ಇತ್ತೀಚಿನ ದಿನಗಳಲ್ಲಿ 30-40ರ ವಯಸ್ಸಿನ ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳಪೆ ಜೀವನಶೈಲಿ, ಒತ್ತಡ ಮತ್ತು ಕೆಟ್ಟ ಆಹಾರ ಪದ್ಧತಿಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ. 25 ವರ್ಷದ ನಂತರ ನಿಯಮಿತ ತಪಾಸಣೆ ಮತ್ತು ಉತ್ತಮ ಜೀವನಶೈಲಿಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನನಗಿನ್ನೂ 40 ವರ್ಷ ಆಗಿಲ್ಲ, ಈಗಲೇ ಏಕೆ ಹೃದಯದ ಬಗ್ಗೆ ಯೋಚಿಸಬೇಕು? ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಹೃದಯದ ಸಮಸ್ಯೆಗಳು ಕೇವಲ ವಯ್ಯಸ್ಸಾದವರಿಗೆ ಮಾತ್ರ ಬರುತ್ತದೆ ಎಂಬ ಕಾಲ ಹೊರಟುಹೋಗಿದೆ. ಇತ್ತೀಚಿನ ದಿನಗಳಲ್ಲಿ 30-40ರ ವಯಸ್ಸಿನವರಲ್ಲಿ ಹೃದಯಾಘಾತ ಆಗುತ್ತಿರುವ ಸುದ್ದಿಗಳು ಸಾಮಾನ್ಯವಾಗಿಬಿಟ್ಟಿವೆ. ಇವುಗಳನ್ನು ನೋಡಿದಾಗ “ನನಗೂ ಏನಾದರೂ ಸಮಸ್ಯೆ ಆಗಬಹುದಾ? ಎಂಬ ಭಯ ಕಾಡುವುದು ಸಹಜ.

ಯುವಜನರಲ್ಲಿ ಆಗುತ್ತಿರುವ ಈ ಸಮಸ್ಯೆಗೆ ಒಂದೇ ನಿಖರವಾದ ಕಾರಣ ಇಲ್ಲ. ವೈದ್ಯಕೀಯವಾಗಿ ನೋಡಿದರೆ ಹೃದಯದ ಸಮಸ್ಯೆಗಳಿಗೆ ಹಲವಾರು ಕಾರಣಗಳಿವೆ. ಇತಿಹಾಸವನ್ನು ನೋಡಿದರೆ, ಸರಿಸುಮಾರು 3 ಲಕ್ಷ ವರ್ಷಗಳಿಂದ ಮನುಷ್ಯನ ದೇಹವು, ಕಾಡಿನಲ್ಲಿ ಶಿಕಾರಿ ಮಾಡಿ ಜೀವಿಸುವುದು, ಆಹಾರ ಲಭ್ಯತೆ ಸರಿಯಾಗಿ ಇಲ್ಲದಿರುವುದು ಹಾಗೂ ಕಠಿಣ ದೈಹಿಕ ಶ್ರಮದ ಪರಿಸ್ಥಿತಿಗಳಿಗೆ ಹೊಂದಿಕೊಂಡು ಉತ್ತಮವಾಗಿ ಬದುಕುಳಿಯುವಂತೆ ರೂಪುಗೊಂಡಿದೆ. ಆದರೆ ಹಲವು ದಶಕಗಳಿಂದ ಈ ಶೈಲಿಯಲ್ಲಿ ಬದಲಾವಣೆಗಳಾಗಿವೆ.

