Mother’s Milk Benefits: ತಾಯಿಯ ಎದೆಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳಿಗೂ ಮಗುವಿನ ಮೆದುಳಿನ ಬೆಳವಣಿಗೆಗೂ ಇರುವ ಸಂಬಂಧವೇನು? ಇಂದಿನ ಡಿಜಿಟಲ್ ಜಗತ್ತಿನಲ್ಲಿ ಡಯಟ್ ಬಗ್ಗೆ ನಮಗಿರುವ ತಪ್ಪು ಕಲ್ಪನೆಗಳೇನು? ಈ ಎಲ್ಲಾ ಕುತೂಹಲಕಾರಿ ವಿಷಯಗಳ ಬಗ್ಗೆ ಬೆಂಗಳೂರಿನ 'ದಿ ಎಡ್ಜ್ ಆಫ್ ನ್ಯೂಟ್ರಿಷನ್' ಶೃಂಗಸಭೆಯಲ್ಲಿ ಹೊರಬಿದ್ದ ಅಚ್ಚರಿಯ ಸಂಗತಿಗಳು ಇಲ್ಲಿವೆ.
ತಾಯಿಯ ಎದೆಹಾಲು ಕೇವಲ ಮಗುವಿನ ಹಸಿವು ನೀಗಿಸುವ ದ್ರವವಲ್ಲ, ಅದು ಮಗುವಿನ ಇಡೀ ಜೀವನದ ಆರೋಗ್ಯವನ್ನು ನಿರ್ಧರಿಸುವ ಅದ್ಭುತ ಸಂಜೀವಿನಿ. ಎದೆಹಾಲಿನಲ್ಲಿರುವ ಪ್ರತಿಯೊಂದು ಸೂಕ್ಷ್ಮಾಣುಜೀವಿಯೂ ಮಗುವಿನ ಭವಿಷ್ಯದ ಬದುಕಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ ಎಂಬ ಮಹತ್ವದ ವಿಚಾರಗಳು ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಶೃಂಗಸಭೆಯಲ್ಲಿ ವ್ಯಕ್ತವಾದವು. ಇತ್ತೀಚೆಗೆ ಆಯೋಜಿಸಿದ್ದ 'ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026' ವಾರ್ಷಿಕ ಶೃಂಗಸಭೆಯಲ್ಲಿ ದೇಶದ ಖ್ಯಾತ ಪೌಷ್ಟಿಕಾಂಶ ತಜ್ಞರು ಮತ್ತು ವೈದ್ಯರು ಭಾಗವಹಿಸಿ, ಪೌಷ್ಟಿಕಾಂಶದ ಹೊಸ ಆಯಾಮಗಳ ಬಗ್ಗೆ ಚರ್ಚಿಸಿದರು.
ಜೀವನದ ಮೊದಲ 1000 ದಿನಗಳು ಚಿನ್ನದಂತಹ ಅವಧಿ
ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಗರ್ಭಧಾರಣೆಯ ದಿನಗಳಿಂದ ಹಿಡಿದು ಮಗುವಿಗೆ ಎರಡು ವರ್ಷ ತುಂಬುವವರೆಗಿನ (ಒಟ್ಟು 1,000 ದಿನಗಳು) ಸಮಯ ಅತ್ಯಂತ ನಿರ್ಣಾಯಕ. ಈ ಅವಧಿಯಲ್ಲಿ ಸಿಗುವ ಪೌಷ್ಟಿಕಾಂಶವು ಜೀವನಪರ್ಯಂತದ ಆರೋಗ್ಯಕ್ಕೆ ಬುನಾದಿ ಹಾಕುತ್ತದೆ. ಎದೆಹಾಲಿನಲ್ಲಿರುವ ಎಚ್‌ಎಂಒ (Human Milk Oligosaccharides) ಎಂಬ ಅಂಶವು ಮಗುವಿನ ಕರುಳಿನಲ್ಲಿ 'ಒಳ್ಳೆಯ ಬ್ಯಾಕ್ಟೀರಿಯಾ'ಗಳನ್ನು ವೃದ್ಧಿಸಿ, ಮೆದುಳಿನ ವಿಕಾಸ ಹಾಗೂ ರೋಗನಿರೋಧಕ ಶಕ್ತಿಯನ್ನು ಪ್ರಬಲಗೊಳಿಸುತ್ತದೆ ಎಂದು ತಜ್ಞರು ವಿವರಿಸಿದರು.
