Politics: ಬಿಜೆಪಿಯು ರಾಮಮಂದಿರ, 370ನೇ ವಿಧಿ ರದ್ದತಿಯಂತಹ ಸಾಧನೆಗಳ ಮೂಲಕ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಿದ್ದು, ಮುಂದಿನ ಬ್ರಹ್ಮಾಸ್ತ್ರಕ್ಕೆ ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ, ಯುವಕರ ಆಕ್ರೋಶವನ್ನು ಮತಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಏನು ಮಾಡಲಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಕಳೆದ ಒಂದು ದಶಕದಿಂದ ದೇಶದ ರಾಜಕೀಯ ಚಿತ್ರಣವನ್ನು ಗಮನಿಸಿದರೆ, ಬಿಜೆಪಿ ತನ್ನದೇ ಆದ ಪ್ರಬಲ ಮತ್ತು ಸ್ಪಷ್ಟ ಯೋಜನೆಗಳಿಂದ ಜನರನ್ನು ತಲುಪಿದೆ. 2014ರಲ್ಲಿ ಸ್ವಚ್ಛ ಭಾರತ್, ಶೌಚಾಲಯ ನಿರ್ಮಾಣ, ಉಜ್ವಲ ಯೋಜನೆಗಳ ಮೂಲಕ ಮಹಿಳಾ ಮತದಾರರ ಮನ ಗೆದ್ದರೆ, ನಂತರ ಆರ್ಟಿಕಲ್ 370 ರದ್ದು ಹಾಗೂ ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಾಣದಂತಹ ಸಾಂಪ್ರದಾಯಿಕ ಹಿಂದುತ್ವದ ಕಾರ್ಯಸೂಚಿ ಈಡೇರಿಸುವ ಮೂಲಕ ತನ್ನ ಮತಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಂಡಿದೆ. ಆದರೆ, ಈಗ ಪ್ರಶ್ನೆ ಮೂಡಿರುವುದು ವಿಪಕ್ಷ ಕಾಂಗ್ರೆಸ್ (ಕೈ ಪಡೆ) ಅಂಗಳದಲ್ಲಿ. ಅದೇನೆಂದರೆ, ಬಿಜೆಪಿಯ ಈ ಸಾಲು ಸಾಲು ಸಾಧನೆಗಳು ಹಾಗೂ ರಾಷ್ಟ್ರೀಯತೆಯ ನರೇಟಿವ್‌ಗೆ ಪ್ರತಿಯಾಗಿ ಜನರನ್ನು ತಕ್ಷಣವೇ ಆಕರ್ಷಿಸುವಂತಹ ಆ ‘ಬ್ರಹ್ಮಾಸ್ತ್ರ’ ಯಾವುದು? ಎನ್ನುವುದೇ ಸದ್ಯ ಕೈ ಪಡೆಯ ನಿದ್ದೆಗೆಡಿಸಿರುವ ಪ್ರಮುಖ ವಿಷಯವಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಯುವಕರ ಅಸಮಾಧಾನವನ್ನು 'ವೋಟ್' ಆಗಿ ಪರಿವರ್ತಿಸುವ ಸವಾಲು!
ಇಂದಿನ 18 ರಿಂದ 28 ವರ್ಷದ ಯುವ ಪೀಳಿಗೆ ಹಾಗೂ ಮಹಿಳೆಯರು ಸರ್ಕಾರದ ಕೆಲವು ನೀತಿಗಳು, ಉದ್ಯೋಗದ ಸಮಸ್ಯೆಗಳು ಮತ್ತು ಪರೀಕ್ಷಾ ವ್ಯವಸ್ಥೆಯ ಲೋಪಗಳ ವಿರುದ್ಧ ಸೋಶಿಯಲ್ ಮೀಡಿಯಾ ಹಾಗೂ ರಸ್ತೆಗಳಲ್ಲಿ ಧ್ವನಿ ಎತ್ತುತ್ತಿದ್ದಾರೆ. ಆದರೆ, ಈ ಯುವಕರ 'ರೀಲ್ಸ್ ಆಕ್ರೋಶ'ವನ್ನು ಧನಾತ್ಮಕ ಮತಗಳಾಗಿ (Votes) ತಮ್ಮತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಬಳಿ ನಿರ್ದಿಷ್ಟವಾದ, ಬಲವಾದ ಪರ್ಯಾಯ ಕಲ್ಪನೆ ಇಲ್ಲದಿರುವುದು ಕೈ ನಾಯಕರನ್ನು ಆತಂಕಕ್ಕೀಡುಮಾಡಿದೆ.
ಉಚಿತ ಯೋಜನೆಗಳ ಆಚೆಗೆ ಪರ್ಯಾಯ ದಾರಿ ಇಲ್ಲವೇ?
ಕಾಂಗ್ರೆಸ್ ನೀಡುತ್ತಿರುವ 'ಗ್ಯಾರಂಟಿ' ಅಥವಾ ಉಚಿತ ಯೋಜನೆಗಳು ತಕ್ಷಣಕ್ಕೆ ಜನರನ್ನು ತಲುಪುತ್ತಿವೆಯಾದರೂ, ದೇಶದ ಅಭಿವೃದ್ಧಿ, ಹೊಸ ತಂತ್ರಜ್ಞಾನ ಮತ್ತು ಆರ್ಥಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯುವ ನವಪೀಳಿಗೆಯನ್ನು (Gen-Z) ಆಕರ್ಷಿಸುವ ಬೃಹತ್ ಯೋಜನೆ ಕಾಂಗ್ರೆಸ್ ಬಳಿ ಇಲ್ಲ. ಕೇವಲ ಸರ್ಕಾರದ ಮೇಲಿನ ಆಕ್ರೋಶದ ಲಾಭ ಪಡೆಯಲು ಯತ್ನಿಸಿದರೆ ಅದು ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಜಯ ತಂದುಕೊಡುವುದಿಲ್ಲ ಎನ್ನುವುದು ಗಾಂಧಿ ಕುಟುಂಬ ಹಾಗೂ ಹಿರಿಯ ನಾಯಕರ ಆತಂಕಕ್ಕೆ ಕಾರಣವಾಗಿದೆ.
