ಟ್ರಂಪ್ ಜೊತೆಗಿನ ವ್ಯಾಪಾರ ಸಂಘರ್ಷದ ನಡುವೆಯೂ ಚೀನಾ ಎರಡನೇ ತ್ರೈಮಾಸಿಕದಲ್ಲಿ ಶೇ.5.2ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. ಅರ್ಥಶಾಸ್ತ್ರಜ್ಞರ ಲೆಕ್ಕಾಚಾರಗಳನ್ನು ಸುಳ್ಳಾಗಿಸಿದೆ.

ಬೀಜಿಂಗ್: ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾ ಎರಡನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ಹೇಳಲಾಗತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಟ್ಯಾರಿಫ್ ಸಂಘರ್ಷದ ನಡುವೆಯೂ ಡ್ರ್ಯಾಗನ್ ದೇಶ ವ್ಯವಹಾರಿಕ ಅಭಿವೃದ್ಧಿಯತ್ತ ಹೆಜ್ಜೆಯನ್ನು ಹಾಕುತ್ತಿದೆ. ಅಮೆರಿಕ ಜೊತೆಗಿನ ಟ್ರೇಡ್ ವಾರ್ ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತೆ ಎಂದು ಅಂದಾಜಿಸಲಾಗುತ್ತಿತ್ತು. ಆದರೆ ಇದೀಗ ಚೀನಾ ಎಲ್ಲಾ ಲೆಕ್ಕಾಚಾರಗಳನ್ನು ಸುಳ್ಳಾಗಿಸಿದೆ.

ಅರ್ಥಶಾಸ್ತ್ರಜ್ಞರ ಲೆಕ್ಕ ಸುಳ್ಳಾಗಿಸಿದ ಚೀನಾ

ಈ ಎಲ್ಲಾ ಬೆಳವಣಿಗೆ ನಡುವೆ ಚೀನಾ ಜಿಡಿಪಿ ಶೇ.5.2 ತಲುಪುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ನಡೆಸಿದ ರಾಯಿಟರ್ಸ್ ಸಮೀಕ್ಷೆಯಲ್ಲಿ ಚೀನಾದ ಜಿಡಿಪಿ ಶೇ.5.1ರಷ್ಟು ಇರಲಿದೆ ಎಂದು 40 ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದರು. ಅರ್ಥಶಾಸ್ತ್ರಜ್ಞರು ಅಂದಾಜು ಲೆಕ್ಕವನ್ನು ಚೀನಾ ಸುಳ್ಳಾಗಿಸಿ, ಶೇ.5.2ಕ್ಕೆ ತಲುಪಿದೆ. ಅರ್ಥಶಾಸ್ತ್ರಜ್ಞರ ಅಂದಾಜಿಗಿಂತ ಶೇಕಡಾ 1.1 ರಷ್ಟು ಹೆಚ್ಚಾಗಿದೆ.

ರಫ್ತು ಪ್ರಮಾಣ ಶೇ.5.8ರಷ್ಟು ಹೆಚ್ಚಳ

ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ.5.4ರಷ್ಟು ಜಿಡಿಪಿ ಬೆಳವಣಿಗೆಯನ್ನು ಚೀನಾ ಹೊಂದಿತ್ತು. ವರ್ಷದ ಮೊದಲ ಆರು ತಿಂಗಳು ಅಂದ್ರೆ ಜನವರಿ-ಜೂನ್ ಚೀನಾದ ಒಟ್ಟು ಜಿಡಿಪಿ ಶೇ.5.3ರಷ್ಟಿತ್ತು. ಆರು ತಿಂಗಳಲ್ಲಿ ರಫ್ತು ಪ್ರಮಾಣ ಏರಿಕೆಯಾಗುತ್ತಿರೋದರಿಂದ ಚೀನಾದ ಜಿಡಿಪಿ ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ. ಕಳೆದ ಒಂದು ವರ್ಷದಲ್ಲಿ ಚೀನಾದ ರಫ್ತು ಪ್ರಮಾಣ ಶೇ.5.8ರಷ್ಟು ಹೆಚ್ಚಳಗೊಂಡಿದೆ.

ಇತ್ತೀಚೆಗೆ ಚೀನಾದ ಸರಕುಗಳ ಮೇಲಿನ ಆಮದು ಸುಂಕ ಕಡಿಮೆಯಾಗಿದೆ. ಈ ಹಿನ್ನೆಲೆ ಚೀನಾದಿಂದ ರಫ್ತು ಆಗುವ ಪ್ರಮಾಣವೂ ಏರಿಕೆಯಾಗಿದೆ. ಟ್ಯಾರಿಫ್ ಇಳಿಕೆಯಾದ ಪರಿಣಾಮ ಚೀನಾದಲ್ಲಿ ಉತ್ಪಾದನೆಗೂ ಹೆಚ್ಚಾಗಿದ್ದು, ಜಾಗತೀಯವಾಗಿ ವ್ಯಾಪಾರ ವೃದ್ಧಿಯಾಗಿದೆ.

ಹಲವು ಸವಾಲುಗಳ ನಡುವೆ ಚೀನಾದಿಂದ ಸಾಧನೆ!

