Rare Ectopic Pregnancy: ಬೆಂಗಳೂರಿನ ಮಹಿಳೆಯೊಬ್ಬರಿಗೆ ಗರ್ಭಕೋಶದ ಬದಲಾಗಿ ಈ ಭಾಗದಲ್ಲಿ ಭ್ರೂಣ ಬೆಳೆಯುತ್ತಿದ್ದ ಅತ್ಯಂತ ವಿರಳ ವೈದ್ಯಕೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನು ಮೊದಲು ಗೆಡ್ಡೆ (Cyst) ಎಂದು ಭಾವಿಸಲಾಗಿತ್ತಾದರೂ, ತಪಾಸಣೆಯ ನಂತರ ಇದು ಅಪರೂಪದ 'ಎಕ್ಟೋಪಿಕ್ ಪ್ರೆಗ್ನೆನ್ಸಿ' ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಶಿಶುವು ಗರ್ಭಕೋಶದಲ್ಲಿ ಬೆಳೆಯುತ್ತದೆ. ಆದರೆ ಬೆಂಗಳೂರಿನ ಮಹಿಳೆಯೊಬ್ಬರ ವಿಷಯದಲ್ಲಿ ನಡೆದ ಘಟನೆ ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿದೆ. ಈ ಮಹಿಳೆಯ ಭ್ರೂಣವು ಗರ್ಭಕೋಶದ ಹೊರಗೆ, ಕಿಡ್ನಿಗಳ ಸಮೀಪದ ಉದರ ಭಾಗದಲ್ಲಿ ಬೆಳೆದಿರುವುದು ಪತ್ತೆಯಾಗಿದೆ. ಆದರೆ ದೆಹಲಿಯ ವೈದ್ಯರು ಅತ್ಯಂತ ಅಪರೂಪದ ಕೀಹೋಲ್ (ಲ್ಯಾಪರೋಸ್ಕೋಪಿಕ್) ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯನ್ನು ಅಪಾಯದಿಂದ ಪಾರು ಮಾಡಿದ್ದಾರೆ.

ಬೆಂಗಳೂರಿನ ಈ ಮಹಿಳೆ ಸಾಮಾನ್ಯ ಗರ್ಭಧಾರಣೆಯ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ 10 ರಿಂದ 12 ಸೆಂಟಿಮೀಟರ್ ಗಾತ್ರದ ಸಿಸ್ಟ್‌ (ಒಂದು ಸಣ್ಣ ಚೀಲ)ನಂತಹ ರಚನೆ ಕಂಡುಬಂದಿತು. ಅದರಲ್ಲಿ ಭ್ರೂಣದ ಭಾಗಗಳು ಕಂಡಿದ್ದರಿಂದ, ವೈದ್ಯರು ಆರಂಭದಲ್ಲಿ ಇದನ್ನು 'ಡರ್ಮೋಯ್ಡ್ ಸಿಸ್ಟ್' (ಡರ್ಮೋಯ್ಡ್ ಸಿಸ್ಟ್ ಎನ್ನುವುದು ಒಂದು ವಿಚಿತ್ರವಾದ ಆದರೆ ಸಾಮಾನ್ಯವಾಗಿ ಕ್ಯಾನ್ಸರ್ ಅಲ್ಲದ (Benign) ಗಡ್ಡೆ ಅಥವಾ ಚೀಲದಂತಹ ರಚನೆಯಾಗಿದೆ) ಎಂದು ಭಾವಿಸಿದ್ದರು. ಆದರೆ ಹೆಚ್ಚಿನ ತಪಾಸಣೆಗಾಗಿ ಎಂಆರ್‌ಐ (MRI) ಸ್ಕ್ಯಾನ್ ಮಾಡಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

3 ತಿಂಗಳ 7 ರಿಂದ 8 ಸೆಂಟಿಮೀಟರ್ ಉದ್ದದ ಭ್ರೂಣ

ಎಂಆರ್‌ಐ ವರದಿಯಲ್ಲಿ ಗರ್ಭಕೋಶದ ಗೋಡೆ ಬಿರುಕು ಬಿಟ್ಟಿರುವುದು ಪತ್ತೆಯಾಯಿತು. ಆ ಬಿರುಕಿನ ಮೂಲಕ ಗರ್ಭವು ಅಂದರೆ ಶಿಶು ಗರ್ಭಕೋಶದಿಂದ ಹೊರಬಂದು, ಕಿಡ್ನಿಗಳ ಸಮೀಪವಿರುವ 'ರೆಟ್ರೊಪೆರಿಟೋನಿಯಲ್ ಸ್ಪೇಸ್' ಎಂಬ ಜಾಗದಲ್ಲಿ ಬೆಳೆಯತೊಡಗಿತ್ತು. ಈ ಪ್ರದೇಶದಲ್ಲಿ ದೇಹದ ಪ್ರಮುಖ ರಕ್ತನಾಳಗಳಾದ ಅಯೋರ್ಟಾ ಮತ್ತು ಇನ್ಫೀರಿಯರ್ ವೆನಾ ಕ್ಯಾವಾ ಇರುವುದರಿಂದ ಮಹಿಳೆಯ ಜೀವಕ್ಕೆ ತೀವ್ರ ಅಪಾಯವಿತ್ತು.

