ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಬಂಧಿಸಿದ ಆಸಕ್ತಿದಾಯಕ ಸ್ಟೋರಿಯೊಂದು ರಿವೀಲ್ ಆಗಿದೆ. ಅಂದು ಬರೋಬ್ಬರಿ 135 ಕೆಜೆ ತೂಕವಿದ್ದ ಅವರು ಇಂದು 89 ಕೆಜಿಗೆ ಇಳಿದಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ..

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ಕೆಲಸದ ವಿಚಾರದಲ್ಲಿ ಎಷ್ಟು ಹೆಸರಾಗಿದ್ದಾರೋ, ಈಗ ಅಷ್ಟೇ ತಮ್ಮ ಅದ್ಭುತ ದೇಹದಾರ್ಢ್ಯ ಬದಲಾವಣೆಯಿಂದ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ 135 ಕೆಜಿ ತೂಕವಿದ್ದ ಗಡ್ಕರಿ ಅವರು, ಬರೋಬ್ಬರಿ 46 ಕೆಜಿ ತೂಕ ಇಳಿಸಿ ಈಗ 89 ಕೆಜಿಗೆ ಬಂದಿದ್ದಾರೆ. ಇದು ಕೇವಲ ಮ್ಯಾಜಿಕ್ ಅಲ್ಲ, ಅವರ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಫಲ.

ಇತ್ತೀಚೆಗೆ ಫರಾ ಖಾನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಗಡ್ಕರಿ, ತಮ್ಮ ಫಿಟ್‌ನೆಸ್ ಪಯಣದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಜೀವನ ಬದಲಿಸಿದ ಕೊರೊನಾ

ಗಡ್ಕರಿ ಅವರ ಪ್ರಕಾರ.. ಅವರ ಈ ಬದಲಾವಣೆಗೆ ಮುಖ್ಯ ಕಾರಣ ಕೋವಿಡ್ ಸಾಂಕ್ರಾಮಿಕ. ಕೋವಿಡ್ ಸಮಯದಲ್ಲಿ ನನ್ನ ಆಪ್ತ ಸ್ನೇಹಿತರನ್ನು ನಾನು ಕಳೆದುಕೊಂಡೆ. ಅದು ನನಗೆ ದೊಡ್ಡ ಆಘಾತ ನೀಡಿತು. ಆಗ ನನಗೆ ಅನಿಸಿದ್ದು ಒಂದೇ - ಆರೋಗ್ಯವೇ ಭಾಗ್ಯ (Health is Wealth). ಅಲ್ಲಿಯವರೆಗೆ ನನ್ನ ಜೀವನ ಅಸ್ತವ್ಯಸ್ತವಾಗಿತ್ತು, ಯಾವುದೇ ಶಿಸ್ತು ಇರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಹೇಗಿದೆ ಗಡ್ಕರಿ ದಿನಚರಿ?

ಸಚಿವರ ಕೆಲಸದ ಒತ್ತಡದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ತಡರಾತ್ರಿಯವರೆಗೂ ಸಭೆಗಳು, ಪ್ರಯಾಣಗಳಿದ್ದರೂ ಗಡ್ಕರಿ ಅವರು ತಮ್ಮ ದಿನಚರಿಯನ್ನು ಬದಲಿಸುವುದಿಲ್ಲ. ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗೆ 7 ಗಂಟೆಗೆ ಎದ್ದೇಳುವುದು ಅವರ ನಿಯಮ. ಪ್ರತಿದಿನ ಕನಿಷ್ಠ ಎರಡೂವರೆ ಗಂಟೆಗಳ ಕಾಲ ಅವರು ವ್ಯಾಯಾಮ ಮಾಡುತ್ತಾರೆ. ವ್ಯಾಯಾಮ ಈಗ ನನ್ನ ಜೀವನದ ಅವಿಭಾಜ್ಯ ಅಂಗ. ಇದು ಒಮ್ಮೊಮ್ಮೆ ಮಾಡುವ ಕೆಲಸವಲ್ಲ, ಪ್ರತಿದಿನ ಮಾಡಲೇಬೇಕಾದ ಕೆಲಸ ಎನ್ನುತ್ತಾರೆ ಅವರು.

ತೂಕ ಇಳಿಸಿಕೊಳ್ಳುವುದು ಕೇವಲ ನೋಡಲು ಚೆನ್ನಾಗಿ ಕಾಣುವುದಕ್ಕಾಗಿ ಅಲ್ಲ.ಬದಲಾಗಿ ಒಟ್ಟಾರೆ ಆರೋಗ್ಯ ಸುಧಾರಣೆಗಾಗಿ ಇರಬೇಕು ಎಂಬುದು ಗಡ್ಕರಿ ಅವರ ಅಭಿಪ್ರಾಯ. ಮೊದಲು ಅನಿಯಮಿತ ಆಹಾರ ಮತ್ತು ಅಶಿಸ್ತಿನ ಜೀವನ ನಡೆಸುತ್ತಿದ್ದ ಅವರು, ಈಗ ಸಂಪೂರ್ಣ ಶಿಸ್ತುಬದ್ಧ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಅವರ ಈ ಬದಲಾವಣೆಯು ಮುಖದಲ್ಲಿನ ಹೊಳಪು ಮತ್ತು ಅವರ ಕೆಲಸದ ಉತ್ಸಾಹದಲ್ಲಿ ಎದ್ದು ಕಾಣುತ್ತಿದೆ.

ಗಡ್ಕರಿ ಅವರ ಈ ಪಯಣ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಆದರೆ ತಜ್ಞರ ಪ್ರಕಾರ ಪ್ರತಿಯೊಬ್ಬರ ದೇಹದ ಸ್ಥಿತಿ ಬೇರೆ ಬೇರೆಯಾಗಿರುತ್ತದೆ. ಸತತ ಎರಡೂವರೆ ಗಂಟೆಗಳ ವ್ಯಾಯಾಮ ಎಲ್ಲರಿಗೂ ಸೂಕ್ತವಾಗದಿರಬಹುದು. ಹೀಗಾಗಿ, ತೂಕ ಇಳಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಕೇವಲ ವ್ಯಾಯಾಮ ಮಾತ್ರವಲ್ಲದೆ, ಸಮತೋಲಿತ ಆಹಾರ ಮತ್ತು ಉತ್ತಮ ನಿದ್ದೆಯೂ ಅಗತ್ಯ. ರಾತ್ರೋರಾತ್ರಿ ಬದಲಾವಣೆ ಬಯಸುವ ಬದಲು ಗಡ್ಕರಿ ಅವರಂತೆ ಶಿಸ್ತನ್ನು ರೂಢಿಸಿಕೊಳ್ಳಿ.

ಆರೋಗ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಿತಿನ್ ಗಡ್ಕರಿ ಅವರೇ ಸಾಕ್ಷಿ. ರಾಜಕೀಯದಂತಹ ಒತ್ತಡದ ಕೆಲಸದ ನಡುವೆಯೂ ತಮ್ಮ ಆರೋಗ್ಯಕ್ಕೆ ಸಮಯ ಮೀಸಲಿಟ್ಟಿರುವ ಅವರ ಈ ನಿರ್ಧಾರ ನಿಜಕ್ಕೂ ಎಲ್ಲರಿಗೂ ಮಾದರಿ.