ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಗೆ ದೊರೆತ ಜನಬೆಂಬಲದಿಂದ ಹತಾಶಗೊಂಡಿರುವ ಕಾಂಗ್ರೆಸ್ ಸರ್ಕಾರವು ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಬೆಲೆ ಏರಿಕೆ ವಿರುದ್ಧ ಕಿಡಿಕಾರಿದರು.
ಬಳ್ಳಾರಿ (ಸೆ.9) ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಸಾಕಷ್ಟು ಜನಬೆಂಬಲ ಸಿಕ್ಕಿದೆ. ಇದರಿಂದ ಹತಾಶೆಗೊಂಡು ಬಿಜೆಪಿಯ ಪಾದಯಾತ್ರೆಯನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಅಲ್ಲದೆ, ಈ ಸರ್ಕಾರ ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಜನರು ದಂಗೆ ಏಳುವ ಮುನ್ನ ವಿಧಾನಸಭೆ ವಿಸರ್ಜಿಸಿ, ಜನತಾ ನ್ಯಾಯಾಲಯಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡಿದ್ದಾರೆ.
ಬಿಜೆಪಿಗೆ ಸಿಕ್ಕಿರೋ ಜನಬೆಂಬಲ ಕಂಡು ಕರೆಂಟ್ ಕಟ್ ಮಾಡಿದೆ
ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ವಾಪಸ್‌ಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಮಂಗಳವಾರ 8ನೇ ದಿನಕ್ಕೆ ಕಾಲಿಟ್ಟಿತು. ಬಳ್ಳಾರಿ ಜಿಲ್ಲೆಯ ಹಳೆದರೋಜಿಯಿಂದ ಕುಡುತಿನಿವರೆಗೆ 17 ಕಿಮೀ.ದೂರ ಕ್ರಮಿಸಿತು. ಕುಡತಿನಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯದ ವಿವಿಧ ಮೂಲೆಯಿಂದ ಬಂದು ಜನರು ನಮ್ಮ ಪಾದಯಾತ್ರೆಯನ್ನು ಬೆಂಬಲಿಸಿದ್ದಾರೆ. ನಮ್ಮ ಪಾದಯಾತ್ರೆಗೆ ಸಿಕ್ಕ ಜನಬೆಂಬಲ ನೋಡಿ ಹತಾಶೆಗೊಂಡಿರುವ ಸರ್ಕಾರ, ಬಿಜೆಪಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ. ಕಂಪ್ಲಿಗೆ ಪಾದಯಾತ್ರೆ ಬಂದಾಗ ಕರೆಂಟ್ ಕಟ್ ಮಾಡಿದ್ರು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಸಮಾವೇಶ ಮಾಡಲು ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿದ್ರು. ಅನುಮತಿ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶ ಮಾಡ್ತೇವೆ ಎಂದಾಗ ಅನುಮತಿ ಕೊಟ್ಟರು ಎಂದು ಆರೋಪಿಸಿದರು.
ಕರ್ನಾಟಕ ಉಡ್ತಾ ಪಂಚಾಬ್ ಆಗ್ತಿದೆ
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕಿದ್ದಾರೆ. ಗೃಹಲಕ್ಷಿ ಹಣ ನೀಡ್ತಿಲ್ಲ. ಹಳ್ಳಿ,ಹಳ್ಳಿಯಲ್ಲಿ ಹೆಂಡ ಸಿಗ್ತಿದೆ. ಇಸ್ಪೀಟು ದಂಧೆ ಎಲ್ಲೆಡೆ ಪ್ರಾರಂಭವಾಗಿದೆ. ಎಲ್ಲೆಡೆ ಡ್ರಗ್ ಮಾಫಿಯಾ ಜೋರಾಗಿದ್ದು, ಕರ್ನಾಟಕ ಉಡ್ತಾ ಪಂಚಾಬ್ ಆಗ್ತಿದೆ. ವಾಲ್ಮೀಕಿ ಹಣ ಲೂಟಿ ಹೊಡೆದ್ರು. ಲೂಟಿ ಹೊಡೆದ ನಾಗೇಂದ್ರ ಅವರನ್ನು ಮಂತ್ರಿ ಮಾಡಿದ್ರು. ಬಳಿಕ, ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದ್ರು ಎಂದು ದೂರಿದರು.
‘ನಿವೀಗ ನೂರು ದಿನದ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ, ಯಾವ ಪುರುಷಾರ್ಥಕ್ಕೆ ನಿಮ್ಮ ಸಂಭ್ರಮಾಚರಣೆ’ ಎಂದು ಡಿಕೆಶಿಯನ್ನು ಪ್ರಶ್ನಿಸಿದ ವಿಜಯೇಂದ್ರ, ‘ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದೀರಿ. ಕಾಲ ಮಿಂಚಿದೆ. ಜನರು ದಂಗೆ ಏಳುವ ಮುನ್ನ ವಿಧಾನಸಭೆಯನ್ನು ವಿಸರ್ಜಿಸಿ, ಜನತಾ ನ್ಯಾಯಾಲಯಕ್ಕೆ ಬನ್ನಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ನೀಡಿದರು.
ಇಂದು ಕುಡುತಿನಿಯಿಂದ ರಾಮೇಶ್ವರನಗರಕ್ಕೆ ಯಾತ್ರೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಿಂದ ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಆರಂಭಗೊಂಡ ಬಳ್ಳಾರಿ ಚಲೋ ಪಾದಯಾತ್ರೆ ಅಂತಿಮ ಹಂತಕ್ಕೆ ತಲುಪಿದ್ದು, ಬುಧವಾರ ಕುಡುತಿನಿಯಿಂದ ಬಳ್ಳಾರಿಯ ರಾಮೇಶ್ವರನಗರಕ್ಕೆ ಆಗಮಿಸಲಿದೆ. ಸೆ.10ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆಯನ್ನು ಪೂರ್ಣಗೊಳಿಸಲಾಗುತ್ತದೆ.


