ನಿಧಾನವಾಗಿ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸುಲಭ, ತೂಕ ನಿಯಂತ್ರಣ, ಪೋಷಕಾಂಶಗಳ ಉತ್ತಮ ಹೀರಿಕೊಳ್ಳುವಿಕೆ, ಹಲ್ಲು-ಒಸಡುಗಳ ಆರೋಗ್ಯ ವೃದ್ಧಿ, ಒತ್ತಡ ನಿವಾರಣೆ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ಪ್ರತಿ ತುತ್ತನ್ನು ಚೆನ್ನಾಗಿ ಅಗಿಯುವುದು, ಊಟದ ವೇಳೆ ಗಮನ ಬೇರೆಡೆ ಸೆಳೆಯದಿರುವುದು ಮುಖ್ಯ.
Benefits of Eating Slowly: ಇಂದಿನ ವೇಗದ ಜೀವನಶೈಲಿಯಲ್ಲಿ ಜನರು ಹೆಚ್ಚಾಗಿ ಅವಸರದಲ್ಲಿಯೇ ಊಟ ಮಾಡುತ್ತಾರೆ ಅಥವಾ ಬೇಗನೆ ತಿಂದು ಮುಗಿಸುತ್ತಾರೆ ಅಥವಾ ನಡೆಯುತ್ತಾ ತಿನ್ನುತ್ತಾರೆ. ಆದರೆ ಆತುರದಿಂದ ಆಹಾರ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಆಹಾರವನ್ನು ಯಾವಾಗಲೂ ನಿಧಾನವಾಗಿ ಮತ್ತು ಚೆನ್ನಾಗಿ ಅಗಿಯುತ್ತಾ ತಿನ್ನಬೇಕು. ಹೀಗೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗುವುದಲ್ಲದೆ, ತೂಕ ನಿಯಂತ್ರಣ, ಪೋಷಕಾಂಶಗಳ ಉತ್ತಮ ಹೀರಿಕೊಳ್ಳುವಿಕೆ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಹಾಗಾದರೆ ಬನ್ನಿ, ನಿಧಾನವಾಗಿ ಊಟ ಮಾಡುವುದರಿಂದ ಹಾಗೂ ಚೆನ್ನಾಗಿ ಅಗಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.
ಸುಲಭವಾದ ಜೀರ್ಣಕ್ರಿಯೆಗೆ
ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಲಾಲಾರಸದಲ್ಲಿರುವ ಕಿಣ್ವಗಳು (ಉದಾಹರಣೆಗೆ ಅಮೈಲೇಸ್) ಆಹಾರದೊಂದಿಗೆ ಬೆರೆತು ಅದನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಆಹಾರವನ್ನು ಬೇಗನೆ ನುಂಗಿದರೆ, ಹೊಟ್ಟೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದು ಅಜೀರ್ಣ, ಗ್ಯಾಸ್ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಧಾನವಾಗಿ ತಿನ್ನುವುದರಿಂದ ಆಹಾರ ಸಣ್ಣ ತುಂಡುಗಳಾಗಿ ಒಡೆಯುತ್ತದೆ ಮತ್ತು ಲಾಲಾರಸದೊಂದಿಗೆ ಚೆನ್ನಾಗಿ ಬೆರೆಯುತ್ತದೆ, ಇದರಿಂದಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ.
ತೂಕವನ್ನು ನಿಯಂತ್ರಿಸಲು ಸಹಕಾರಿ
ನೀವು ನಿಧಾನವಾಗಿ ಊಟ ಮಾಡಿದಾಗ, ನಿಮ್ಮ ಮೆದುಳಿಗೆ ನಿಮ್ಮ ಹೊಟ್ಟೆ ತುಂಬಿದೆ ಎಂಬ ಸಂಕೇತವನ್ನು ಸ್ವೀಕರಿಸಲು ಸಮಯವಿರುತ್ತದೆ. ನಾವು ಬೇಗನೆ ಊಟ ಮಾಡಿದಾಗ, ನಮ್ಮ ಹೊಟ್ಟೆ ಯಾವಾಗ ತುಂಬುತ್ತದೆ ಮತ್ತು ನಮಗೆ ಎಷ್ಟು ಕ್ಯಾಲೊರಿಗಳು ಬೇಕು ಎಂದು ನಮಗೆ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಬೇಗನೆ ಊಟ ಮಾಡುವ ಜನರಿಗೆ ತಡವಾಗಿ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ನಿಧಾನವಾಗಿ ತಿನ್ನುವ ಜನರು ಬೇಗನೆ ತೃಪ್ತರಾಗುತ್ತಾರೆ, ಇದು ಬೊಜ್ಜುತನದ ಅಪಾಯವನ್ನು ಕಡಿಮೆ ಮಾಡುತ್ತದೆ.
