ಪೋಷಕರಿಗೆ ಕ್ಯಾನ್ಸರ್ ಇದ್ದರೆ ಮಕ್ಕಳಿಗೂ ಬರುತ್ತದೆ ಎಂಬ ಆತಂಕ ಅನೇಕರಲ್ಲಿರುತ್ತದೆ. ಆದರೆ, ಕೇವಲ 5-10% ಕ್ಯಾನ್ಸರ್‌ಗಳು ಮಾತ್ರ ಆನುವಂಶಿಕವಾಗಿದ್ದು, ಹೆಚ್ಚಿನವು ಜೀವನಶೈಲಿ ಮತ್ತು ಪರಿಸರದ ಕಾರಣಗಳಿಂದ ಬರುತ್ತವೆ. ಯಾರಿಗೆ ಬರಬಹುದು, ಯಾರಿಗೆ ಇಲ್ಲ? ಇಲ್ಲಿದೆ ವಿವರ.
“ನನ್ನ ತಂದೆ/ ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಸಾಯುವಾಗ ಅವರಿಗೆ 55 ವರ್ಷ ಆಗಿತ್ತು. ಕರುಳಿಗೆ ಕ್ಯಾನ್ಸರ್ ಬಂದದ್ದು ಗೊತ್ತಾಗಲೇ ಇಲ್ಲ. ಗೊತ್ತಾಗುವಾಗ ನಾಲ್ಕನೇ ಸ್ಟೇಜ್ ದಾಟಿತ್ತು. ಕೀಮೋಥೆರಪಿ ಮಾಡಿಸಿದರೂ ಮೃತಪಟ್ಟರು. ನನಗೆ ಆ ರೋಗ ಬರೋ ಚಾನ್ಸ ಎಷ್ಟಿದೆ?"
ಅನೇಕ ಜನರು ತಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಕಾಯಿಲೆ ಸಂಭವಿಸಿದ ನಂತರ ಈ ಒಂದು ದೊಡ್ಡ ಆತಂಕದ ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆ ಬಹಳ ಸಹಜವಾಗಿದೆ. ಆದರೆ ವೈದ್ಯರು ಹೇಳುವುದೇನೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಇದರ ಉತ್ತರ ಜನರು ಭಯಪಡುವಷ್ಟು ಗಂಭೀರವಾಗಿರುವುದಿಲ್ಲ.
ಕುಟುಂಬದಲ್ಲಿ ಕ್ಯಾನ್ಸರ್ ಇದ್ದರೆ ಏನು ಅರ್ಥ?
ಒಂದು ಉದಾಹರಣೆ ನೋಡೋಣ. 49 ವರ್ಷದ ಒಬ್ಬ ವ್ಯಕ್ತಿಯ ತಾಯಿ 57ನೇ ವಯಸ್ಸಿನಲ್ಲಿ ಪ್ಯಾಂಕ್ರಿಯಾಸ್ ಕ್ಯಾನ್ಸರ್ (Pancreatic Cancer) ನಿಂದ ಮೃತಪಟ್ಟಿದ್ದಾರೆ. ಹಲವು ವರ್ಷಗಳ ನಂತರ, ಅವನಿಗೆ ಒಂದು ಆತಂಕ ಶುರುವಾಗುತ್ತದೆ: ನನ್ನ ತಾಯಿಗೆ ಕ್ಯಾನ್ಸರ್ ಆಗಿತ್ತು, ಅದು ನನಗೂ ಬರಬಹುದಾ? ವೈದ್ಯಕೀಯ ತಜ್ಞರ ಪ್ರಕಾರ, ಈ ರೀತಿಯ ಆತಂಕವನ್ನು ವಿಶ್ವದಾದ್ಯಂತ ಲಕ್ಷಾಂತರ ಜನರು ಅನುಭವಿಸುತ್ತಾರೆ.
