಲೇ ಇಂತಹ ನಿಗೂಢ ಹಾಗೂ ಅಮಾನವೀಯ ಘಟನೆ ನಡೆದಿರುವುದು ಇದೇ ಮೊದಲು. ಇದರ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಎಚ್‌ಒ ಅಮರ್‌ಜೀತ್ ಸಿಂಗ್ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಶಂಕಿತನ ವಿಚಾರಣೆಯ ಬಳಿಕ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದ್ದಾರೆ.


