ಇಬ್ಬರು ಸರ್ಕಾರಿ ನೌಕರರ ವಿರುದ್ಧ ಲಂಚ ಕೇಳಿದ ಆರೋಪ ಬಂದಿತ್ತು. ಅದು ಬರೋಬ್ಬರಿ 30 ವರ್ಷಗಳ ಹಿಂದೆ. ನಂತರ ಅದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಪ್ರಕರಣಕ್ಕೆ ತೆರೆ ಬಿದ್ದಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ನವದೆಹಲಿ: ಕೇವಲ 20 ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಕಳೆದ ಮೂರು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಗುಜರಾತ್‌ನ ಇಬ್ಬರು ಸರ್ಕಾರಿ ನೌಕರರಿಗೆ ಕೊನೆಗೂ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದೆ. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯಗಳು ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ಇಬ್ಬರನ್ನೂ ದೋಷಮುಕ್ತಗೊಳಿಸಿದೆ.

ಏನಿದು 20 ರೂಪಾಯಿ ಪ್ರಕರಣ?

ಈ ಘಟನೆ ನಡೆದಿದ್ದು 1996ರ ಫೆಬ್ರವರಿಯಲ್ಲಿ. ಗುಜರಾತ್‌ನ ಆನಂದ್ ಜಿಲ್ಲೆಯ ಬೆಚಾರಿ ಗ್ರಾಮ ಪಂಚಾಯತ್ ಕಚೇರಿಗೆ ವಿದ್ಯಾರ್ಥಿಯೊಬ್ಬ ಆದಾಯ ಪ್ರಮಾಣಪತ್ರ ಪಡೆಯಲು ಬಂದಿದ್ದ. ಆಗ ಅಲ್ಲಿನ ಗುಮಾಸ್ತ (Clerk) ತನಗೆ 100 ರೂಪಾಯಿ ಮತ್ತು ಅಲ್ಲಿನ ಸೇವಕನಿಗೆ (Peon) 20 ರೂಪಾಯಿ ಸೇರಿ ಒಟ್ಟು 120 ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಎನ್ನಲಾಗಿತ್ತು.

ಎಸಿಬಿ ಬಲೆ ಮತ್ತು ಟ್ವಿಸ್ಟ್

ವಿದ್ಯಾರ್ಥಿ ಈ ಬಗ್ಗೆ ಭ್ರಷ್ಟಾಚಾರ ನಿರೋಧಕ ದಳಕ್ಕೆ (ACB) ದೂರು ನೀಡಿದ್ದ. ಎಸಿಬಿ ಅಧಿಕಾರಿಗಳು ಬಲೆ ಬೀಸಿ 120 ರೂಪಾಯಿಗಳನ್ನು ವಿದ್ಯಾರ್ಥಿಯ ಕೈಗೆ ಕೊಟ್ಟು ಕಳುಹಿಸಿದ್ದರು. ಪ್ರಮಾಣಪತ್ರ ಪಡೆದ ನಂತರ ವಿದ್ಯಾರ್ಥಿ ಸೇವಕನಿಗೆ 20 ರೂಪಾಯಿ ನೀಡಿದ್ದ. ಎಸಿಬಿ ದಾಳಿ ನಡೆಸಿದಾಗ ಸೇವಕನ ಬಳಿ 20 ರೂಪಾಯಿ ಪತ್ತೆಯಾಗಿತ್ತು. ಗುಮಾಸ್ತನ ಬಳಿ 100 ರೂಪಾಯಿ ಪತ್ತೆಯಾಗಿರಲಿಲ್ಲ.

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠವು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ.

  • ಬೇಡಿಕೆ ಸಾಬೀತಾಗಿಲ್ಲ: ಲಂಚದ ಹಣ ಪತ್ತೆಯಾದ (Recovery) ತಕ್ಷಣವೇ ಅದು ಅಪರಾಧವಾಗುವುದಿಲ್ಲ. ಅದಕ್ಕೂ ಮೊದಲು ಅಧಿಕಾರಿ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದ (Demand) ಎಂಬುದು ಸಾಬೀತಾಗಬೇಕು. ಈ ಪ್ರಕರಣದಲ್ಲಿ ಸೇವಕ ಲಂಚ ಕೇಳಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ.
  • ವ್ಯತಿರಿಕ್ತ ಹೇಳಿಕೆಗಳು: ದೂರು ನೀಡಿದ್ದ ವಿದ್ಯಾರ್ಥಿ ವಿಚಾರಣೆ ವೇಳೆ ಪದೇ ಪದೇ ಹೇಳಿಕೆ ಬದಲಿಸಿದ್ದಾನೆ. ಒಮ್ಮೆ 200 ರೂಪಾಯಿ ಕೇಳಿದ್ದರು ಎಂದಿದ್ದರೆ, ಮತ್ತೊಮ್ಮೆ ಸೇವಕ ಲಂಚ ಕೇಳಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
  • ಅಂದು ಈದ್ ಹಬ್ಬವಿತ್ತು: ಸೇವಕ ತನ್ನ ವಾದದಲ್ಲಿ ಮರುದಿನ ಈದ್ ಹಬ್ಬವಿದ್ದ ಕಾರಣ ವಿದ್ಯಾರ್ಥಿ ತನಗೆ 20 ರೂಪಾಯಿಗಳನ್ನು ಇನಾಮಾಗಿ ನೀಡಿದ್ದನೇ ಹೊರತು ಅದು ಲಂಚವಲ್ಲ ಎಂದು ಹೇಳಿದ್ದ. ಇದನ್ನು ಸುಪ್ರೀಂ ಕೋರ್ಟ್ ಸಮಂಜಸ ಎಂದು ಪರಿಗಣಿಸಿದೆ.

30 ವರ್ಷಗಳ ಹೋರಾಟ

ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ಈ ಇಬ್ಬರು ನೌಕರರನ್ನು ದೋಷಿಗಳು ಎಂದು ತೀರ್ಪು ನೀಡಿದ್ದವು. ಆದರೆ ಸುಪ್ರೀಂ ಕೋರ್ಟ್ ಈ ತೀರ್ಪುಗಳನ್ನು ರದ್ದುಪಡಿಸಿದೆ. ಕೇವಲ 20 ರೂಪಾಯಿಗಾಗಿ ಇಬ್ಬರು ನೌಕರರು ಕಳೆದ 30 ವರ್ಷಗಳಿಂದ ಅನುಭವಿಸಿದ ಮಾನಸಿಕ ಯಾತನೆ ಮತ್ತು ಕಳಂಕಕ್ಕೆ ಈ ತೀರ್ಪು ಮುಕ್ತಿ ನೀಡಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವಾಗ ತನಿಖಾ ಸಂಸ್ಥೆಗಳು ಕೇವಲ ಹಣ ಪತ್ತೆಯಾಗುವುದನ್ನೇ ಸಾಕ್ಷಿ ಎಂದು ಪರಿಗಣಿಸಬಾರದು ಲಂಚದ ಬೇಡಿಕೆ ಇತ್ತೇ ಎಂಬುದು ಮುಖ್ಯ ಎಂದು ಈ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ.