ಕಾವೇರಿ BEATS ಆರನೇ ಆವೃತ್ತಿಯಲ್ಲಿ ಹೃದಯ ಆರೋಗ್ಯಕ್ಕಾಗಿ 6,000ಕ್ಕೂ ಹೆಚ್ಚು ಬೆಂಗಳೂರಿಗರು ಹೆಜ್ಜೆ ಹಾಕಿದ್ದಾರೆ. ಇದೇ ವೇಳೆ 50 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗೆ ಸಂಕಲ್ಪ 2.0 ಘೋಷಣೆ ಮಾಡಲಾಗಿದೆ.
ಬೆಂಗಳೂರು (ಸೆ.28) ಕಾವೇರಿ ಆಸ್ಪತ್ರೆಗಳು ಆಯೋಜಿಸಿದ್ದ ವಾರ್ಷಿಕ ಹೃದಯ ಆರೋಗ್ಯ ಜಾಗೃತಿ ಕಾರ್ಯಕ್ರಮವಾದ ಕಾವೇರಿ BEATSನ ಆರನೇ ಆವೃತ್ತಿಯಲ್ಲಿ 6,000ಕ್ಕೂ ಹೆಚ್ಚು ಬೆಂಗಳೂರಿಗರು ಭಾಗವಹಿಸಿದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ 5 ಕಿ.ಮೀ. ಓಟ, ನಡಿಗೆ ಮತ್ತು ಸೈಕ್ಲಿಂಗ್ ಕಾರ್ಯಕ್ರಮದಲ್ಲಿ ಮಕ್ಕಳು, ಕುಟುಂಬಗಳು, ಉದ್ಯೋಗಿಗಳು, ಹವ್ಯಾಸಿ ಓಟಗಾರರು ಹಾಗೂ ಫಿಟ್‌ನೆಸ್ ಆಸಕ್ತರು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಬೃಹತ್ ಮಾನವ ಹೃದಯದ ಆಕೃತಿ ನಿರ್ಮಿಸುವ ಮೂಲಕ ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮಕ್ಕೆ ಶ್ರೀ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹೃದ್ರೋಗ ವಿಭಾಗದ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ. ಬಿ. ದಿನೇಶ್ ಮತ್ತು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ ನಾರಾಯಣ ಎಂ. ಐಪಿಎಸ್ ಚಾಲನೆ ನೀಡಿದರು.
ನಿಯಮಿತ ದೈಹಿಕ ಚಟುವಟಿಕೆಯ ಜೊತೆಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್ ಮತ್ತು ಕುಟುಂಬದ ವೈದ್ಯಕೀಯ ಹಿನ್ನೆಲೆಯ ಬಗ್ಗೆ ಅರಿವು ಹೊಂದಿರಬೇಕು ಎಂದು ಡಾ. ಬಿ. ದಿನೇಶ್ ಹೇಳಿದ್ದಾರೆ. ಅಪಾಯಕಾರಿ ಅಂಶಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ ಎಂದಿದ್ದಾರೆ. ಹೊರನೋಟಕ್ಕೆ ಆರೋಗ್ಯವಂತರಂತೆ ಕಾಣುವವರಲ್ಲಿಯೂ ಹೈಪರ್‌ಟೆನ್ಷನ್, ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಅಪಾಯಕಾರಿ ಅಂಶಗಳು ಇರಬಹುದು. ಫಿಟ್‌ನೆಸ್ ಜೊತೆಗೆ ವೈಯಕ್ತಿಕ ಹೃದಯ ಆರೋಗ್ಯದ ಅಪಾಯಗಳನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಕಾವೇರಿ ಆಸ್ಪತ್ರೆ, ಎಲೆಕ್ಟ್ರಾನಿಕ್ ಸಿಟಿಯ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನಿರ್ದೇಶಕ ಡಾ. ವಿವೇಕ್ ಜಿ ಹೇಳಿದ್ದಾರೆ.