ತಪಾಸಣೆಯ ವೇಳೆ ಸುಮಾರು 12 ವಾರಗಳ ವಯಸ್ಸಿನ, 7 ರಿಂದ 8 ಸೆಂಟಿಮೀಟರ್ ಉದ್ದದ ಭ್ರೂಣವು ಆ ಚೀಲದಲ್ಲಿರುವುದನ್ನು ವೈದ್ಯರು ಗುರುತಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ದೆಹಲಿಯ ವೈದ್ಯರ ತಂಡ, ಅತ್ಯಂತ ಜಾಗರೂಕತೆಯಿಂದ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರತೆಗೆದರು. ಪ್ರಸ್ತುತ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇಂತಹ ಪ್ರಕರಣಗಳು ದಾಖಲಾಗುವುದು ಬಹಳ ಅಪರೂಪ

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ತ್ರೀರೋಗ ತಜ್ಞ ಡಾ. ಮನ್ನನ್ ಗುಪ್ತಾ, "ಇದು ಅತ್ಯಂತ ಅಪರೂಪದ ಎಕ್ಟೋಪಿಕ್ ಪ್ರೆಗ್ನೆನ್ಸಿ (Ectopic Pregnancy) ಪ್ರಕರಣವಾಗಿದೆ. ಸಾಮಾನ್ಯವಾಗಿ ಇಂತಹ ಗರ್ಭಧಾರಣೆಯು ಫಾಲೋಪಿಯನ್ ಟ್ಯೂಬ್ ಅಥವಾ ಅಂಡಾಶಯದಲ್ಲಿ ಸಂಭವಿಸುತ್ತದೆ. ಆದರೆ ಗರ್ಭಕೋಶದಿಂದ ಹೊರಬಂದು ಕಿಡ್ನಿಗಳ ಹತ್ತಿರ ಬೆಳೆಯುವುದು ಜಗತ್ತಿನಲ್ಲೇ ಅತ್ಯಂತ ವಿರಳ" ಎಂದು ಹೇಳಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಇಂತಹ ಪ್ರಕರಣಗಳು ದಾಖಲಾಗುವುದು ಬಹಳ ಕಡಿಮೆ.

ಲಕ್ಷಣಗಳು (Symptoms) ಏನಿರಬಹುದು?

ಸಾಮಾನ್ಯವಾಗಿ ಇಂತಹ ಎಕ್ಟೋಪಿಕ್ ಗರ್ಭಧಾರಣೆ ಉಂಟಾದಾಗ ಮಹಿಳೆಯರಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು:
ತೀವ್ರವಾದ ಹೊಟ್ಟೆ ನೋವು (ಒಂದು ಬದಿಯಲ್ಲಿ ಹೆಚ್ಚು).
ಅಸಹಜ ರಕ್ತಸ್ರಾವ.
ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವುದು (ಒಳಗೆ ರಕ್ತಸ್ರಾವವಾಗುತ್ತಿದ್ದರೆ).

ಮುನ್ನೆಚ್ಚರಿಕೆ ಏನು? (Prevention/Precautions)

ಆರಂಭಿಕ ಸ್ಕ್ಯಾನಿಂಗ್: ಗರ್ಭ ಧರಿಸಿದ ತಕ್ಷಣ (6 ರಿಂದ 8 ವಾರಗಳ ಒಳಗಾಗಿ) ಒಮ್ಮೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇದರಿಂದ ಭ್ರೂಣವು ಗರ್ಭಕೋಶದ ಒಳಗೆ ಇದೆಯೇ ಅಥವಾ ಹೊರಗೆ ಇದೆಯೇ ಎಂಬುದು ಖಚಿತವಾಗುತ್ತದೆ.

ಹಳೆಯ ಶಸ್ತ್ರಚಿಕಿತ್ಸೆಗಳ ಬಗ್ಗೆ ಗಮನವಿರಲಿ: ಹಿಂದೆ ಶಸ್ತ್ರಚಿಕಿತ್ಸೆಗಳಾಗಿದ್ದರೆ, ಮುಂದಿನ ಗರ್ಭಧಾರಣೆಯ ಸಮಯದಲ್ಲಿ ವೈದ್ಯರೊಂದಿಗೆ ಆ ಬಗ್ಗೆ ವಿವರವಾಗಿ ಚರ್ಚಿಸಬೇಕು.

ಈ ಪ್ರಕರಣದಲ್ಲಿ ಬೆಂಗಳೂರಿನ ಮಹಿಳೆಗೆ ದೆಹಲಿಯಲ್ಲಿ ಲ್ಯಾಪರೋಸ್ಕೋಪಿಕ್ (ಕೀಹೋಲ್) ಚಿಕಿತ್ಸೆ ನೀಡಲಾಗಿದೆ. ಹೊಟ್ಟೆಯನ್ನು ಪೂರ್ತಿ ಸೀಳದೆ, ಸಣ್ಣ ರಂಧ್ರಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡಿರುವುದು ಆಕೆಯ ಚೇತರಿಕೆಗೆ ಸಹಕಾರಿಯಾಗಿದೆ. ಇದು ವೈದ್ಯಕೀಯ ತಂತ್ರಜ್ಞಾನದ ದೊಡ್ಡ ಯಶಸ್ಸು ಎನ್ನಬಹುದು.