Parenting Tips: ನಿಮ್ಮ ಮಕ್ಕಳು ಶಾಲೆಯಿಂದ ಮನೆಗೆ ಬರ್ತಿದ್ದ ಹಾಗೆ ಈ 5 ಪ್ರಶ್ನೆಗಳನ್ನು ಕೇಳಬೇಡಿ
ಪೋಷಕಾಂಶಗಳ ಹೀರಿಕೊಳ್ಳುವಿಕೆ
ಆಹಾರವನ್ನು ಸರಿಯಾಗಿ ಅಗಿಯುವುದರಿಂದ ದೇಹವು ಅದರಿಂದ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಅಗಿಯದೆ ನುಂಗಿದ ದೊಡ್ಡ ತುಂಡುಗಳು ಕರುಳಿನಲ್ಲಿ ಸಂಪೂರ್ಣವಾಗಿ ವಿಭಜನೆಯಾಗುವುದಿಲ್ಲ, ಇದರಿಂದಾಗಿ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್ ಗಳು ಸಂಪೂರ್ಣವಾಗಿ ಹೀರಲ್ಪಡುವುದಿಲ್ಲ.
ಹಲ್ಲು ಮತ್ತು ಒಸಡುಗಳಿಗೆ ಪ್ರಯೋಜನಕಾರಿ
ಆಹಾರವನ್ನು ಅಗಿಯುವುದರಿಂದ ನಿಮ್ಮ ಹಲ್ಲುಗಳು ಮತ್ತು ಒಸಡುಗಳಿಗೆ ವ್ಯಾಯಾಮ ದೊರೆಯುತ್ತದೆ, ಅವುಗಳನ್ನು ಬಲವಾಗಿಡುತ್ತದೆ. ಅಷ್ಟೇ ಏಕೆ ಜಗಿಯುವ ಪ್ರಕ್ರಿಯೆಯು ಲಾಲಾರಸದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುವ ಮೂಲಕ ಹಲ್ಲು ಕೊಳೆತ ಮತ್ತು ದುರ್ವಾಸನೆಯನ್ನು ತಡೆಯುತ್ತದೆ.
ಒತ್ತಡ ಕಡಿಮೆ ಮಾಡಲು ಸಹಕಾರಿ
ನಿಧಾನವಾಗಿ ತಿನ್ನುವುದರಿಂದ ಮನಸಾರೆ ತಿನ್ನುವುದನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಆಹಾರವನ್ನು ಸವಿಯುತ್ತಾ ಸೇವಿಸಿದಾಗ ಅದು ದೇಹವನ್ನು ವಿಶ್ರಾಂತಿ ಸ್ಥಿತಿಯಲ್ಲಿಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
ಮಧುಮೇಹದ ಅಪಾಯ ಕಡಿಮೆ
ವೇಗವಾಗಿ ಊಟ ಮಾಡುವುದರಿಂದ ದೇಹವು ಇನ್ಸುಲಿನ್ ಬಿಡುಗಡೆ ಮಾಡಲು ಸಮಯ ಪಡೆಯದ ಕಾರಣ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವ ಅಪಾಯವಿದೆ. ನಿಧಾನವಾಗಿ ತಿನ್ನುವುದರಿಂದ, ಗ್ಲೂಕೋಸ್ ಕ್ರಮೇಣ ರಕ್ತಕ್ಕೆ ಬಿಡುಗಡೆಯಾಗುತ್ತದೆ, ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
Boost Memory Power: ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ 5 ಸರಳ ವಿಧಾನಗಳು ಇಲ್ಲಿವೆ
ನಿಧಾನವಾಗಿ ತಿನ್ನುವುದು ಹೇಗೆ?
*ಪ್ರತಿ ತುತ್ತನ್ನು ಕನಿಷ್ಠ 20-30 ಬಾರಿ ಅಗಿಯಿರಿ.
*ಊಟ ಮಾಡುವಾಗ ಟಿವಿ ಅಥವಾ ಮೊಬೈಲ್‌ನಿಂದ ದೂರವಿರಿ.
*ಸಣ್ಣ ತುಂಡುಗಳನ್ನು ತೆಗೆದುಕೊಂಡು ಸವಿಯಿರಿ.
*ಆತುರದಿಂದ ಆಹಾರವನ್ನು ಸೇವಿಸಬೇಡಿ, ಬದಲಿಗೆ ಶಾಂತ ಮನಸ್ಸಿನಿಂದ ಆರಾಮವಾಗಿ ತಿನ್ನಿರಿ.
