ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬ ಆರೋಪದ ಮೇಲೆ, ಅಮೆರಿಕದಲ್ಲಿ ದಾಖಲಾದ ಪ್ರಕರಣಗಳಿಗೆ ಕಂಪನಿಯು ಸುಮಾರು 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಒಪ್ಪಿಕೊಂಡಿದೆ. ಈ ಉತ್ಪನ್ನಗಳಿಂದ ಸಾವಿರಾರು ಮಕ್ಕಳು ಮತ್ತು ವಯಸ್ಕರು ಕ್ಯಾನ್ಸರ್‌ಗೆ ತುತ್ತಾಗಿದ್ದು, ಕಂಪನಿಯು ತನ್ನ ಉತ್ಪನ್ನಗಳು ಸುರಕ್ಷಿತವೆಂದು ವಾದಿಸುತ್ತಲೇ ಇದೆ.

ನಾವು ಬಳಸುವ ಅದೆಷ್ಟೋ ಉತ್ಪನ್ನಗಳಲ್ಲಿ ಕ್ಯಾನ್ಸರ್​ಕಾರಕ ಅಂಶಗಳು ಇರುವುದು ತಿಳಿಯುವುದೇ ಇಲ್ಲ. ಕೋಟಿ ಕೋಟಿ ಹಣವನ್ನು ಸೆಲೆಬ್ರಿಟಿಗಳಿಗೆ ಕೊಟ್ಟು ಅವರಿಂದ ಜಾಹೀರಾತು ಮಾಡಿಸಿಕೊಳ್ಳುವ ಕಂಪೆನಿಗಳಿಗೆ ಮರುಳಾಗಿ, ಅಂಥ ಸೆಲೆಬ್ರಿಟಿಗಳನ್ನೇ ದೇವರು ಎಂದು ನಂಬಿರುವ ಅಭಿಮಾನಿಗಳು, ಅವರನ್ನೇ ಫಾಲೋ ಮಾಡಿ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುವುದು ಇದೆ. ಅಷ್ಟಕ್ಕೂ ಜಾಹೀರಾತಿನ ಸಮಯದಲ್ಲಿಯೂ ಆ ಸೆಲೆಬ್ರಿಟಿಗಳು ಈ ಉತ್ಪನ್ನ ಬಳಸಿರುವುದಿಲ್ಲ. ಜನರಿಗೆ ಮರುಳು ಮಾಡಲು ವಿಷಕಾರಕ ಪಾನೀಯ ಕುಡಿಯುವುದು, ಕ್ರೀಮ್​ ಹಚ್ಚುವುದು ಮಾಡಿದಂತೆ ಆ್ಯಕ್ಟ್​ ಮಾಡುತ್ತಾರೆ ಅಷ್ಟೇ. ಅದರೆ ಅವರನ್ನು ಅನುಸರಿಸಿ, ಜೀವನ ಪರ್ಯಂತ ಇನ್ನಿಲ್ಲದ ಸಮಸ್ಯೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಅದರಲ್ಲಿ ಒಂದು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಪೌಡರ್​. ಅದರಲ್ಲಿಯೂ ಶಿಶುಗಳಿಗೆ ಹಚ್ಚುವ ಬೇಬಿ ಪೌಡರ್​.

ಟಿವಿಗಳಲ್ಲಿ ಸೆಲೆಬ್ರಿಟಿಗಳು ಬಂದು ತಮ್ಮ ಮಕ್ಕಳಿಗೆ ಇದೇ ಪೌಡರ್​ ಹಚ್ಚುವುದಾಗಿ ಹೇಳುತ್ತಿದ್ದಂತೆಯೇ, ಇದರ ಬೇಡಿಕೆ ಇನ್ನಿಲ್ಲದಂತೆ ಏರಿತು. ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಈ ಕಂಪೆನಿಯ ಬೇಬಿ ಪೌಡರ್​ಗೆ ಡಿಮಾಂಡ್​ ಹೆಚ್ಚುತ್ತಲೇ ಹೋಯಿತು. ಇದರಿಂದ ಕ್ಯಾನ್ಸರ್​ಗೆ ತುತ್ತಾದ ಅದೆಷ್ಟೋ ಕಂದಮ್ಮಗಳು ಜೀವ ಕಳೆದುಕೊಂಡರೆ, ಮತ್ತೆ ಹಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮಕ್ಕಳು ಮಾತ್ರವಲ್ಲದೇ ಸಹಸ್ರಾರು ದೊಡ್ಡವರಿಗೂ ಕ್ಯಾನ್ಸರ್​ ಬಂದಿರುವುದು ಪತ್ತೆಯಾಗಿದೆ. ಇದಕ್ಕೆಲ್ಲಾ ಕಾರಣ, ಈ ಕಂಪೆನಿಯ ಪೌಡರ್​ ಎನ್ನುವುದು ತಿಳಿಯುತ್ತಿದ್ದಂತೆಯೇ ವಿಶ್ವದ ಹಲವು ಕೋರ್ಟ್​ಗಳಲ್ಲಿ ಈ ಕಂಪೆನಿ ವಿರುದ್ಧ ಕೇಸ್​ ದಾಖಲಾಯಿತು. ಎಲ್ಲರಿಗೂ ಪರಿಹಾರ ಕೊಡಲು ಕಂಪೆನಿ ಒಪ್ಪಿಕೊಂಡಿದೆ.

