ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಸಿಕ್ಕ ಬೆನ್ನಲ್ಲೇ ಪರಪ್ಪನ ಅಗ್ರಹಾರದ 'ಸಿ' ಬ್ಯಾರಕ್‌ನಲ್ಲಿ ದೇವರ ಫೋಟೋ ಹಿಂದೆ ಬಚ್ಚಿಟ್ಟಿದ್ದ ಮತ್ತೊಂದು ಮೊಬೈಲ್ ಪತ್ತೆಯಾಗಿದೆ. ಹಾಗಿದ್ದರೆ ಆ ಮೊಬೈಲ್ ಯಾರದ್ದು?
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಪತ್ತೆ ಮತ್ತೆ ಮತ್ತೆ ಆಗ್ತಿದೆ. ಕೆಲವು ದಿನಗಳ ಹಿಂದೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜೈಲಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು ಕಾರ್ಯಾಚರಣೆಯನ್ನ ಮುಂದುವರಿಸಿದ್ದಾರೆ. ಇದೀಗ ಜೈಲಿನಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಪತ್ತೆಯಾಗಿದೆ.
ದೇವರ ಫೋಟೋ ಹಿಂದೆ ಫೋನ್!
ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಸಿಕ್ಕಿದ ದಿನವೇ ಜೈಲಿನ ಅಧಿಕಾರಿಗಳು ಜೈಲಿನಾದ್ಯಂತ ಮತ್ತೊಂದು ಸುತ್ತಿನ ಗುಪ್ತ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 'ಸಿ' ಬ್ಯಾರಕ್‌ನ ಎರಡನೇ ಕೊಠಡಿಯಲ್ಲಿ ತಪಾಸಣೆ ನಡೆಸಿದಾಗ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಅಲ್ಲಿನ ಗೋಡೆಗೆ ನೇತು ಹಾಕಿದ್ದ ದೇವರ ಫೋಟೋವೊಂದರ ಹಿಂಬದಿಯಲ್ಲಿ ಬಹಳ ಚಾಣಾಕ್ಷತನದಿಂದ 'ವಿವೋ' (Vivo) ಕಂಪನಿಯ ಮೊಬೈಲ್ ಅನ್ನು ಅಡಗಿಸಿಡಲಾಗಿತ್ತು ಎನ್ನಲಾಗಿದೆ.
ಸಿಮ್ ಇಲ್ಲ, ಸ್ವಿಚ್ ಆಫ್!
ಅಧಿಕಾರಿಗಳು ವಶಪಡಿಸಿಕೊಂಡ ಮೊಬೈಲ್ ಸ್ವಿಚ್ ಆಫ್ ಸ್ಥಿತಿಯಲ್ಲಿತ್ತು. ಅಷ್ಟೇ ಅಲ್ಲದೆ ಮೊಬೈಲ್‌ನಲ್ಲಿ ಯಾವುದೇ ಸಿಮ್ ಕಾರ್ಡ್ ಇರಲಿಲ್ಲ. ಈ ಮೊಬೈಲ್ ಅನ್ನು ಯಾವ ಕೈದಿ ಬಳಸುತ್ತಿದ್ದ? ಜೈಲಿನೊಳಗೆ ಬೆಲೆಬಾಳುವ ಫೋನ್ ಹೇಗೆ ಬಂತು? ಇದರ ಹಿಂದೆ ಯಾರಿದ್ದಾರೆ ಅನ್ನೋದ್ರ ಬಗ್ಗೆ ಅಧಿಕಾರಿಗಳು ಆಳವಾದ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈಗ ಎಫ್‌ಐಆರ್ ದಾಖಲಾಗಿದೆ. ಜೈಲಿನಲ್ಲಿ ಸರಣಿ ಮೊಬೈಲ್‌ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೈಲಿನ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಪ್ರತಿ ಬ್ಯಾರಕ್ ಮೇಲೂ ಹದ್ದಿನ ಕಣ್ಣಿಡಲಾಗಿದ್ದು ನಿಷೇಧಿತ ವಸ್ತುಗಳ ಪೂರೈಕೆಗೆ ಬ್ರೇಕ್ ಹಾಕಲು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣದಿಂದಲೇ ತತ್ತರಿಸಿದ್ದ ಜೈಲಾಡಳಿತಕ್ಕೆ, ಈ ಎರಡನೇ ಮೊಬೈಲ್ ಪತ್ತೆ ಪ್ರಕರಣ 'ಗಾಯದ ಮೇಲೆ ಬರೆ ಎಳೆದಂತಾಗಿದೆ'.


