Mental Health: ಚೆನ್ನಾಗಿ ಆಡಿಕೊಂಡಿರಬೇಕಾದ ಮಕ್ಕಳೇ ಈಗೀಗ ಸ್ಟ್ರೆಸ್ ಎಂದು ಹೇಳಲು ಶುರು ಮಾಡಿದ್ದಾರೆ. ಅದೊಂದು ಫ್ಯಾಷನ್ ಎನ್ನುವಂತಾಗಿದೆ. ಆದರೆ ಇದು ತಂದೊಡ್ಡುತ್ತಿರುವ ಸಮಸ್ಯೆಗಳು ಮಾತ್ರ ಒಂದೆರಡಲ್ಲ.

"ತ್ತೀಚೆಗೆ ನಡೆಯುತ್ತಿರುವ ಹಲವು ಮನೋ ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಸುಮಾರು ಶೇ. 60 ಮಾನಸಿಕ ಅಸ್ವಸ್ಥರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆನ್ನಲಾಗುತ್ತಿದೆ. ಒತ್ತಡಕ್ಕೆ ಪೂರಕವಾಗಿ ಅನೇಕ ಮಾನಸಿಕ ಸಮಸ್ಯೆಗಳು ಹಿಂದೆಗಿಂತಲೂ ಮುಂಚೆಯೇ ಹದಿಹರೆಯದ ವಯಸ್ಸಲ್ಲೇ ಇಣುಕಲು ಶುರುವಾಗಿದೆ. ಲೈಫನ್ನು ಬಿಂದಾಸ್ ಆಗಿ ತಗೊಂಡು, ಚೆನ್ನಾಗಿ ಉಂಡು, ತಿಂದು, ಆಟವಾಡಿಕೊಂಡಿರಬೇಕಾದ 19 ರಿಂದ 20 ವರ್ಷ ವಯಸ್ಸಿನಲ್ಲಿಯೇ ಆತಂಕ, ಖಿನ್ನತೆ ಮನೆ ಮಾಡುತ್ತಿದೆ. ಇದಕ್ಕೆ ಮಾದಕ ದ್ರವ್ಯ ಸೇವನೆಯಂಥ ದುಶ್ಚಟಗಳ ಜೊತೆ ಜೊತೆಗೆ ಮೊಬೈಲ್ ಅಡಿಕ್ಷನ್ ಹಾಗೂ ಮನೆಯಲ್ಲಿನ ಕೌಟುಂಬಿಕ ಕಲಹಗಳೂ ಮನುಷ್ಯನ ಸಂತೋಷವನ್ನು ಕಿತ್ತು ತಿನ್ನುತ್ತಿದೆ. ಇದು ಸಮಾಜ, ದೇಶಕ್ಕೆ ಮುಂದಿನ ದಿನಗಳಲ್ಲಿ ಮಾರಕವಾಗುವುದರಲ್ಲಿ ಅನುಮಾನವೇ ಇಲ್ಲ" ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಸದಾನಂದ್ ರಾವ್ ತಿಳಿಸಿದ್ದು, ಈ ಕುರಿತು ವಿವಾರವಾದ ಮಾಹಿತಿ ಇಲ್ಲಿದೆ ನೋಡಿ..

ಖಿನ್ನತೆ, ಆತಂಕಕ್ಕೇನು ಕಾರಣ?

ಅತೀ ಹೆಚ್ಚಿನ ಶೈಕ್ಷಣಿಕ ನಿರೀಕ್ಷೆಗಳು (Academic Pressure), ಉದ್ಯೋಗ ಅಸುರಕ್ಷತೆ (Job Uncertainity), ಡಿಜಿಟಲ್ ಡಿಪೆಂಡೆನ್ಸಿ (Digital Dependency), ಒಂಟಿತನ, ಹಾಗೂ ಮಾದಕ ವಸ್ತುಗಳ ಬಳಕೆ, ಮಾನಸಿಕ ಆರೋಗ್ಯ (Mental Health) ಮೇಲೆ ಅತ್ಯಂತ ಹೆಚ್ಚು ಪರಿಣಾಮವನ್ನು ಬೀರುತ್ತಿದೆ ಎಂಬುದನ್ನು ಇಂಡಿಯನ್ ಸೆಕ್ಯಾಟ್ರಿಕ್ ಸೊಸೈಟಿ ಹೇಳಿದೆ. ಹೆಚ್ಚಿನ ಮಾನಸಿಕ ಅಸ್ವಸ್ಥತೆಗಳು ಹದಿಹರೆಯದ ಕೊನೆಯಲ್ಲಿ ಅಥವಾ 20ನೇ ವರ್ಷದ ಪ್ರಾರಂಭದಿಂದಲೇ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದರ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡುವುದರಿಂದ ಬಹಳ ಬೇಗ ಗುಣಪಡಿಸಬಹುದು. ಆದರೆ ಸಮಸ್ಯೆ ಇರೋದನ್ನು ಒಪ್ಪಿಕೊಳ್ಳಬೇಕಷ್ಟೇ.

