ರಸ್ತೆ ಮಧ್ಯೆ ಇರುವ ನಂದಿ ವಿಗ್ರಹವನ್ನು ನಿಜವಾದ ಹಸು ಎಂದು ನಂಬಿದ ಕೋತಿಯೊಂದು ಅದಕ್ಕೆ ಬಾಳೆಹಣ್ಣು ತಿನ್ನಿಸಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ನಂದಿ ಹಣ್ಣು ತಿನ್ನದಿದ್ದಾಗ ಕೋತಿಯೇ ಅದನ್ನು ತಿಂದಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಮಂಗನ ಈ ಹಂಚಿ ತಿನ್ನುವ ಗುಣ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಾಣಿಗಳು ಮೂಕವಾಗಿದ್ದರೂ ಅವುಗಳಿಗೆ ಭಾವನೆಗಳು ಮನುಷ್ಯರಿಗಿಂತಲೂ ಹೆಚ್ಚೇ ಇರುತ್ತವೆ. ಅದರಲ್ಲಿಯೂ, ಮಂಗನ ಬಗ್ಗೆ ಹೇಳುವುದಾದರೆ, ಅವುಗಳನ್ನು ಮನುಷ್ಯರ ಪೂರ್ವಜರು ಎಂದೇ ಕರೆಯಲಾಗುತ್ತದೆ. ಕೋತಿಯನ್ನು ಹನುಮಂತನ ರೂಪದಲ್ಲಿಯೂ ನೋಡುವುದು ಇದೆ. ಹಲವಾರು ಗ್ರಾಮಗಳಲ್ಲಿ ಕೋತಿಗಳ ಉಪಟಳದಿಂದ ಜನರು ತತ್ತರಿಸಿ ಹೋಗುತ್ತಿದ್ದರೂ, ಕೋತಿಗಳಿಗೆ ಅದರದ್ದೇ ಆದ ವಿಶೇಷತೆ ಇದೆ. ಚಿಕ್ಕ ಮಕ್ಕಳು ತುಂಟಾಟ ಮಾಡಿದಾಗ ಕೋತಿಚೇಷ್ಠೆ ಎನ್ನುವುದು ಉಂಟು. ಕೋತಿಗಳಿಗೂ ಮನುಷ್ಯರಿಗೂ ಅವಿನಾಭಾವ ಸಂಬಂಧವಿದೆ.

ಕೋತಿಗಳು ಎಷ್ಟೇ ಚೇಷ್ಠೆ ಮಾಡಿದರೂ ಕೆಲವೊಮ್ಮೆ ಅಲ್ಲಲ್ಲಿ ಅಪರೂಪದ ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ರಸ್ತೆಯ ಮಧ್ಯೆಯಲ್ಲಿ ಇರುವ ನಂದಿ ವಿಗ್ರಹವೊಂದನ್ನು ನಿಜವಾದ ಹಸು ಎಂದು ನಂಬಿರುವ ಕೋತಿಯೊಂದು ಅದಕ್ಕೆ ಬಾಳೆಹಣ್ಣು ತಿನ್ನಿಸುತ್ತಿರುವ ದೃಶ್ಯ ಇದಾಗಿದೆ. ಸಾಮಾನ್ಯವಾಗಿ ಮನೆಯಲ್ಲಿ ಕಂದಮ್ಮಗಳು ಗೊಂಬೆಗಳನ್ನು ಕೊಟ್ಟಾಗ ಅವುಗಳಿಗೆ ಜೀವ ಇದೆ ಎಂದು ನಂಬಿ ಅವುಗಳಿಗೆ ತಿನಿಸುವುದನ್ನು ನೋಡಬಹುದು. ಅದೇ ರೀತಿ ಇಲ್ಲಿ ಕೋತಿಯೊಂದು ತಿನ್ನು ತಿನ್ನು ಎಂದು ನಂದಿ ವಿಗ್ರಹಕ್ಕೆ ಬಾಳೆಹಣ್ಣನ್ನು ಒತ್ತಾಯಪೂರ್ವಕವಾಗಿ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ.

ಕೊನೆಗೆ ಮಂಗ ಮಾಡಿದ್ದೇನು?

ಆದರೆ, ಕೊನೆಗೆ ನಂದಿ ಅದನ್ನು ಸ್ವೀಕರಿಸದಿದ್ದಾಗ, ಬೇಸರಗೊಂಡ ಮಂಗ, ಇನ್ನೇನು ಮಾಡುವುದು, ಬಾಳೆಹಣ್ಣು ವೇಸ್ಟ್​ ಆಗಬಾರದಲ್ಲ ಎನ್ನುವ ಕಾರಣಕ್ಕೆ ತಾನೇ ಸಿಪ್ಪೆ ಸುಲಿದು ತಿಂದಿದೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇಂಥ ಕಪೋಕಲ್ಪಿತ ವಿಡಿಯೋಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ವೈರಲ್​ ಮಾಡುವುದು ಇದೆ. ಆದರೆ ಇದು ನಕಲಿ ವಿಡಿಯೋ ಅಲ್ಲ, ಬದಲಿಗೆ ಸಿಸಿವಿಟಿ ಫುಟೇಜ್​ನಲ್ಲಿ ಕಂಡುಬಂದಿರುವ ಅಸಲಿ ವಿಡಿಯೋನೇ ಆಗಿದೆ.

View post on Instagram
 

ಜನರಿಗೆ ಪಾಠ

ಮಂಗನ ಬುದ್ಧಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮನುಷ್ಯರು ಬೇರೆಯವರಿಗೆ ಕೊಟ್ಟು ತಿನ್ನೋದು ಬಹಳ ಕಡಿಮೆ. ಆದರೆ ಈ ಕೋತಿ, ತನಗೆ ಬಾಳೆ ಹಣ್ಣು ಬೇಕಿದ್ದರೂ ಅದರ ಸಿಪ್ಪೆಯನ್ನು ಸುಲಿದು ನಂದಿಗೆ ತಿನ್ನಿಸುತ್ತಿರುವುದು ಆಹ್ಲಾದವನ್ನು ಉಂಟುಮಾಡುತ್ತದೆ. ಇದನ್ನು ನೋಡಿ ಜನರು ಕೂಡ ಕಲಿಯಬೇಕಿದೆ ಎನ್ನುತ್ತಿದ್ದಾರೆ.