53 ಸಾವಿರ ಕೋಟಿ ಪರಿಹಾರಕ್ಕೆ ಒಪ್ಪಿಗೆ

ಅದೆಷ್ಟು ಪರಿಹಾರ ಗೊತ್ತಾ? ಒಂದೋ ಎರಡೋ ಕೋಟಿಗಳಲ್ಲಿ, ಬದಲಿಗೆ 5.5 ಬಿಲಿಯನ್ ಡಾಲರ್​. ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಸುಮಾರು 53 ಸಾವಿರ ಕೋಟಿ ರೂ. ಇದು ಕೇವಲ ಅಮೆರಿಕದಲ್ಲಿ ದಾಖಲಾಗಿರುವ ಕೇಸ್​ಗೆ ಮಾತ್ರ! ಇದರ ಅರ್ಥ ಎಷ್ಟು ಮಂದಿ ಈ ಪೌಡರ್​ನಿಂದ ಬಳಲಿದ್ದಾರೆ ಎನ್ನುವುದು ತಿಳಿಯುತ್ತದೆ. ತಮ್ಮ ಕಂಪೆನಿ ವಿರುದ್ಧ ಕೇಸ್​​ ದಾಖಲು ಮಾಡಿರುವ ಎಲ್ಲರಿಗೂ ಈ ಬೃಹತ್​ ಮೊತ್ತದ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಯತ್ನ ಮಾಡಿರುವ ಕಂಪೆನಿ ಇದರ ಬಗ್ಗೆ ಕೋರ್ಟ್​ಗೆ ವರದಿ ಸಲ್ಲಿಸಿದೆ.

ಮತ್ತೆ ಮಾರ್ಕೆಟಿಂಗ್​ ತಂತ್ರ

ಅಷ್ಟಕ್ಕೂ, ಬೇಬಿ ಪೌಡರ್ ಮತ್ತು ಇತರ ಟಾಲ್ಕ್ ಉತ್ಪನ್ನಗಳು ಅಂಡಾಶಯದ ಕ್ಯಾನ್ಸರ್ ಮತ್ತು ಮೆಸೊಥೆಲಿಯೊಮಾಗೆ ಕಾರಣವಾಗುತ್ತವೆ ಎಂಬ ಆರೋಪವಿತ್ತು. ಅಮೆರಿಕದಲ್ಲಿ ಹಳೆಯ ಸಾವಿರಾರು ಪ್ರಕರಣಗಳನ್ನು ಮುಕ್ತಾಯಗೊಳಿಸಲು $5.5 ಬಿಲಿಯನ್ ನೀಡಲು ಕಂಪನಿ ಒಪ್ಪಿದೆ. ಇದರ ಹೊರತಾಗಿಯೂ ತಮ್ಮ ಉತ್ಪನ್ನಗಳು ಸುರಕ್ಷಿತವಾಗಿವೆ ಮತ್ತು ಕ್ಯಾನ್ಸರ್​ಕಾರಕ ಅಂಶಗಳನ್ನು ಹೊಂದಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸುತ್ತಲೇ ಬಂದಿದೆ. ಅಂದಹಾಗೆ ಕಂಪೆನಿ ಈಗಾಗಲೇ 2020ರಲ್ಲಿ ಅಮೆರಿಕ ಮತ್ತು Canadáದಲ್ಲಿ ಟಾಲ್ಕ್ ಪೌಡರ್ ಮಾರಾಟ ನಿಲ್ಲಿಸಿದ್ದು, ಸ್ಟಾರ್ಚ್ ಆಧರಿತ ಪೌಡರ್‌ಗೆ ಬದಲಾವಣೆ ಮಾಡಿಕೊಂಡಿದೆ. ಈಗ ಹೇಗಾದರೂ ಮಾಡಿ ಮತ್ತೆ ಮಾರ್ಕೆಟ್​ ಅನ್ನು ಹೆಚ್ಚು ಮಾಡಿಕೊಳ್ಳುವ ಹಂಬಲದಿಂದ ಸೆಲೆಬ್ರಿಟಿಗಳಿಗೆ ನೀಡುವ ಕೋಟಿ ಕೋಟಿ ರೂಪಾಯಿಗಳ ಹಣವನ್ನೂ ಹೆಚ್ಚಿಸಿ, ಅವರಿಂದ ಜಾಹೀರಾತು ಮಾಡಿಸಿಕೊಳ್ಳುವ ಯೋಚನೆ ಇದ್ದರೂ ಇರಬಹುದು. ಇಷ್ಟು ಹಣ ಯಾರಾದರೂ ಕೊಟ್ಟರೆ, ಬಿಡುವವರು ಯಾರು ಹೇಳಿ? ಇಷ್ಟು ವಿಷಯ ಗೊತ್ತಿದ್ದ ಮೇಲೂ ಅವರನ್ನು ಕಣ್ಣುಮುಚ್ಚಿ ಅನುಸರಿಸುವ ಅಭಿಮಾನಿಗಳು ಇದ್ದೇ ಇರುತ್ತಾರಲ್ಲ!