  • ದೈಹಿಕ ಚಟುವಟಿಕೆಯ ಕೊರತೆ: ದಿನವಿಡೀ ಕುಳಿತಲ್ಲಿಯೇ ಕೆಲಸ ಮಾಡುವುದು ಹಾಗೂ ಯಾವುದೇ ರೀತಿಯ ವ್ಯಾಯಾಮ ಇಲ್ಲದಿರುವುದು.
  • ಆಹಾರ: ಅತಿಯಾದ ಎಣ್ಣೆಯಲ್ಲಿ ಸಂಸ್ಕರಿಸಿ ಸಿದ್ಧಪಡಿಸಿದ ಆಹಾರ, ಸಕ್ಕರೆ ಹೆಚ್ಚಿರುವ ಆಹಾರ, ಅನಿಯಮಿತ ಆಹಾರ ಸೇವನೆ. ಇವುಗಳಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆ ಆಗುತ್ತದೆ.
  • ಧೂಮಪಾನ ಹಾಗೂ ಮದ್ಯಪಾನ: ಇವುಗಳನ್ನು ಮಾಡುವುದರಿಂದ ಹೃದಯ ಮತ್ತು ರಕ್ತನಾಳಗಳು ಕ್ರಮೇಣ ದುರ್ಬಲವಾಗುತ್ತವೆ.
  • ಮಾನಸಿಕ ಒತ್ತಡ ಹಾಗೂ ನಿದ್ರೆಯ ಕೊರತೆ: ರಾತ್ರಿ ವೇಳೆ ಕೆಲಸ ಮಾಡುವುದು, ತಡವಾಗಿ ಮಲಗುವುದು, ನಿರಂತರ ಆತಂಕ, ಕೆಲಸದ ಒತ್ತಡ ಇವುಗಳು ದೇಹದಲ್ಲಿ ಒತ್ತಡದ ಹಾರ್ಮೋನ್‌ಗಳನ್ನು ಹೆಚ್ಚಿಸುತ್ತವೆ.
  • ಕುಟುಂಬದ ಇತಿಹಾಸ: ತಂದೆ, ತಾಯಿ ಅಥವಾ ರಕ್ತಸಂಬಂಧಿಗಳಿಗೆ ಹೃದಯದ ತೊಂದರೆ ಇದ್ದರೆ, ನಿಮಗೂ ಬರುವ ಸಾಧ್ಯತೆಗಳು ಸ್ವಲ್ಪ ಹೆಚ್ಚು.

ಈ ನಾನಾ ಕಾರಣಗಳಿಂದ ಚಿಕ್ಕ ವಯ್ಯಸ್ಸಿನಲ್ಲಿಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್, ದೇಹದಲ್ಲಿ ಹಾರ್ಮೋನ್‌ಗಳ ಅಸಮತೋಲನೆ ಮುಂತಾದ ತೊಂದರೆಗಳು ಶುರುವಾಗುತ್ತವೆ. ಈ ತೊಂದರೆಗಳು ಮುಂದೆ ಹೃದಯದ ರೋಗಕ್ಕೆ ಕಾರಣವಾಗುತ್ತವೆ. ವಿಪರ್ಯಾಸ ಏನೆಂದರೆ ಈ ತೊಂದರೆಗಳು ಸಹಜವಾಗಿ ಏನೂ ಲಕ್ಷಣಗಳನ್ನು ತೋರುವುದಿಲ್ಲ, ಬೇರೆ ಯಾವುದೋ ತೊಂದರೆಗೆ ವೈದ್ಯರ ಬಳಿ ತೋರಿಸಲು ಹೋದಾಗಲೇ ಈ ಸಮಸ್ಯೆಗಳು ಇರುವುದು ತಿಳಿದುಬರುತ್ತದೆ.

ಇದಕ್ಕೆ ನೀವು ಮಾಡಬೇಕಾದದ್ದು ಏನು ?

