ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದಲ್ಲಿ ಬೃಹತ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ 'ಶಹಜಾದ್ ಭಟ್ಟಿ' ಭಯೋತ್ಪಾದಕ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ.
ನವದೆಹಲಿ (ಆ.17): ದೇಶದ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದಲ್ಲಿ ಬೃಹತ್ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ (ISI) ಬೆಂಬಲಿತ 'ಶಹಜಾದ್ ಭಟ್ಟಿ' ಭಯೋತ್ಪಾದಕ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಈ ಬೃಹತ್ ಕಾರ್ಯಾಚರಣೆಯನ್ನು ಕೊಂಡಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶಾದ್ಯಂತ 200ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಲಾಗಿದ್ದು, ಅವರ ಭೀಕರ ದಾಳಿಯ ಸಂಚನ್ನು ತಡೆಗಟ್ಟಲಾಗಿದೆ ಎಂದು ಸೋಮವಾರ ತಿಳಿಸಿದ್ದಾರೆ.
14 ರಾಜ್ಯಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ: ಅಮಿತ್ ಶಾ ಮಾಹಿತಿ
ಈ ಕುರಿತು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಯೋತ್ಪಾದನೆಯ ವಿರುದ್ಧ ನರೇಂದ್ರ ಮೋದಿ ಸರ್ಕಾರದ "ಶೂನ್ಯ ಸಹಿಷ್ಣುತೆ" (Zero Tolerance) ನೀತಿಗೆ ಈ ಯಶಸ್ವಿ ಕಾರ್ಯಾಚರಣೆ ಬಲವಾದ ಉದಾಹರಣೆಯಾಗಿದೆ ಎಂದಿದ್ದಾರೆ.
"ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಮೋದಿ ಸರ್ಕಾರವು ಐಎಸ್‌ಐ ಬೆಂಬಲಿತ ಶಹಜಾದ್ ಭಟ್ಟಿ ಭಯೋತ್ಪಾದಕ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. 200ಕ್ಕೂ ಹೆಚ್ಚು ಉಗ್ರರನ್ನು ಬಂಧಿಸುವ ಮೂಲಕ ಭಾರಿ ವಿಧ್ವಂಸಕ ದಾಳಿಯ ಯೋಜನೆಗಳನ್ನು ಭದ್ರತಾ ಪಡೆಗಳು ನೀರುಪಾಲು ಮಾಡಿವೆ. ದೇಶದ 14 ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಸಂಘಟಿತ ಕಾರ್ಯಾಚರಣೆ ನಡೆಸಿದ ಭಾರತೀಯ ಭದ್ರತಾ ಪಡೆಗಳು, ಈ ಭೀಕರ ನೆಟ್‌ವರ್ಕ್ ಅನ್ನು ಬೇರುಸಹಿತ ಕಿತ್ತೆಸೆದಿವೆ" ಎಂದು ಅಮಿತ್ ಶಾ ವಿವರಿಸಿದ್ದಾರೆ.
ಪಾಕಿಸ್ತಾನ್ ಆರ್ಡ್‌ನನ್ಸ್ ಫ್ಯಾಕ್ಟರಿ ಗ್ರೇನೆಡ್‌ಗಳು, ಐಇಡಿ ವಶ!
ಐಎಸ್‌ಐ ಧನಸಹಾಯದೊಂದಿಗೆ ಕೆಲಸ ಮಾಡುತ್ತಿದ್ದ ಈ ಉಗ್ರ ಜಾಲದಿಂದ ಭಾರಿ ಪ್ರಮಾಣದ ಆಯುಧಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಇಡಿ (IED) ಸ್ಫೋಟಕಗಳು, ಪಿಸ್ತೂಲ್‌ಗಳು, ಜೀವಂತ ಮದ್ದುಗಂಡು ಗೂಢಚರ್ಯೆಗೆ ಬಳಸುತ್ತಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ಕಾರ್ಯಾಚರಣೆಯ ವೇಳೆ ಸಿಕ್ಕಿಬಿದ್ದಿರುವ ಹ್ಯಾಂಡ್ ಗ್ರೇನೆಡ್‌ಗಳ (ಕೈಬಾಂಬ್) ಮೇಲೆ 'ಪಾಕಿಸ್ತಾನ್ ಆರ್ಡ್‌ನನ್ಸ್ ಫ್ಯಾಕ್ಟರಿ' (Pakistan Ordnance Factory) ಮುದ್ರೆ ಹಾಗೂ ಗುರುತುಗಳಿರುವುದು ಪತ್ತೆಯಾಗಿದೆ. ಈ ಉಗ್ರ ಜಾಲವು ದೇಶಾದ್ಯಂತ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು ಎಂದು ಗೃಹ ಸಚಿವಾಲಯ ತಿಳಿಸಿದೆ.
ಹೈ ಅಲರ್ಟ್ ಹಿನ್ನೆಲೆಯಲ್ಲಿ ಚುರುಕಾದ ಕಾರ್ಯಾಚರಣೆ
ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ಕಟ್ಟುನಿಟ್ಟಿನ ಕಣ್ಗಾವಲು ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳನ್ನು ಭದ್ರತಾ ಸಂಸ್ಥೆಗಳು ಚುರುಕುಗೊಳಿಸುತ್ತವೆ. ಅದೇ ರೀತಿ ಈ ಬಾರಿಯೂ ಭಾರತದಾದ್ಯಂತ ವಿವಿಧ ರಾಜ್ಯಗಳ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಿಂದಾಗಿ ದೇಶದ ಭದ್ರತೆಗೆ ಎದುರಾಗಿದ್ದ ಭಾರಿ ಗಂಡಾಂತರವೊಂದು ತಪ್ಪಿದಂತಾಗಿದೆ.