ಸಂಕಲ್ಪ 2.0ಗೆ ಬೆಂಬಲ
ಈ ವರ್ಷದ BEATS ಕಾರ್ಯಕ್ರಮದ ಮೂಲಕ ಕಾವೇರಿ ಸಂಕಲ್ಪ 2.0ಗೆ ಬೆಂಬಲ ಒಗ್ಗೂಡಿಸಲಾಯಿತು. ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸಾ ನೆರವು ಒದಗಿಸುವುದು ಇದರ ಉದ್ದೇಶವಾಗಿದೆ. ವೈದ್ಯಕೀಯ ಮತ್ತು ಸಾಮಾಜಿಕ-ಆರ್ಥಿಕ ಅರ್ಹತಾ ಮಾನದಂಡಗಳ ಆಧಾರದ ಮೇಲೆ, ಜನ್ಮಜಾತ ಹೃದಯ ಸಮಸ್ಯೆಯ ಶಸ್ತ್ರಚಿಕಿತ್ಸೆ ಅಗತ್ಯವಿರುವ 25 ಮಕ್ಕಳು ಹಾಗೂ ಸಂಕೀರ್ಣ ಬೆನ್ನುಹುರಿ ಶಸ್ತ್ರಚಿಕಿತ್ಸೆ ಅಗತ್ಯವಿರುವ 25 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಬೆಂಬಲ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. BEATSನಲ್ಲಿ ಭಾಗವಹಿಸಿದವರು ಮತ್ತು ಬೆಂಬಲಿಗರು ಈ ಮಕ್ಕಳಿಗಾಗಿ ಸ್ವಯಂಪ್ರೇರಿತವಾಗಿ ಕೊಡುಗೆ ನೀಡುವ ಅವಕಾಶವನ್ನು ಪಡೆದರು. ಆರೋಗ್ಯಕರ ಜೀವನಶೈಲಿಗಾಗಿ ಮಕ್ಕಳು, ಕುಟುಂಬಗಳು ಮತ್ತು ವಿವಿಧ ವಯೋಮಾನದವರು ಒಂದಾಗಿ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಯ ಮನೋಭಾವ ಬೆಳೆಸುತ್ತವೆ ಎಂದು ಡಿಸಿಪಿ ನಾರಾಯಣ ಎಂ., ಐಪಿಎಸ್ ಹೇಳಿದ್ದಾರೆ.
ನಿರಂತರವಾಗಿ ಬೆಳೆಯುತ್ತಿರುವ ಅಭಿಯಾನ
2021ರಲ್ಲಿ ಸುಮಾರು 600 ಜನರೊಂದಿಗೆ ಆರಂಭವಾದ ಕಾವೇರಿ BEATS ಕಾರ್ಯಕ್ರಮದಲ್ಲಿ 2022ರಲ್ಲಿ 1,200ಕ್ಕೂ ಹೆಚ್ಚು, 2023ರಲ್ಲಿ 2,800, 2024ರಲ್ಲಿ 3,500 ಮತ್ತು 2025ರಲ್ಲಿ 5,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.2026ರ ಅಭಿಯಾನದ ಮುಂದಿನ ಹಂತವಾಗಿ ಅಕ್ಟೋಬರ್ 2ರಂದು ಕಾವೇರಿ BEATS Circuit ನಡೆಯಲಿದೆ. ಓಟಗಾರರು, ಸೈಕ್ಲಿಸ್ಟ್‌ಗಳು, ಜಿಮ್ ಅಭ್ಯಾಸಿಗಳು ಮತ್ತು ಫಿಟ್‌ನೆಸ್ ಆಸಕ್ತರನ್ನು ಗುರಿಯಾಗಿಸಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಓಟದ ಹಂತಗಳ ಜೊತೆಗೆ ವಿವಿಧ ಫಂಕ್ಷನಲ್ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ.


