ದೇಶದ ಕುಖ್ಯಾತ ಗ್ಯಾಂಗ್‌ಸ್ಟರ್ ಒಬ್ಬ 12 ಗಂಟೆಗಳ ಕಾಲ ಪೆರೋಲ್‌ ಪಡೆದಿದ್ದಾನೆ. ಆತ ಜೈಲಿನಿಂದ ಹೊರ ಬರುತ್ತಿರೋದು ಬೇರೆ ಯಾಕೂ ಅಲ್ಲ. ಪ್ರೀತಿಸಿದ ಹುಡುಗಿಯನ್ನ ಮದುವೆ ಆಗೋದಕ್ಕೆ. ತುಂಬಾ ಇಂಟ್ರೆಸ್ಟಿಂಗ್ ಆಗಿರೋ ಸ್ಟೋರಿ ಇಲ್ಲಿದೆ.

ಹರಿಯಾಣ:  ಅವನು ದೇಶದ ಮೋಸ್ಟ್ ವಾಂಟೆಡ್‌ ಗ್ಯಾಂಗ್‌ಸ್ಟರ್. ಹೆಸರು ಮೈನ್‌ಪಾಲ್ ಧಿಲ್ಲಾ ಅಲಿಯಾಸ್ ಮೈಪಾಲ್ ಬದ್ಲಿ (Mainpal Dhilla). ಹರಿಯಾಣದ ಈ ಕ್ರಿಮಿನಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಆತ ಸುದ್ದಿ ಆಗುತ್ತಿರೋದು ಯಾವುದೋ ಕೊಲೆ ಅಥವಾ ದರೋಡೆ ಪ್ರಕಣಗಳಿಂದಲ್ಲ. ಪೆರೋಲ್ ಪಡೆದು ಹೊರಬಂದ 12 ಗಂಟೆಯಲ್ಲಿ ತನ್ನ ಪ್ರೇಯಸಿಯನ್ನ ಮದುವೆ ಆಗಲಿದ್ದಾನೆ.

ದೇಶದ ವಿವಿಧ ಭಾಗಗಳಲ್ಲಿ ಕೊಲೆ, ದರೋಡೆ, ಸುಲಿಗೆ ಮಾಡಿ ಜೈಲು ಸೇರಿರುವ ಮೈನ್‌ಪಾಲ್‌ಗೆ ವಿಶೇಷ ಪೆರೋಲ್ ಸಿಕ್ಕಿದೆ. ಆತನಿಗೆ ಮದುವೆ ಆಗಲು ಕೋರ್ಟ್‌ ಮತ್ತು ಜೈಲು ಅಧಿಕಾರಿಗಳು 12 ಗಂಟೆಗಳ ಕಾಲ ಕಸ್ಟಡಿ ಪೆರೋಲ್ ಮಂಜೂರು ಮಾಡಿದ್ದಾರೆ. ಬೆಳಗ್ಗೆ ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪೆರೋಲ್ ನೀಡಲಾಗಿದೆ. ಮದುವೆಯ ಶಾಸ್ತ್ರಗಳು ಮುಗಿದ ತಕ್ಷಣ ಆತ ಜೈಲು ಸೇರಿಕೊಳ್ಳಲಿದ್ದಾನೆ.

ಯಾಕೆ ಹೀಗೆ?

ಮೈನ್‌ಫಾಲ್ ಮೊದಲೇ ಹೇಳಿದಂತೆ ದೊಡ್ಡ ಗ್ಯಾಂಗ್‌ಸ್ಟರ್. ಈತನ ಮದುವೆ ಸಾಮನ್ಯ ಮದುವೆಯಂತೆ ನಡೆಯುತ್ತಿಲ್ಲ. ಪೊಲೀಸ್ ಸರ್ಪಗಾವಲಿನಲ್ಲಿ ಮದುವೆ ನಡೆಯಲಿದೆ. ಜಜ್ಜರ್ ಜೈಲಿಗೆ ಸಮೀಪವಿರುವ ಫಾರ್ಮ್‌ಹೌಸ್‌ನಲ್ಲಿ ಮದುವೆ ಕಾರ್ಯ ನಡೆಯಲಿದೆ. ಇನ್ನೊಂದು ವಿಶೇಷತೆ ಏನು ಅಂದರೆ.. ಕುಖ್ಯಾತ ಮದುವೆ ಆಗ್ತಿರೋದು ಕೂಡ ಭಾರತೀಯಳಲ್ಲ. ಆಕೆ ಕಾಂಬೋಡಿಯಾ ದೇಶದ ಮೆಟಾ ಚಾನ್ ಎಂಬ ಮಹಿಳೆ. ಈಗಾಗಲೇ ಇವರು ನಾಲ್ವರು ಮಕ್ಕಳನ್ನು ಹೊಂದಿದ್ದಾರೆ. ದೇಶದಲ್ಲಿ ಅಪರಾಧ ನಡೆಸಿ ಕಾಂಬೋಡಿಯಾಗೆ ಪರಾರಿಯಾಗಿದ್ದ ಸಂದರ್ಭದಲ್ಲಿ ಮೈನ್‌ಪಾಲ್, ಈಕೆಯೊಂದಿಗೆ ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದಾನೆ ಎನ್ನಲಾಗಿದೆ.