ನಾಯಕತ್ವ ಮತ್ತು ರಾಜಕೀಯ ಸಂವಹನದ ತೊಡಕು!
ಬಿಜೆಪಿಯ ಪ್ರಬಲ ಸಂಘಟನೆ ಮತ್ತು ಮೋದಿಯವರ ‘ಮ್ಯಾಸ್ಕುಲಿನ್’ ಭಾಷಣ ಶೈಲಿಗೆ ಕೌಂಟರ್ ನೀಡಲು, ರಾಹುಲ್ ಗಾಂಧಿ ಅವರು ಯುವಕರನ್ನು ಗೌರವದಿಂದ ಆಲಿಸುವ ‘ಮೆಚ್ಯೂರ್’ ನಾಯಕತ್ವದ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಶೈಲಿ ಕೇವಲ ಭಾಷಣಕ್ಕೆ ಸೀಮಿತವಾಗದೆ, ಬಿಜೆಪಿಯ ಕಲ್ಪನೆಗಳಿಗಿಂತ ದೊಡ್ಡದಾದ ಒಂದು 'ರಾಷ್ಟ್ರೀಯ ವಿಷನ್' ಆಗಿ ಹೊರಹೊಮ್ಮದಿದ್ದರೆ ಮತದಾರರನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸ. ಒಟ್ಟಿನಲ್ಲಿ, ಬಿಜೆಪಿ ತನ್ನ ಹಳೆಯ ಸಾಧನೆಗಳ ಮೇಲೆಯೇ ನಿಂತಿರಲು ಸಾಧ್ಯವಿಲ್ಲದ ಸ್ಥಿತಿ ಒಂದೆಡೆಯಾದರೆ, ಬಿಜೆಪಿಯನ್ನು ಸೋಲಿಸಲು ಬರೀ ಆಕ್ರೋಶ ಸಾಲದು, ಪ್ರಬಲವಾದ 'ನೆಕ್ಸ್ಟ್ ಬಿಗ್ ಐಡಿಯಾ' ಬೇಕೇ ಬೇಕು ಎಂಬ ಸತ್ಯ 'ಕೈ' ಪಾಳೆಯದ ನಿದ್ದೆಗೆಡಿಸಿದೆ.
ಯಾವುದಿರಬಹುದು ಬಿಜೆಪಿ ಆ ಬ್ರಹ್ಮಾಸ್ತ್ರ!
ರಾಮಮಂದಿರ ಮತ್ತು 370ನೇ ವಿಧಿಯ ನಂತರ, ಬಿಜೆಪಿಯ ಮುಂದಿನ ಬ್ರಹ್ಮಾಸ್ತ್ರ ‘ಒಂದೇ ದೇಶ, ಒಂದೇ ಚುನಾವಣೆ’, ಏಕರೂಪ ನಾಗರಿಕ ಸಂಹಿತೆ (UCC) ಹಾಗೂ ‘ವಿಕಸಿತ ಭಾರತ 2047’ ಯೋಜನೆಗಳಾಗುವ ಸಾಧ್ಯತೆಯಿದೆ. ಹೊಸ ಪೀಳಿಗೆ ಮತ್ತು Gen-Z ಯುವಕರನ್ನು ಸೆಳೆಯಲು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ಹಾಗೂ ಡಿಜಿಟಲ್ ರಾಷ್ಟ್ರೀಯತೆಯ ಬೃಹತ್ ಕಲ್ಪನೆಯನ್ನು ಬಿಜೆಪಿ ಮುನ್ನೆಲೆಗೆ ತರುತ್ತಿದೆ. ಇದನ್ನು ಎದುರಿಸಲು ಕಾಂಗ್ರೆಸ್‌ಗೆ ಕೇವಲ ಉಚಿತ ಗ್ಯಾರಂಟಿಗಳು ಅಥವಾ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು ಸಾಲದು. ಬಿಜೆಪಿಯ ಈ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ರಾಷ್ಟ್ರೀಯತೆಗೆ ಪ್ರತಿಯಾಗಿ ಉದ್ಯೋಗ ಸೃಷ್ಟಿ, ಶಿಕ್ಷಣ ಸುಧಾರಣೆ ಹಾಗೂ ಹೊಸ ಆರ್ಥಿಕತೆಯ ಸ್ಪಷ್ಟ ಪರ್ಯಾಯ ಕಲ್ಪನೆ ಜನರೆದುರು ಇಟ್ಟರೆ ಮಾತ್ರ ಕಾಂಗ್ರೆಸ್ ಈ ಭಾರಿ ಬ್ರಹ್ಮಾಸ್ತ್ರವನ್ನು ಸಮರ್ಥವಾಗಿ ತಡೆದುಕೊಳ್ಳಲು ಸಾಧ್ಯ. ಇಲ್ಲವಾದರೆ ಬಿಜೆಪಿ ಎದುರು ನಿಟ್ಟುಸಿರು ಬಿಡುವುದಂತು ಗ್ಯಾರಂಟಿ.


