ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ನಾಯ್ಡು ಸರ್ಕಾರದಲ್ಲಿ ತಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಹೋದರನಿಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ಸ್ಟೋರ ಇಲ್ಲಿದೆ..

ಅಮರಾವತಿ: ಆಂಧ್ರಪ್ರದೇಶ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಹಿರಿಯ ಸಹೋದರ ಮತ್ತು ಜನಸೇನಾ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗಬಾಬು ಕೊನಿಡೇಲ ಅವರಿಗೆ ರಾಜ್ಯ ಸರ್ಕಾರವು ಅತ್ಯಂತ ಪ್ರಮುಖ ಜವಾಬ್ದಾರಿ ನೀಡಿದೆ. ನಾಗಬಾಬು ಅವರನ್ನು 'ಎಪಿ-ಗ್ರೀನ್' (AP-GREEN) ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಸಂಪುಟ ದರ್ಜೆಯ (Cabinet Rank) ಸ್ಥಾನಮಾನವನ್ನು ನೀಡಲಾಗಿದೆ.

ಏನಿದು AP-GREEN?

ಪರಿಸರ ಮತ್ತು ಅರಣ್ಯ ಇಲಾಖೆಯ ಅಡಿಯಲ್ಲಿ ಬರುವ ಆಂಧ್ರಪ್ರದೇಶ ಸೊಸೈಟಿ ಫಾರ್ ಗ್ರೀನಿಂಗ್ ಅಂಡ್ ರಿಫಾರೆಸ್ಟೇಶನ್ ಫಾರ್ ಇಕಲಾಜಿಕಲ್ ಎನ್ರಿಚ್‌ಮೆಂಟ್ (AP-GREEN) ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ನಾಗಬಾಬು ಕಾರ್ಯನಿರ್ವಹಿಸಲಿದ್ದಾರೆ. ಆಗಸ್ಟ್ 17 ರಂದು ಈ ಕುರಿತು ಅಧಿಕೃತ ಸರ್ಕಾರಿ ಆದೇಶ ಹೊರಬಿದ್ದಿದೆ. 2047ರ ವೇಳೆಗೆ ಆಂಧ್ರಪ್ರದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 50 ರಷ್ಟು ಭಾಗವನ್ನು ಅರಣ್ಯ ಮತ್ತು ಹಸಿರು ಹೊದಿಕೆಯಿಂದ ವಿಸ್ತರಿಸುವ ಬೃಹತ್ ಗುರಿಯನ್ನು ಈ ಸಮಿತಿಗೆ ನೀಡಲಾಗಿದೆ. ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ನಾಗಬಾಬು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ.

ವಿಶೇಷವೆಂದರೆ ಪವನ್ ಕಲ್ಯಾಣ್ ಅವರು ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆಯ ಸಚಿವರಾಗಿದ್ದಾರೆ. ಅವರು AP-GREEN ನ ಒಟ್ಟಾರೆ ಅಧ್ಯಕ್ಷರಾಗಿದ್ದರೆ, ನಾಗಬಾಬು ಅವರು ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ (ಉಪಾಧ್ಯಕ್ಷರ ಸ್ಥಾನಮಾನದಲ್ಲಿ) ಕೆಲಸ ಮಾಡಲಿದ್ದಾರೆ. ಅಸ್ತಿತ್ವದಲ್ಲಿರುವ ಸಾಮಾಜಿಕ ಅರಣ್ಯ ವಿಭಾಗವು ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಿತಿಯನ್ನು ಹೊಂದಿರುವ ಕಾರಣ ಸರ್ಕಾರವು 'AP-GREEN' ಎಂಬ ಪ್ರತ್ಯೇಕ ಸಂಸ್ಥೆಯನ್ನು ರಚಿಸಿದೆ.

ಜಿಲ್ಲಾ ಮಟ್ಟದಲ್ಲೂ ಹಸಿರು ಕ್ರಾಂತಿ

ರಾಜ್ಯ ಹಸಿರು ಮಿಷನ್ ಅನುಷ್ಠಾನಕ್ಕಾಗಿ AP-GREEN ಅಡಿಯಲ್ಲಿ ಜಿಲ್ಲಾ ಹಸಿರು ಅಭಿವೃದ್ಧಿ ಏಜೆನ್ಸಿಗಳನ್ನು (DGDA) ಸಹ ರಚಿಸಲಾಗಿದೆ. ಸದ್ಯ ಇರುವ 11 ಸಾಮಾಜಿಕ ಅರಣ್ಯ ವಿಭಾಗಗಳನ್ನು ಡಿಜಿಡಿಎಗಳಾಗಿ ಪರಿವರ್ತಿಸಲಾಗುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ 14 ಹೊಸ ವಿಭಾಗಗಳನ್ನು ಸ್ಥಾಪಿಸಲಾಗುತ್ತಿದೆ. ನಾಗಬಾಬು ನೇತೃತ್ವದ ಈ ಸಮಿತಿಯಲ್ಲಿ ಅರಣ್ಯ ಪಡೆಯ ಮುಖ್ಯಸ್ಥರು, ಕೃಷಿ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಆಯುಕ್ತರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ.

ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ (MLC) ನಾಗಬಾಬು ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿರುವುದು ಜನಸೇನಾ ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಪವನ್ ಕಲ್ಯಾಣ್ ಮತ್ತು ನಾಗಬಾಬು ಜೋಡಿಯು ಆಂಧ್ರವನ್ನು ಹಸಿರುಮಯವಾಗಿಸಲು ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.