ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಕಳ್ಳತನ ಮಾಡುವಾಗ ಸಾಕುನಾಯಿ ಬೊಗಳಬಾರದು ಎಂಬ ಕಾರಣಕ್ಕೆ ಕಳ್ಳರು ಅದರ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ನಡೆಸಿದ್ದಾರೆ. ಮಧ್ಯರಾತ್ರಿ ಸುರಿದ ಭಾರಿ ಮಳೆಯ ಲಾಭ ಪಡೆದು ಮನೆಯ ಬೀಗ ಮುರಿದ ಖದೀಮರು ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 40,000 ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಬಿಹಾರ: ದಿನನಿತ್ಯ ಕಳ್ಳತನ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಆದರೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿರುವ ಒಂದು ವಿಚಿತ್ರ ಕಳ್ಳತನ ಪ್ರಕರಣ ಪೊಲೀಸರನ್ನೂ ಹುಬ್ಬೇರಿಸುವಂತೆ ಮಾಡಿದೆ. ಕಳ್ಳತನ ಮಾಡುವಾಗ ಸಾಕುನಾಯಿ ಬೊಗಳಿ ಮನೆಯವರನ್ನು ಅಥವಾ ನೆರೆಹೊರೆಯವರನ್ನು ಎಚ್ಚರಿಸಬಾರದು ಎಂಬ ಕಾರಣಕ್ಕೆ ಮೊದಲು ನಾಯಿಯ ಬಾಯಿಗೆ ಗಟ್ಟಿಯಾಗಿ ಟೇಪ್ (Plaster) ಸುತ್ತಿ, ನಂತರ ಇಡೀ ಮನೆಯನ್ನು ದೋಚಿದ್ದಾರೆ.
ಮಳೆಯ ಲಾಭ ಪಡೆದ ಕಳ್ಳರು
Muffasil (ಮುಫಾಸಿಲ್) ಪೊಲೀಸ್ ಠಾಣಾ ವ್ಯಾಪ್ತಿಯ ಭರನ್ವರ್ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ನಿವಾಸಿ ಅಲೋಕ್ ಸಿಂಗ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಘಟನೆ ನಡೆದ ರಾತ್ರಿ ಅಲೋಕ್ ಸಿಂಗ್ ಮತ್ತು ಅವರ ಪತ್ನಿ ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದ್ದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಕ್ಷಾಬಂಧನ ಹಬ್ಬದ ಹಿನ್ನೆಲೆಯಲ್ಲಿ ಇವರ ಮಕ್ಕಳು ಅಕ್ಕನ ಮನೆಗೆ ತೆರಳಿದ್ದರು. ಅಂದು ರಾತ್ರಿ ಗ್ರಾಮದಲ್ಲಿ ಭಾರಿ ಮಳೆಯಾಗುತ್ತಿತ್ತು ಹಾಗೂ ಮನೆಯೊಳಗೆ ಕೂಲರ್ ಆನ್ ಆಗಿದ್ದರಿಂದ ಹೊರಗಿನ ಯಾವುದೇ ಸದ್ದು ಮನೆಯವರಿಗೆ ಕೇಳಿಸಿಲ್ಲ. ಇದರ ಸಂಪೂರ್ಣ ಲಾಭವನ್ನು ಕಳ್ಳರು ಪಡೆದುಕೊಂಡಿದ್ದಾರೆ.
ಮಧ್ಯರಾತ್ರಿ ಕಳ್ಳರು ಮನೆಯ ಆವರಣವನ್ನು ಪ್ರವೇಶಿಸಿದ್ದಾರೆ. ಈ ವೇಳೆ ಮನೆಯ ಮುಂಭಾಗದಲ್ಲಿ ಕಟ್ಟಿ ಹಾಕಲಾಗಿದ್ದ ಸಾಕುನಾಯಿ ಬೊಗಳಲು ಯತ್ನಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಳ್ಳರು ನಾಯಿಯ ಬಾಯಿಗೆ ಗಟ್ಟಿಯಾಗಿ ಪ್ಲಾಸ್ಟರ್ ಸುತ್ತಿ ಬಾಯಿ ತೆರೆಯದಂತೆ ಮಾಡಿದ್ದಾರೆ. ಇದರಿಂದಾಗಿ ನಾಯಿ ಬೊಗಳಲು ಸಾಧ್ಯವಾಗದೆ ಮೂಕಪ್ರಾಣಿಯಂತೆ ನಿಂತಿದೆ. ನಾಯಿಯ ಬಾಯಿ ಮುಚ್ಚಿದ ನಂತರ ಖದೀಮರು ಅತ್ಯಂತ ನಿರಾತಂಕವಾಗಿ ಮನೆಯ ಮೂರು ಕೋಣೆಗಳ ಬೀಗ ಮುರಿದು ಒಳನುಗ್ಗಿದ್ದಾರೆ.
ಮನೆಯೊಳಗಿದ್ದ ಎರಡು ಗೋದ್ರೇಜ್ ಕಪಾಟುಗಳು ಹಾಗೂ ಎರಡು ಕಬ್ಬಿಣದ ಟ್ರಂಕ್‌ಗಳನ್ನು ಒಡೆದ ಕಳ್ಳರು, ಅದರಲ್ಲಿದ್ದ ಸುಮಾರು 3.5 ರಿಂದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ 40,000 ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಕೊಠಡಿಗಳಲ್ಲಿದ್ದ ಸಾಮಗ್ರಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಸಾಕುನಾಯಿಯ ಬಾಯಿಗೆ ಪ್ಲಾಸ್ಟರ್ ಅಂಟಿಸಿರುವುದನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಗ್ರಾಮದ ಸುರಕ್ಷತೆಯ ಬಗ್ಗೆ ಆತಂಕ
ಜನವಸತಿ ಪ್ರದೇಶದ ಮಧ್ಯದಲ್ಲೇ ಇರುವ ಈ ಮನೆಯಲ್ಲಿ ನಡೆದಿರುವ ಧೀರ ಕಳ್ಳತನ ಇಡೀ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ಸಮಾಜ ಸೇವಕ ವಿಕ್ರಮ್ ಕುಮಾರ್ ಸಿಂಗ್ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಮಳೆಗಾಲದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ರಾತ್ರಿ ಗಸ್ತು ತಿರುಗುವಿಕೆಯನ್ನು ಚುರುಕುಗೊಳಿಸುವಂತೆ ಅವರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಮುಫಾಸಿಲ್ ಠಾಣೆಯ ಪೊಲೀಸ್ ತಂಡ ಭರನ್ವರ್ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಕಳ್ಳರ ಪತ್ತೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.


