Sea Salt Benefits: ವಿಶೇಷವಾಗಿ, ಸಮುದ್ರದ ಉಪ್ಪು (Sea salt) ನೀರಿನಿಂದ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಕೆಲವು ಪ್ರಯೋಜನಗಳ ಬಗ್ಗೆ ನಾವಿಲ್ಲಿ ನೋಡೋಣ.

ಇಂದಿನ ವೇಗದ ಜೀವನದಲ್ಲಿ ಒತ್ತಡ, ಆಯಾಸ ಮತ್ತು ನೋವಿನಂತಹ ಸಮಸ್ಯೆಗಳು ಅತ್ಯಂತ ಸಾಮಾನ್ಯವಾಗಿವೆ. ಪರಿಣಾಮವಾಗಿ, ಜನರು ಪ್ರತಿಯೊಂದು ಸಣ್ಣ ಸಮಸ್ಯೆಗೂ ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಮೆಡಿಕಲ್‌ಗೋ, ವೈದ್ಯರ ಬಳಿಯೋ ತೆರಳುತ್ತಾರೆ. ಆದರೆ ಕೆಲವು ನೈಸರ್ಗಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ನೀವು ಈ ಸಮಸ್ಯೆಗಳಿಂದ ಪರಿಹಾರವನ್ನು ಕಾಣಬಹುದು. ಅಂತಹ ಒಂದು ವಿಧಾನವೆಂದರೆ ಉಪ್ಪು ನೀರಿನ ಸ್ನಾನ. ಏಕಕಾಲದಲ್ಲಿ ಅನೇಕ ಪ್ರಯೋಜನಗಳನ್ನು ಒದಗಿಸುವ ಇದು ನಿಮಗೆ ಪರಿಣಾಮಕಾರಿ ಪರಿಹಾರವಾಗಿದೆ. ವಿಶೇಷವಾಗಿ, ಸಮುದ್ರದ ಉಪ್ಪು (Sea salt) ನೀರಿನಿಂದ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಕೆಲವು ಪ್ರಯೋಜನಗಳ ಬಗ್ಗೆ ನಾವಿಲ್ಲಿ ನೋಡೋಣ. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಹಾಗೂ ಸರಿಯಾದ ವಿಧಾನ ಯಾವುದು ಎಂದು ತಿಳಿಯೋಣ.

ಸಮುದ್ರದ ಉಪ್ಪು ಎಂದರೇನು?(What Is Sea Salt)

ಹೆಸರೇ ಸೂಚಿಸುವಂತೆ, ಸಮುದ್ರದ ಉಪ್ಪನ್ನು (Sea Salt) ಸಮುದ್ರದ ನೀರನ್ನು ಒಣಗಿಸಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಟೇಬಲ್ ಸಾಲ್ಟ್‌(Table Salt) ಮೆಗ್ನೀಶಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಸತುವುಗಳಂತಹ ಹೆಚ್ಚಿನ ಖನಿಜಗಳನ್ನು ಹೊಂದಿರುತ್ತದೆ. ಈ ಖನಿಜಗಳು ನಮ್ಮ ಚರ್ಮ, ಸ್ನಾಯುಗಳು ಮತ್ತು ಕೀಲುಗಳಿಗೆ ತುಂಬಾ ಪ್ರಯೋಜನಕಾರಿ.

ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳು (Sea Salt Benefits)

ತ್ವಚೆಗೆ ಪ್ರಯೋಜನಕಾರಿ
ಹೆಲ್ತ್‌ಲೈನ್ ವರದಿಯ ಪ್ರಕಾರ, ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಹೊಸ ಚರ್ಮ ರಚನೆಗೆ ಉತ್ತೇಜಿಸುತ್ತದೆ. ಇದಲ್ಲದೆ, ಇದು ಚರ್ಮವನ್ನು ಹೈಡ್ರೀಕರಿಸಿ ಮೃದುವಾಗಿಡಲು ಸಹಾಯ ಮಾಡುತ್ತದೆ.

ಸ್ನಾಯು ನೋವು ನಿವಾರಣೆ
ದಿನವಿಡೀ ಕೆಲಸ ಮಾಡುವುದು, ವಿಶೇಷವಾಗಿ ಕುಳಿತುಕೊಂಡು ಕೆಲಸ ಮಾಡುವವರು (8 ರಿಂದ 9 ಗಂಟೆಗಳ ಕಾಲ) ದೇಹದ ಬಿಗಿತ ಮತ್ತು ಸ್ನಾಯು ನೋವುಗಳನ್ನು ಹೆಚ್ಚಿಸುತ್ತದೆ. ಆಗ ನೋವು ನಿವಾರಕಗಳ ಬದಲಿಗೆ ಉಪ್ಪುನೀರಿನ ಸ್ನಾನವು ಈ ನೋವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ ಮತ್ತು ವಿಶೇಷವಾಗಿ ದಣಿದ ಪಾದಗಳನ್ನು ಶಮನಗೊಳಿಸುತ್ತದೆ.

ಒತ್ತಡ ಕಡಿಮೆ ಮಾಡಲು ಸಹಕಾರಿ
ಉಪ್ಪು ನೀರು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಒಳ್ಳೆಯದು. ಬೆಚ್ಚಗಿನ ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ. ಮಲಗುವ ಮುನ್ನ ಉಪ್ಪು ನೀರಿನ ಸ್ನಾನ ವಿಶೇಷವಾಗಿ ಪ್ರಯೋಜನಕಾರಿ.

ಮಾಡುವುದು ಹೇಗೆ?
*ಮೊದಲಿಗೆ ಒಂದು ಟಬ್ ಅನ್ನು ಬಿಸಿ ನೀರಿನಿಂದ ತುಂಬಿಸಿ.
*ಇದಕ್ಕೆ ಸುಮಾರು 1/4 ಕಪ್ ನಿಂದ 2 ಕಪ್ ಸಮುದ್ರದ ಉಪ್ಪನ್ನು ಸೇರಿಸಿ ಮತ್ತು ಅದು ಉಗುರು ಬೆಚ್ಚಗಿನ ಸ್ಥಿತಿಗೆ ಬರುವವರೆಗೆ ಬಿಡಿ.
*ನೀರು ಉಗುರು ಬೆಚ್ಚಗಾದಾಗ ಮತ್ತು ಉಪ್ಪು ಸಂಪೂರ್ಣವಾಗಿ ಕರಗಿದಾಗ, 15-20 ನಿಮಿಷಗಳ ಕಾಲ ನೀರಿನಲ್ಲಿ ಆರಾಮವಾಗಿ ಕುಳಿತುಕೊಳ್ಳಿ.
*ಅಂತಿಮವಾಗಿ ಉಪ್ಪು ನೀರಿನ ಸ್ನಾನದ ನಂತರ ನಿಮ್ಮ ದೇಹವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಅನ್ನು ಮರೆಯದೆ ಚೆನ್ನಾಗಿ ಹಚ್ಚಿ.
*ಈ ವಿಧಾನವು ಬಹಳ ಬೇಗ ಕೆಲಸ ಮಾಡುತ್ತದೆ. ಆದರೆ ನಿಮ್ಮ ಚರ್ಮದ ಮೇಲೆ ಯಾವುದೇ ತೆರೆದ ಗಾಯಗಳು ಅಥವಾ ಸೋಂಕುಗಳಿದ್ದರೆ ಅಥವಾ ನಿಮಗೆ ಉಪ್ಪಿನಿಂದ ಅಲರ್ಜಿ ಇದ್ದರೆ ಉಪ್ಪಿನ ಸ್ನಾನ ಮಾಡಬೇಡಿ.