ಎರಡನೇ ತ್ರೈಮಾಸಿಕದಲ್ಲಿ ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗಿತ್ತು. ಅದಾಗಿಯೋ ವೇಗವಾಗಿ ಬದಲಾಗುತ್ತಿರುವ ಅಂತರಾಷ್ಟ್ರೀಯ ಮಾರುಕಟ್ಟೆಗೆ ಚೀನಾ ಹೊಂದಿಕೊಂಡಿದೆ. ಎರಡನೇ ತ್ರೈಮಾಸಿಕ ಹಲವು ಸವಾಲುಗಳ ನಡುವೆಯೂ ಈ ಬೆಳವಣಿಗೆಯನ್ನು ಸಾಧಿಸಲಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಬ್ಯೂರೋ (NBS) ನ ಉಪ ಆಯುಕ್ತರಾದ ಶೆಂಗ್ ಲೈಯುನ್ ಹೇಳುತ್ತಾರೆ. ಈ ಬಾರಿಯ ಎರಡನೇ ತ್ರೈಮಾಸಿಕದಲ್ಲಿ ಜಗತ್ತು ಹಲವು ಅನಿರೀಕ್ಷಿತ ಬೆಳವಣಿಗೆಯನ್ನು ಕಂಡಿದೆ. ಇರಾನ್-ಇಸ್ರೇಲ್ ಯುದ್ಧ, ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ, ಡೊನಾಲ್ಟ್ ಟ್ರಂಪ್ ಅವರ ಅಮೆರಿಕಾ ಮೊದಲ ನೀತಿಯೂ ಜಾಗತೀಕ ಮಾರುಕಟ್ಟೆ ಮೇಲೆ ಪರಿಣಾಮವನ್ನು ಬೀರಿತ್ತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಬದಲಾಗುತ್ತಿರುವ ಸನ್ನಿವೇಶಗಳ ಕುರಿತು ಮಾತನಾಡಿರುವ ಶೆಂಗ್ ಲೈಯುನ್, ಸದ್ಯ ಜಾಗತೀಕ ಮಾರುಕಟ್ಟೆ ವಾತಾವರಣ ಸ್ಥಿರವಾಗಿದೆ. ಆಂತರಿಕ ರಚನಾತ್ಮಕ ಸಮಸ್ಯೆಗಳನ್ನು ಮೂಲಭೂತವಾಗಿ ಇನ್ನೂ ಶಮನ ಮಾಡಿಲ್ಲ. ಭವಿಷ್ಯದಲ್ಲಿ ಆರ್ಥಿಕ ಕಾರ್ಯಕ್ಷಮತೆಯ ಅಡಿಪಾಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ನಮಗೆ ತಿಳಿದಿದೆ ಎಂದು ಹೇಳುತ್ತಾರೆ.

ರಾಷ್ಟ್ರೀಯ ಅಂಕಿಅಂಶ ಬ್ಯೂರೋ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಜೂನ್‌ನಲ್ಲಿ ಗ್ರಾಹಕ ಖರ್ಚು ನಿರೀಕ್ಷೆಗಿಂತ ಕಡಿಮೆಯಾಗಿದೆ. ಕೈಗಾರಿಕಾ ಉತ್ಪಾದನೆ ನಿರೀಕ್ಷೆಗಿಂತ ಉತ್ತಮವಾಗಿದೆ. ಕಳೆದ ವರ್ಷ ಇದೇ ತಿಂಗಳು ಚಿಲ್ಲರೆ ಮಾರಾಟ ಪ್ರಮಾಣ ಶೇ.4.8ಕ್ಕೆ ಇಳಿಕೆಯಾಗಿದ್ರೆ, ಮೇನಲ್ಲಿ ಶೇ.6.4ರಷ್ಟು ಜಿಗಿತ ಕಂಡಿತ್ತು. 

ಚೀನಾ ಜಿಡಿಪಿ ಶೇ.5.2 ತಲುಪುವಲ್ಲಿ ಯಶಸ್ವಿ

ಕಳೆದ ವರ್ಷ ಜೂನ್‌ನಲ್ಲಿ ಕೈಗಾರಿಕಾ ಉತ್ಪದನಾ ಪ್ರಮಾಣ ಶೇ.6.8ರಷ್ಟು ಬೆಳವಣಿಗೆ ಕಂಡಿತ್ತು. ಇದು ಮೇ ತಿಂಗಳಿಗಿಂತ ಶೇ.5.8ಕ್ಕಿಂತ ಹೆಚ್ಚಾಗಿತ್ತು. ಕಳೆದ ವರ್ಷ ದೇಶೀಯ ಆರ್ಥಿಕತೆಯಲ್ಲಿನ ದೌರ್ಬಲ್ಯದಿಂದಾಗಿ ಚೀನಾ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಗ್ರಾಹಕರು ಚೀನಾ ವಸ್ತುಗಳ ಮೇಲಿನ ವಿಶ್ವಾಸವನ್ನು ಸಹ ಕಳೆದುಕೊಂಡಿದ್ದರು. ಇದೀಗ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿರುವ ಚೀನಾ ಜಿಡಿಪಿ ಶೇ.5.2 ತಲುಪುವಲ್ಲಿ ಯಶಸ್ವಿಯಾಗಿದೆ.