ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಾಗಿದ್ದು, ರಕ್ತವನ್ನು ಶುದ್ಧೀಕರಿಸಿ ತ್ಯಾಜ್ಯವನ್ನು ಹೊರಹಾಕುತ್ತವೆ. ಈ ಲೇಖನವು ಕಿಡ್ನಿಗಳ ಕಾರ್ಯಗಳು, ವೈಫಲ್ಯದ ಆರಂಭಿಕ ಲಕ್ಷಣಗಳು, ಮತ್ತು ಅವುಗಳನ್ನು ಆರೋಗ್ಯವಾಗಿಡಲು ಬೇಕಾದ ಉಪಾಯಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತದೆ.
ಮಾನವನ ದೇಹದಲ್ಲಿರುವ ಪ್ರತಿಯೊಂದು ಅಂಗವೂ ತನ್ನದೇ ಆದ ನಿರ್ದಿಷ್ಟ ಪಾತ್ರವನ್ನು ವಹಿಸುತ್ತದೆ. ಆದರೆ, ಇವುಗಳಲ್ಲಿ ಮೂತ್ರಪಿಂಡಗಳು (ಕಿಡ್ನಿಗಳು) ಅತ್ಯಂತ ಪ್ರಮುಖವಾದ ಅಂಗಗಳಲ್ಲಿ ಒಂದು. ಕಿಡ್ನಿಗಳ ಸೂಕ್ತ ಬೆಂಬಲವಿಲ್ಲದೆ ದೇಹದ ಸಾಮಾನ್ಯ ಕಾರ್ಯನಿರ್ವಹಣೆ ಬಹುತೇಕ ಅಸಾಧ್ಯ. ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯವನ್ನು ಹೊರಹಾಕುತ್ತವೆ ಎಂಬುದು ಬಹುತೇಕರಿಗೆ ತಿಳಿದಿರುವ ವಿಷಯ. ಆದರೆ, ಅವುಗಳ ಕೆಲಸ ಅಷ್ಟಕ್ಕೇ ಸೀಮಿತವಾಗಿಲ್ಲ.
ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ವಿಷಕಾರಿ ತ್ಯಾಜ್ಯ ವಸ್ತುಗಳು (Toxins) ಶೇಖರಣೆಯಾಗಿ, ಹಲವಾರು ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಇಂದಿನ ಅಸಮತೋಲಿತ ಜೀವನಶೈಲಿ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಮೂತ್ರಪಿಂಡಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕಿಡ್ನಿಯ ಕಾರ್ಯನಿರ್ವಹಣೆ, ಅದರ ಪ್ರಾಮುಖ್ಯತೆ ಹಾಗೂ ಅದನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ದೇಹದಲ್ಲಿ ಮೂತ್ರಪಿಂಡಗಳು ಎಲ್ಲಿರುತ್ತವೆ?
ಮೂತ್ರಪಿಂಡಗಳು ದೇಹದ ಅತ್ಯಂತ ಪ್ರಮುಖ ಅಂಗಗಳಾಗಿವೆ. ಮಾನವ ದೇಹದಲ್ಲಿ ಸಾಮಾನ್ಯವಾಗಿ ಎರಡು ಕಿಡ್ನಿಗಳಿರುತ್ತವೆ. ಇವು ಬೆನ್ನಿನ ಕೆಳಭಾಗದಲ್ಲಿ, ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ನೆಲೆಗೊಂಡಿರುತ್ತವೆ. ಪ್ರತಿಯೊಂದು ಕಿಡ್ನಿಯು ಸರಿಸುಮಾರು ಮನುಷ್ಯನ ಮುಷ್ಟಿಯ ಗಾತ್ರದಲ್ಲಿರುತ್ತದೆ.
ದೇಹದಲ್ಲಿ ಕಿಡ್ನಿ ಮಾಡುವ ಕೆಲಸಗಳೇನು?
ರಕ್ತವನ್ನು ಶುದ್ಧೀಕರಿಸುತ್ತವೆ: ಮೂತ್ರಪಿಂಡಗಳು ಪ್ರತಿದಿನ ಸುಮಾರು 150 ರಿಂದ 180 ಲೀಟರ್ ರಕ್ತವನ್ನು ಸೋಸಿ (Filter), ಮೂತ್ರದ ಮೂಲಕ ದೇಹದಿಂದ ವಿಷಕಾರಿ ವಸ್ತುಗಳನ್ನು ಹಾಗೂ ಹೆಚ್ಚುವರಿ ನೀರನ್ನು ಹೊರಹಾಕುತ್ತವೆ.
ದೇಹದಲ್ಲಿ ನೀರಿನ ಸಮತೋಲನ ಕಾಯ್ದುಕೊಳ್ಳುತ್ತವೆ: ದೇಹದ ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಹಿಡಿದಿಟ್ಟುಕೊಳ್ಳುವುದು ಅಥವಾ ಹೆಚ್ಚುವರಿ ನೀರನ್ನು ಹೊರಹಾಕುವುದು ಕಿಡ್ನಿಯ ಪ್ರಮುಖ ಕಾರ್ಯ.