ತಾಯಿಗೆ ಬೇಕು ಕುಟುಂಬದ ಬೆಂಬಲ
ಈ ಸಂದರ್ಭದಲ್ಲಿ ಡಾ. ಆಶಾ ಬೆನಕಪ್ಪ ಮಾತನಾಡಿ, "ತಾಯಿಯ ಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳು (ಮೈಕ್ರೋಬಯೋಮ್) ಕರುಳು ಮತ್ತು ಮೆದುಳಿನ ನಡುವೆ ಅದ್ಭುತ ಸಂಪರ್ಕ ಸೇತುವೆಯಾಗುತ್ತವೆ. ಆದರೆ, ತಾಯಿ ಮಗುವಿಗೆ ಸರಿಯಾಗಿ ಹಾಲುಣಿಸಲು ಕೇವಲ ಪೌಷ್ಟಿಕಾಂಶವಿದ್ದರೆ ಸಾಲದು; ಕುಟುಂಬ, ಗಂಡ ಹಾಗೂ ಸಮಾಜ ಆಕೆಗೆ ಉತ್ತಮ ಮಾನಸಿಕ ನೆಮ್ಮದಿ ಮತ್ತು ಬೆಂಬಲ ನೀಡಬೇಕು" ಎಂದು ಕರೆ ನೀಡಿದರು.
ಆ್ಯಪ್‌ಗಳಿಗಿಂತ ತಜ್ಞರ ಸಲಹೆ ಮಿಗಿಲು
ಆರೋಗ್ಯ ಮತ್ತು ಡಯೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶೀಲಾ ಕೃಷ್ಣಸ್ವಾಮಿ, ಡಾ. ನಂದಿತಾ ಅಯ್ಯರ್ ಮತ್ತು ಅದಿತಿ ಪ್ರಸಾದ್ ಆಪ್ಟೆ ಅವರು ಇಂದಿನ ತಂತ್ರಜ್ಞಾನದ ಅತಿಯಾದ ಅವಲಂಬನೆಯ ಬಗ್ಗೆ ಎಚ್ಚರಿಸಿದರು. "ಆರೋಗ್ಯ ಎಂದರೆ ಕೇವಲ ಡೇಟಾ ಅಥವಾ ಟೆಸ್ಟ್ ರಿಪೋರ್ಟ್ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯ ನಿದ್ದೆ, ಜೀವನಶೈಲಿ ಮತ್ತು ಕೌಟುಂಬಿಕ ಹಿನ್ನೆಲೆಗೆ ಅನುಗುಣವಾಗಿ ಡಯೆಟ್ ಇರಬೇಕು. ಸ್ಮಾರ್ಟ್ ಆ್ಯಪ್‌ಗಳು ಅಥವಾ ಯಂತ್ರಗಳು ಎಂದಿಗೂ ಒಬ್ಬ ಅನುಭವೀ ವೈದ್ಯರಿಗೆ ಪರ್ಯಾಯವಾಗಲು ಸಾಧ್ಯವಿಲ್ಲ," ಎಂದು ಅಭಿಪ್ರಾಯಪಟ್ಟರು.
ಸಮತೋಲಿತ ಜೀವನಶೈಲಿಯ ಪಾಠ
ರಘು ಕೃಷ್ಣನ್ ಮಾತನಾಡಿ, ಸಂಕೀರ್ಣವಾದ ವಿಜ್ಞಾನವನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥೈಸುವುದೇ ಈ ಶೃಂಗಸಭೆಯ ಮುಖ್ಯ ಉದ್ದೇಶ ಎಂದರು. ಇನ್ನು ಸಮಾರಂಭದಲ್ಲಿ ಡಾ. ಉಮೇಶ್ ವಧ್ವಾನಿ ಅವರು 'ಡಯಟಿಂಗ್ ಕಾ ಮಜಾಕ್' ಎಂಬ ಹಾಸ್ಯದ ಮೂಲಕ ಜನರಿಗಿರುವ ತಪ್ಪು ಕಲ್ಪನೆಗಳನ್ನು ಕಿಚಾಯಿಸುತ್ತಲೇ, ಸಮತೋಲಿತ ಜೀವನಶೈಲಿಯ ಪಾಠ ಮಾಡಿದರು.
ಒಟ್ಟಾರೆಯಾಗಿ, ಈ ಶೃಂಗಸಭೆಯು ಉತ್ತಮ ಆರೋಗ್ಯಕ್ಕಾಗಿ ಕೇವಲ ಯಂತ್ರಗಳನ್ನಲ್ಲ, ಬದಲಿಗೆ ಸರಿಯಾದ ತಿಳುವಳಿಕೆ ಮತ್ತು ಸಂಪ್ರದಾಯದ ಜೊತೆಗೆ ವಿಜ್ಞಾನದ ಸಮನ್ವಯದ ಹಾದಿಯನ್ನು ಕಂಡುಕೊಳ್ಳುವಂತೆ ಪ್ರೇರೇಪಿಸಿತು.

