ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ತಮ್ಮ ಕ್ಷೇತ್ರವನ್ನು ಬರಪೀಡಿತ ಎಂದು ಘೋಷಿಸದ ಕಾರಣ ನೀಡಿ ಉಪಸಭಾಪತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸದ್ಯ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರು ಅವರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ರಾಜ್ಯ ಸಂಪುಟ ವಿಸ್ತರಣೆ ಬಳಿಕ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಮತ್ತೆ ಕಾಣಿಸಿದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿದ್ದ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಇಂದು ಬೆಳಿಗ್ಗೆ ತಮ್ಮ ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಬರದ ಕಾರಣ ನೀಡಿದ್ದು, ಇಂದು ಬೆಳಿಗ್ಗೆ ವಿಧಾನ ಸೌಧಕ್ಕೆ ಆಗಮಿಸಿದ ಯಶವಂತರಾಯಗೌಡ ಪಾಟೀಲ್ ಅವರು, ವಿಧಾನಸಭೆಯ ಉಪಸಭಾಪತಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.

ತಕ್ಷಣವೇ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾದ ಹಿರಿಯ ನಾಯಕರು ಮತ್ತು ಮುಖ್ಯಮಂತ್ರಿಗಳು ತೀವ್ರ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ತಿಳಿಸಿದ್ದು, ಕಳೆದ ಅರ್ಧ ಗಂಟೆಗೂ ಹೆಚ್ಚು ಕಾಲದಿಂದ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಕೆ ಪ್ರಯತ್ನ ನಡೆಯುತ್ತಿದೆ.

ರಾಜೀನಾಮೆ ಪ್ರತ್ರದ ಸಂಪೂರ್ಣ ಸಾರಾಂಶ ಇಲ್ಲಿದೆ

"ವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಆರಂಭದಲ್ಲಿ ಸ್ವಲ್ಪ ಮಳೆ ಬಿದ್ದ ಪ್ರಯುಕ್ತ ರೈತರು ಸಾಲಮಾಡಿ ಬೀಜ, ಗೊಬ್ಬರಗಳನ್ನು ಖರೀದಿಸಿ, ಭೀತ್ತನೆ ಮಾಡಿರುತ್ತಾರೆ. ಆದರೆ ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಬತ್ತಿಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯುಂಟಾಗಿರುತ್ತದೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ದಿನಾಂಕ:-28.08.2026ರಂದು ಮನವಿ ಪತ್ರವನ್ನು ಸಲ್ಲಿಸಿ, ಇಂಡಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ವಿಜಯಪುರ ಜಿಲ್ಲೆಯ ಒಟ್ಟು 13 ತಾಲ್ಲೂಕುಗಳ ಪೈಕಿ ನನ್ನ ಇಂಡಿ ಮತ್ತು ಚಡಚಣ ಈ 2 ತಾಲ್ಲೂಕುಗಳನ್ನು ಹೊರತುಪಡಿಸಿ, ಇದುವರೆಗೂ ರಾಜ್ಯದ 188 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿರುತ್ತದೆ.

ನಾನು ಆಡಳಿತ ಪಕ್ಷದ ಶಾಸಕನಾಗಿದ್ದು, ನಮ್ಮ ಸರ್ಕಾರಕ್ಕೆ ಮುಜಗರವಾಗಬಾರದೆಂದು ಸೂಕ್ಷ್ಮ ಮತಿಯನಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇನೆ. ಆದರೂ ಸಹ ನಮ್ಮ ಮಾತಿಗೆ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದ್ದು, ಈಗಿನ ರಾಜಕೀಯ ವಾತವಾರಣದಲ್ಲಿ ಬಲಾಡ್ಯರಿಗೆ ಒತ್ತಡ ತಂತ್ರಗಳನ್ನು ಎಣಿಯುವವರಿಗೆ ಮನ್ನಣೆ ನೀಡಲಾಗುತ್ತಿದೆ. ನಮ್ಮಂತಹ ಸೌಮ್ಯ ಸ್ವಭಾವದವರಿಗೆ ಯಾವುದೇ ಕೆಲಸಗಳಿಗೆ ಮನ್ನಣೆ ದೊರೆಯುತ್ತಿಲ್ಲ.

ಆದ್ದರಿಂದ ನನ್ನ ಕ್ಷೇತ್ರದ ಜನರ ಆಶೆ, ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗದ ಪ್ರಯುಕ್ತ ನಾನು ಸ್ವ-ಇಚ್ಚೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅಂಗೀಕರಿಸಿ" ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದುಕೊಂಡಿದ್ದಾರೆ.