ರಕ್ತದೊತ್ತಡ ನಿಯಂತ್ರಣ: ಮೂತ್ರಪಿಂಡಗಳು 'ರೆನಿನ್' (Renin) ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತವೆ. ಇದು ರಕ್ತದೊತ್ತಡವನ್ನು (BP) ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಎಲೆಕ್ಟ್ರೋಲೈಟ್ ಸಮತೋಲನ: ದೇಹದಲ್ಲಿ ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ನಂತಹ ಪ್ರಮುಖ ಖನಿಜಗಳ ಸಮತೋಲನವನ್ನು ಕಿಡ್ನಿಗಳು ಕಾಯ್ದುಕೊಳ್ಳುತ್ತವೆ.
ಕೆಂಪು ರಕ್ತಕಣಗಳ ಉತ್ಪಾದನೆಗೆ ನೆರವು: ಕಿಡ್ನಿಗಳು 'ಎರಿಥ್ರೋಪೊಯೆಟಿನ್' (Erythropoietin) ಎಂಬ ಹಾರ್ಮೋನ್ ಸ್ರವಿಸುತ್ತವೆ. ಇದು ಕೆಂಪು ರಕ್ತಕಣಗಳನ್ನು (RBC) ಉತ್ಪಾದಿಸಲು ಮೂಳೆ ಮಜ್ಜೆಯನ್ನು (Bone marrow) ಪ್ರೇರೇಪಿಸುತ್ತದೆ.
ಮೂಳೆಗಳ ಬಲವರ್ಧನೆ: ಮೂತ್ರಪಿಂಡಗಳು ವಿಟಮಿನ್ ಡಿ ಅನ್ನು ಅದರ ಸಕ್ರಿಯ ರೂಪಕ್ಕೆ ಪರಿವರ್ತಿಸುತ್ತವೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸಿ, ಮೂಳೆಗಳನ್ನು ಬಲಪಡಿಸುತ್ತದೆ.
ಕಿಡ್ನಿ ವೈಫಲ್ಯದ ಆರಂಭಿಕ ಲಕ್ಷಣಗಳು
- ಪದೇ ಪದೇ ಅಥವಾ ಅತಿಯಾಗಿ ಮೂತ್ರ ವಿಸರ್ಜನೆಯಾಗುವುದು.
- ಕಾಲುಗಳು ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳುವುದು.
- ನಿರಂತರ ಆಯಾಸ ಮತ್ತು ಬಲಹೀನತೆ.
- ಹಸಿವಿನ ಕೊರತೆ.
- ವಾಂತಿ ಅಥವಾ ವಾಕರಿಕೆಯ ಅನುಭವ.
- ಅಧಿಕ ರಕ್ತದೊತ್ತಡ (High BP).
- ಮೂತ್ರದಲ್ಲಿ ರಕ್ತ ಅಥವಾ ನೊರೆ ಕಾಣಿಸಿಕೊಳ್ಳುವುದು.
ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಉಪಾಯಗಳು
- ಪ್ರತಿದಿನ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಿರಿ.
- ರಕ್ತದಲ್ಲಿನ ಸಕ್ಕರೆ ಪ್ರಮಾಣ (Shooting sugar) ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ.
- ಅತಿಯಾದ ಉಪ್ಪು ಮತ್ತು ಸಂಸ್ಕರಿಸಿದ (Processed) ಆಹಾರ ಸೇವನೆಯಿಂದ ದೂರವಿರಿ.
- ಕ್ರಿಯಾಶೀಲವಾಗಿರಿ ಮತ್ತು ದಿನನಿತ್ಯ ನಿಯಮಿತ ವ್ಯಾಯಾಮ ಮಾಡಿ.
- ಧೂಮಪಾನ ಮತ್ತು ಮದ್ಯಪಾನ ಅಭ್ಯಾಸವನ್ನು ಸಂಪೂರ್ಣವಾಗಿ ತ್ಯಜಿಸಿ.
- ವೈದ್ಯರ ಸಲಹೆಯಿಲ್ಲದೆ ಮನಸೋಇಚ್ಛೆ ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು (Painkillers) ಸೇವಿಸಬೇಡಿ.
ಯಾರು ಕಡ್ಡಾಯವಾಗಿ ಕಿಡ್ನಿ ತಪಾಸಣೆ ಮಾಡಿಸಿಕೊಳ್ಳಬೇಕು?
- ಮಧುಮೇಹ (ಡಯಾಬಿಟೀಸ್) ಇರುವ ರೋಗಿಗಳು
- ಅಧಿಕ ರಕ್ತದೊತ್ತಡ (BP) ಸಮಸ್ಯೆ ಇರುವವರು.
- ಬೊಜ್ಜು ಅಥವಾ ಅತಿಯಾದ ತೂಕ ಹೊಂದಿರುವವರು.
- 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು.
- ಕುಟುಂಬದಲ್ಲಿ ಕಿಡ್ನಿ ಕಾಯಿಲೆಯ ಇತಿಹಾಸ (Family History) ಇದ್ದವರು.
- ನಿಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಕೇವಲ ಜಾಗೃತಿ ಮತ್ತು ಅರಿವಿಗಾಗಿ ಮಾತ್ರ. ಇದನ್ನು ತಜ್ಞರ ಸಲಹೆಗಳ ಆಧಾರದ ಮೇಲೆ ನೀಡಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಸಂದೇಹಗಳಿದ್ದಲ್ಲಿ ತಕ್ಷಣವೇ ಸಂಬಂಧಪಟ್ಟ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಕಡ್ಡಾಯ.)