ಮದುವೆ ಹಿನ್ನೆಲೆ

ಮೈನ್‌ಪಾಲ್ ಹರಿಯಾಣದ ಜಜ್ಜರ್ ಜಿಲ್ಲೆಯ ಬದ್ಲಿ ಗ್ರಾಮದ ನಿವಾಸಿ. ಈತ 2018ರಲ್ಲಿ ಜೈಲಿನಿಂದ ಪೆರೋಲ್ ಮೇಲೆ ಬಂದು ನಾಪತ್ತೆ ಆಗಿದ್ದ. ಸೋನು ಕುಮಾರ್ ಎಂಬ ನಕಲಿ ಹೆಸರಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಂಡು ದೇಶಬಿಟ್ಟಿದ್ದ. ಅಲ್ಲಿ ಮೆಟಾ ಚಾನ್ ಎಂಬಾಕೆಯ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದ. ನಂತರ ಅಲ್ಲಿಯೇ ಸಂಸಾರ ಹೂಡಿದ್ದ ಗ್ಯಾಂಗ್‌ಸ್ಟರ್ ನಾಲ್ವರು ಮಕ್ಕಳನ್ನ ಮಾಡಿಕೊಂಡಿದ್ದಾನೆ.

ಕಾಂಬೋಡಿಯಾದಲ್ಲಿ ಪತ್ತೆ ಆಗಿರೋದು ಗೊತ್ತಾಗುತ್ತಿದ್ದಂತೆಯೇ ಭಾರತದ ಅಧಿಕಾರಿಗಳು ಆತನ ವಾಪಸ್ ತರಲು ಸರ್ಕಸ್ ಮಾಡಿದ್ದರು. ಸಿಬಿಐ, ಹರಿಯಾಣ ಪೊಲೀಸ್, ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಇದರ ಫಲವಾಗಿ ಸೆಪ್ಟೆಂಬರ್ 2025ರಲ್ಲಿ ಕಾಂಬೋಡಿಯಾದಿಂದ ಗಡೀಪಾರು ಮಾಡಿ ಭಾರತಕ್ಕೆ ಕರೆ ತರಲಾಯಿತು. ಅಂದಿನಿಂದ ಆತ ಜೈಲಿನಲ್ಲಿಯೇ ಕಂಬಿ ಎಣಿಸುತ್ತಿದ್ದಾನೆ.

22ಕ್ಕೂ ಹೆಚ್ಚು ಕೇಸ್

ಈ ಗ್ಯಾಂಗ್‌ಸ್ಟರ್ ಹರಿಯಾಣದ ಕುಖ್ಯಾತ ಕ್ರಿಮಿನಲ್‌ಗಳಲ್ಲಿ ಒಬ್ಬ. ಆತನ ವಿರುದ್ಧ ಕೊಲೆ, ಸುಲಿಗೆ ಸೇರಿದಂತೆ ಸುಮಾರು 22ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿವೆ. 2007 ಮತ್ತು 2010ರ ಮೂರು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿದೆ. ಜೈಲಿನಲ್ಲಿದ್ದಾಗಲೇ ವ್ಯಕ್ತಿಯೊಬ್ಬನ ಮುಗಿಸಿದ ಆರೋಪವೂ ಇದೆ. ಇದೀಗ ಕಾಂಬೋಡಿಯಾದಿಂದ ಭಾರತಕ್ಕೆ ಬಂದಿರುವ ತನ್ನ ಪ್ರೇಯಸಿಯನ್ನು ಕುಟುಂಬ ಮತ್ತು ಪೊಲೀಸರ ಸಮ್ಮುಖದಲ್ಲಿ ಮದುವೆ ಆಗಲಿದ್ದಾನೆ. ಅದಕ್ಕಾಗಿ ಕೇವಲ 12 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಬೆನ್ನಲ್ಲೇ ಹನಿಮೂನ್‌ಗೆ ಎಷ್ಟುಗಂಟೆ ಪೆರೋಲ್ ನೀಡ್ತೀರಿ ಎಂದು ತಮಾಷೆಯಾಗಿ ಪ್ರಶ್ನೆ ಮಾಡ್ತಿದ್ದಾರೆ.