ನಮ್ಮ ದೇಶದ ಮತ್ತು ವಿದೇಶದ ಸುಮಾರು 7 ಲಕ್ಷಕ್ಕೂ ಹೆಚ್ಚಿನವರು ಡೇಟಾವನ್ನು ವಿಶ್ಲೇಷಿಸಲಾಗಿದೆ. ಇದರಲ್ಲಿ ಐದನೇ ಮೂರು ಭಾಗದಷ್ಟು ಅಸ್ವಸ್ಥತೆಗಳು 25 ವರ್ಷ ವಯಸ್ಸಿನಲ್ಲಿ ಕಾಣಿಸುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಆರಂಭದಲ್ಲಿ ಚಿಕಿತ್ಸೆ ನೀಡಿದಿದ್ದರೆ, ಜೀವಮಾನವಿಡೀ ಕಾಡಲಿದೆ. ಮಾನಸಿಕ ಅಸ್ವಸ್ಥತೆಗಳಿಗೆ ಸುಮಾರು ಶೇ.75 ರಿಂದ ಶೇ.80 ಜನರು ಇನ್ನೂ ಸರಿಯಾದ ಚಿಕಿತ್ಸೆ ಮತ್ತು ಸಲಹೆಯನ್ನು ಪಡೆದುಕೊಳ್ಳುತ್ತಿಲ್ಲ ಎಂಬುವುದೂ ಈ ಅಧ್ಯಯನದಿಂದ ತಿಳಿದುಬಂದಿದೆ.

ಭಾರತದಲ್ಲೇನು ಕಾರಣ?

ಭಾರತೀಯ ಯುವಕರು ಏಕೆ ಈ ರೀತಿಯ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಕಾರಣಗಳನ್ನು ಕೆದಕಿದರೆ, ಮೊದಲನೆಯದು ಶೈಕ್ಷಣಿಕ ಒತ್ತಡ. ಮಕ್ಕಳು ನೂರಕ್ಕೆ ನೂರು ಅಂಕ ತೆಗೆದರೆ ಮಾತ್ರ ಜೀವನದಲ್ಲಿ ಯಶಸ್ಸು ಶತ ಸಿದ್ಧವೆಂದು ಪೋಷಕರು ಹಾಗೂ ಶಿಕ್ಷಕರು ಬಲವಾಗಿ ನಂಬಿದ್ದು, ಮಕ್ಕಳಿಗೆ ಮಾರ್ಕ್ಸ್ ತರಲು ಮಾತ್ರ ಒತ್ತಡ ಹಾಕಲಾಗುತ್ತಿದೆ. ಆದರೆ, ಮಕ್ಕಳ ಬೇರೆ ಬೇರೆ ಮಾನಸಿಕ ಒತ್ತಡ ಸಮಸ್ಯೆಗಳ ಬಗ್ಗೆ ಯಾರೂ ಕ್ಯಾರೇ ಎನ್ನುತ್ತಿಲ್ಲ.

ಉದ್ಯೋಗ ಅಸುರಕ್ಷತೆ, ಅತಿ ಹೆಚ್ಚು ಸಮಯ ಇಂಟರ್ನೆಟ್ ಬಳಸುತ್ತಿರುವುದು, ಒಂಟಿತನ ಹಾಗೂ ಸೋಷಿಯಲೈಸ್ ಆಗದಿರುವುದೂ ಈ ಮಾನಸಿಕ ಒತ್ತಡಕ್ಕೆ ಮುಖ್ಯ ಕಾರಣ. ಮನೆಯಲ್ಲಿ ಪೋಷಕರು ತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿದ್ದು, ಮಕ್ಕಳಿಗೆ ಕೇಳಿದಷ್ಟು ಹಣ ಕೊಡಲಾಗುತ್ತಿದೆ. ಇದು ಬಹುತೇಕರನ್ನು ಮಾದಕ ವ್ಯಸನದಂಥ ದುಶ್ಟಟಗಳೆಡೆ ಮುಖ ಮಾಡುತ್ತಿರುವುದೂ ಡಿಪ್ರೆಷನ್‌ಗೆ ಹೋಗಲು ಮತ್ತೊಂದು ಕಾರಣವಾಗುತ್ತಿದೆ.

ಭವಿಷ್ಯದ ರೂವಾರಿಗಳಾದ ಯುವಕರಲ್ಲಿಯೇ ಬೇರೆ ಬೇರೆ ಕಾರಣಗಳಿಂದ ಮಾನಸಿಕ ಒತ್ತಡ, ಖಿನ್ನತೆ ಆರಂಭವಾದರೆ ಸಮಾಜದ ಗಟ್ಟಿತನವೇ ಠೊಳ್ಳಾಗುತ್ತದೆ. ಸಮಾಜಘಾತಕ ವ್ಯಕ್ತಿತ್ವಗಳು ಹೆಚ್ಚುತ್ತಿರುವುದು ಮುಂದಿನ ಜನಾಂಗಕ್ಕೆ ಅದರಲ್ಲೂ ಯುವ ಪೀಳಿಗೆಗೆ ಮಾರಕ. ಇದನ್ನು ಸರಿಪಡಿಸಿಕೊಳ್ಳಲು ಪೋಷಕರು, ಕುಟುಂಬದ ಸದಸ್ಯರು, ಮನೋವೈದ್ಯರು, ಮನಃಶಾಸ್ತ್ರಜ್ಞರು ಜೊತೆಯಾಗಿಯೇ ಕಾರ್ಯ ಪ್ರವೃತ್ತರಾಗಬೇಕು. ಖಿನ್ನತೆಯಂಥ ಸೂಚನೆಗಳು ಕಂಡು ಬಂದಾಗ, ಹಿಂಜರೆಯದೇ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ, ಸಮಸ್ಯೆಯನ್ನು ಉಗುರಲ್ಲೇ ಚಿವುಟಬಹುದು. ಇಲ್ಲದಿದ್ದರೆ ಕೊಡಲಿ ತರಬೇಕಾಗುತ್ತೆ. ನೆನಪಿರಲಿ.