ಹಾಸನದ ಆಲೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಮಗುವಿನ ಕತ್ತು ಹಿಸುಕಿ ಜೀವ ತೆಗೆದಿದ್ದಾಳೆ. ನಂತರ ತಾನೂ ಸಾವಿಗೆ ಶರಣಾಗಿದ್ದಾಳೆ. ಕಾರಣ ಮಾತ್ರ ನಿಗೂಢವಾಗಿದೆ.

ಆಲೂರು (ಹಾಸನ): ಹೆತ್ತ ತಾಯಿಯೇ ತನ್ನ ಮಗುವನ್ನು ಕೊಂದಿರುವ ಘಟನೆ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ. ತನ್ನ ಎರಡು ವರ್ಷದ ಕಂದಮ್ಮನ ಕತ್ತು ಹಿಸುಕಿ ಕೊಂದ ತಾಯಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮ*ತ್ಯೆಗೆ ಶರಣಾಗಿದ್ದಾಳೆ.

ಈ ಹೃದಯವಿದ್ರಾವಕ ಘಟನೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ನಡೆದಿದೆ. ಮೃತರನ್ನು ತಾಯಿ ಅನುಶ್ರೀ (28 ವರ್ಷ) ಹಾಗೂ ಮಗು ಆರ್ಯನ್ (2 ವರ್ಷ) ಎಂದು ಗುರುತಿಸಲಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ದಂಪತಿ

ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ನಿವಾಸಿಗಳಾದ ಶ್ರೀನಿವಾಸ್ ಮತ್ತು ಅನುಶ್ರೀ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಶ್ರೀನಿವಾಸ್ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಈ ಕುಟುಂಬ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್‌ ಬಡಾವಣೆಯಲ್ಲಿ ಬಾಡಿಗೆ ಮನೆಗೆ ಬಂದು ವಾಸಿಸುತ್ತಿತ್ತು.

ನಡೆದಿದ್ದೇನು?

ಪತಿ ಶ್ರೀನಿವಾಸ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ದುರಂತ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಅನುಶ್ರೀ, ಮೊದಲು ತನ್ನ 2 ವರ್ಷದ ಮಗುವಿನ ಕತ್ತು ಹಿಸುಕಿ ಸಾಯಿಸಿದ್ದಾಳೆ. ಬಳಿಕ ಮಗುವಿನ ಮೃತದೇಹವನ್ನು ಬೆಡ್ ಮೇಲೆ ಮಲಗಿಸಿ ಅದೇ ಕೋಣೆಯಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ನಡುವೆ ಏನಾದರೂ ಕೌಟುಂಬಿಕ ಕಲಹವಿತ್ತೇ? ಅಥವಾ ಅನುಶ್ರೀ ಬೇರಾವುದಾದರೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳೇ? ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ವಿಷಯ ತಿಳಿಯುತ್ತಿದ್ದಂತೆ ಆಲೂರು ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.