ಆದರೆ ಅಧ್ಯಯನಗಳ ಪ್ರಕಾರ, ಬಹುತೇಕ ಕ್ಯಾನ್ಸರ್‌ಗಳು ಜೆನೆಟಿಕಲ್ ಆಗಿರುವುದಿಲ್ಲ. ಎಲ್ಲಾ ಬಗೆಯ ಕ್ಯಾನ್ಸರ್‌ಗಳಲ್ಲಿ ಸುಮಾರು 5– 10% ಮಾತ್ರ ಕುಟುಂಬದಿಂದ ವಂಶವಾಹಿಯಾಗಿ ಬರುತ್ತವೆ.
ಹೆಚ್ಚಿನ ಕ್ಯಾನ್ಸರ್‌ಗಳು ಈ ಕೆಳಗಿನ ಕಾರಣಗಳಿಂದ ಉಂಟಾಗುತ್ತವೆ:
* ದೇಹದ ಕೋಶಗಳಲ್ಲಿ ಸಂಭವಿಸುವ ಯಾದೃಚ್ಛಿಕ ಜಿನೆಟಿಕ್ ಬದಲಾವಣೆಗಳು
* ಹವ್ಯಾಸಗಳು
* ಪರಿಸರದ ಪರಿಣಾಮಗಳು
* ಜೀವನಶೈಲಿ
* ವಯಸ್ಸು
ಅಂದರೆ, ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅದು ನೇರವಾಗಿ ಮುಂದಿನ ತಲೆಮಾರಿಗೆ ಬರುತ್ತದೆ ಎಂಬುದಿಲ್ಲ. ಆದರೆ ಕೌಟುಂಬಿಕ ಹಿಸ್ಟರಿಯು ಸ್ವಲ್ಪ ಅಪಾಯವನ್ನು ಹೆಚ್ಚಿಸಬಹುದು ಒಬ್ಬ ವ್ಯಕ್ತಿಯ ತಾಯಿ, ತಂದೆ ಅಥವಾ ಸಹೋದರರಿಗೆ ಕ್ಯಾನ್ಸರ್ ಇದ್ದರೆ, ಆ ವ್ಯಕ್ತಿಯ ಅಪಾಯ ಸ್ವಲ್ಪ ಹೆಚ್ಚಾಗಬಹುದು. ಉದಾಹರಣೆಗೆ: ಸಾಮಾನ್ಯ ಜನರಲ್ಲಿ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಅಪಾಯ ಸುಮಾರು 1–2%. ಒಬ್ಬ ಪೋಷಕರಿಗೆ ಈ ರೋಗ ಇದ್ದರೆ, ಅದು ಸುಮಾರು 3–5% ವರೆಗೆ ಹೆಚ್ಚಾಗಬಹುದು. ಇದರ ಅರ್ಥ ಏನೆಂದರೆ, ಕುಟುಂಬದಲ್ಲಿ ಈ ರೋಗ ಇದ್ದರೂ ಬಹುತೇಕ ಜನರಿಗೆ ಕ್ಯಾನ್ಸರ್ ಆಗುವುದಿಲ್ಲ.
ವೈದ್ಯರು ಯಾವಾಗ ಹೆಚ್ಚು ಗಮನ ಕೊಡುತ್ತಾರೆ?
ಕೆಲವು ಸಂದರ್ಭಗಳಲ್ಲಿ ವೈದ್ಯರು ಜೆನೆಟಿಕ್ ಪರೀಕ್ಷೆ ಅಥವಾ ಸಲಹೆಯನ್ನು ನೀಡಬಹುದು:
* ಕುಟುಂಬದಲ್ಲಿ ಹಲವಾರು ಜನರಿಗೆ ಒಂದೇ ರೀತಿಯ ಕ್ಯಾನ್ಸರ್ ಇದ್ದರೆ
* ಕಡಿಮೆ ವಯಸ್ಸಿನಲ್ಲಿ ಕ್ಯಾನ್ಸರ್ ಕಂಡುಬಂದಿದ್ದರೆ
* ಕುಟುಂಬದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ (Colorectal Cancer) ಮುಂತಾದ ರೋಗಗಳು ಹೆಚ್ಚು ಕಂಡುಬಂದರೆ
ಈ ಸಂದರ್ಭಗಳಲ್ಲಿ ಕೆಲವೊಮ್ಮೆ ʼಲಿಂಚ್ ಸಿಂಡ್ರೋಮ್ʼ (Lynch Syndrome) ಎಂಬ ಜೆನೆಟಿಕ್ ಕಾಯಿಲೆಯ ಪರಿಶೀಲನೆ ಮಾಡಬಹುದು.