25 ವರ್ಷ ದಾಟಿದ ಮೇಲೆ ಯಾವುದೇ ತೊಂದರೆ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಬಿಪಿ, ಶುಗರ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳಿ. ಹೃದಯವನ್ನು ಆರೋಗ್ಯವಾಗಿಡಲು ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ, ಸಣ್ಣ ಬದಲಾವಣೆಗಳು ಕೂಡ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ಅವುಗಳೇನೆಂದರೆ,

  • ಪ್ರತಿದಿನ ಅರ್ಧ ಗಂಟೆ ನಡೆಯುವುದು ಅಥವಾ ವಾರಕ್ಕೆ 150-300 ನಿಮಿಷಗಳ ವ್ಯಾಯಾಮ ಮಾಡುವುದು. ದಿನವಿಡೀ ಸಾಧ್ಯವಾದಷ್ಟು ಚಲನೆಯಲ್ಲಿರಿ.
  • ಹಣ್ಣು-ತರಕಾರಿಗಳು, ಕಾಳುಗಳು ಮತ್ತು ಸೊಪ್ಪುಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿ. ಸಕ್ಕರೆ ಅಂಶ, ಎಣ್ಣೆಯ ಅಂಶ, ಅತಿಯಾಗಿ ಸಂಸ್ಕರಿಸಿದ ಆಹಾರ ಹಾಗೂ ಉಪ್ಪಿನ ಸೇವನೆ ಮಿತವಾಗಿರಲಿ.
  • ಧೂಮಪಾನ ಅಥವಾ ಮದ್ಯಪಾನ ಮಾಡುತ್ತಿದ್ದರೆ, ಕ್ರಮೇಣ ಕಡಿಮೆ ಮಾಡುತ್ತಾ ನಿಲ್ಲಿಸಿ.
  • ದಿನಕ್ಕೆ 7 ರಿಂದ 8 ಗಂಟೆಗಳ ನಿದ್ರೆ ಹೃದಯದ ಆರೋಗ್ಯಕ್ಕೆ ಅತ್ಯಗತ್ಯ.
  • ಮಾನಸಿಕ ಒತ್ತಡಗಳ ನಿವಾರಣೆಗೆ ಪ್ರಾಣಾಯಾಮ ಮಾಡುವುದು ಕೂಡ ಹೃದಯದ ಆರೋಗ್ಯಕ್ಕೆ ನೆರವಾಗುತ್ತದೆ.

ಸ್ವಲ್ಪ ದೂರ ನಡೆದರೂ ಏದುಸಿರು ಅಥವಾ ಸುಸ್ತು, ಕಾರಣವಿಲ್ಲದೆ ಬೆವರು, ಎದೆ ಭಾಗದಲ್ಲಿ ನೋವು, ಭಾರ ಎನಿಸುವುದು, ಕುತ್ತಿಗೆ, ದವಡೆ ಮತ್ತು ಎಡತೋಳಿಗೆ ನೋವು ಹರಡುವುದು, ಎದೆ ಉರಿ – ಇವುಗಳು ಕಂಡುಬಂದಲ್ಲಿ ತಡ ಮಾಡದೆ ವೈದ್ಯರನ್ನು ಭೇಟಿಯಾಗಬೇಕು .

ಹೃದಯದ ಆರೋಗ್ಯ ಎಂದರೆ 40 ದಾಟಿದ ಮೇಲೆ ಯೋಚಿಸುವ ವಿಷಯವಲ್ಲ, ಇಂದಿನಿಂದಲೇ ಆರಂಭಿಸಬೇಕಾದ ಹೂಡಿಕೆ. ಹೃದಯದ ಬಗ್ಗೆ ಭಯಪಡುವುದಕ್ಕಿಂತ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಹೃದಯದ ರೋಗಗಳನ್ನು ತಡೆಗಟ್ಟಿರಿ.

ಲೇಖಕರು: ಡಾ|| ಆದರ್ಶ್ ಕಳ್ಳಿಮಠ, ಸಹಾಯಕ ಪ್ರಾಧ್ಯಾಪಕರು, ಕಾಯಚಿಕಿತ್ಸಾ ವಿಭಾಗ, ಎಸ್ ಡಿ ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ , ಹಾಸನ.