ಜೀವನಶೈಲಿ ಬಹಳ ಮಹತ್ವದ್ದು
ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಪ್ರಮುಖ ಕಾರಣಗಳಲ್ಲಿ ಜೀವನಶೈಲಿ ಪ್ರಮುಖವಾಗಿದೆ. ಅಪಾಯ ಹೆಚ್ಚಿಸುವ ಕಾರಣಗಳು - ಧೂಮಪಾನ, ಅತಿಯಾದ ಮದ್ಯಪಾನ, ಅತಿಯಾದ ತೂಕ, ವ್ಯಾಯಾಮದ ಕೊರತೆ.
ಅಪಾಯ ಕಡಿಮೆ ಮಾಡುವ ಅಭ್ಯಾಸಗಳು: ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಧೂಮಪಾನ ಮಾಡದಿರುವುದು, ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು.
ಕ್ಯಾನ್ಸರ್ ವಿರುದ್ಧದ ಅತ್ಯಂತ ಪರಿಣಾಮಕಾರಿ ರಕ್ಷಣೆಯೆಂದರೆ ನಿಯಮಿತ ಆರೋಗ್ಯ ತಪಾಸಣೆ. ಉದಾಹರಣೆಗೆ, ಕೊಲೊರೆಕ್ಟಲ್ ಕ್ಯಾನ್ಸರ್ ಪತ್ತೆಹಚ್ಚಲು ʼಕೋಲೊನೋಸ್ಕೋಪಿʼ ಪರೀಕ್ಷೆಯನ್ನು 45–50 ವರ್ಷ ವಯಸ್ಸಿನ ನಂತರ ವೈದ್ಯರು ಸಲಹೆ ಮಾಡುತ್ತಾರೆ. ಈ ಪರೀಕ್ಷೆಯ ಮೂಲಕ ಕ್ಯಾನ್ಸರ್ ಆಗುವ ಮೊದಲು ಇರುವ ಪೊಲಿಪ್‌ಗಳನ್ನು ತೆಗೆದುಹಾಕಬಹುದು.
ಹೀಗಾಗಿ, ಒಬ್ಬ ಪೋಷಕರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರೆ ಅದು ಭಯ ಹುಟ್ಟಿಸುವ ಸಂಗತಿ ಆಗಬೇಕಿಲ್ಲ. ವೈದ್ಯಕೀಯ ವಿಜ್ಞಾನ ಹೇಳುವುದೇನೆಂದರೆ ಕೌಟುಂಬಿಕ ಇತಿಹಾಸವು ಅಪಾಯದ ಒಂದು ಭಾಗ ಮಾತ್ರ. ಸರಿಯಾದ ಆರೋಗ್ಯ ತಪಾಸಣೆ, ಆರೋಗ್ಯಕರ ಜೀವನಶೈಲಿ ಮತ್ತು ವೈದ್ಯರ ಸಲಹೆಯನ್ನು ಪಾಲಿಸಿದರೆ, ಕುಟುಂಬದಲ್ಲಿ ಕ್ಯಾನ್ಸರ್ ಇದ್ದರೂ ಅನೇಕರು ದೀರ್ಘಕಾಲ ಆರೋಗ್ಯಕರ ಜೀವನವನ್ನು ನಡೆಸುತ್ತಾರೆ. ಮುಖ್ಯವಾದದ್ದು ಒಂದೇ- ಮಾಹಿತಿ ಪಡೆಯಿರಿ, ವೈದ್ಯರನ್ನು ಸಂಪರ್ಕಿಸಿ ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.


