ಮಳೆಗಾಲದಲ್ಲಿ ಬೆಚ್ಚಗಿರಲು ಕೆಲವು ಸಂಗತಿಗಳನ್ನು ಎಲ್ಲರೂ ಮಾಡುವುದು ಸಾಮಾನ್ಯ. ಆದರೆ ಇವುಗಳ ಅತಿಯಾದ ಬಳಕೆಯೂ ಆರೋಗ್ಯಕ್ಕೆ ಹಾನಿಕರ. ಮಿತವಾಗಿರಲು ಎಚ್ಚರ!
ಬೇಸಿಗೆಯಂತೆ ಮಳೆಗಾಲದಲ್ಲಿ ನಿಮ್ಮ ದೇಹ ಚುರುಕಾಗಿರುವುದಿಲ್ಲ. ಚಳಿಗಾಲದ ಹಾಗೇ ಮಳೆಗಾಲದಲ್ಲೂ ಶರೀರ ಸೋಮಾರಿಯಾಗುತ್ತದೆ. ಬೇಗನೆ ಏಳುವುದಿಲ್ಲ, ವಾಕಿಂಗ್ ಮಾಡುವುದಿಲ್ಲ. ಆಗಾಗ ಬಿಸಿಬಿಸಿ ಕಾಫೀ ಟೀ ಸೇವಿಸುತ್ತೇವೆ. ಬಜ್ಜಿ ಬೋಂಡಾ ಕುರುಕಲು ಹೆಚ್ಚು ಸೇವಿಸುತ್ತೇವೆ. ಬಿಸಿಬಿಸೀ ನೀರಿನಲ್ಲಿ ಸ್ನಾನ ಮಾಡುತ್ತೇವೆ. ಆದರೆ ಇವೆಲ್ಲವೂ ಒಳ್ಳೆಯದೇ? ಮಳೆಗಾಲದಲ್ಲಿ ನಾವು ಮಾಡುವ ಹಲವು ತಪ್ಪುಗಳು ನಮ್ಮ ದೇಹದ ಹದ ಕೆಡಿಸಬಹುದು. ಅಂಥ ಕೆಲವು ಇಲ್ಲಿವೆ ನೋಡಿ.
1) ಅತಿಯಾಗಿ ಕಾಫಿ ಟೀ ಸೇವನೆ: ಮಳೆಯಿಂದ ಆದ ಚಳಿ ಹೋಗಲಾಡಿಸಲು ಬೆಳಗ್ಗೆ ವಾಕಿಂಗ್ ಮೊದಲೊಮ್ಮೆ, ವಾಕಿಂಗ್ ಮುಗಿಸಿ ಒಮ್ಮೆ, ತಿಂಡಿಯ ಜೊತೆಗೊಮ್ಮೆ, ಮಧ್ಯಾಹ್ನ, ಸಂಜೆ ಹೀಗೆಲ್ಲಾ ಕಾಫಿ- ಟೀ ಸೇವಿಸುವವರಿರುತ್ತಾರೆ. ಸೇವಿಸಿದಾಗ ಒಮ್ಮೆ ಕಾಫಿಯಲ್ಲಿರುವ ಕೆಫೀನ್ ನಿಮಗೆ ಚೈತನ್ಯ ನೀಡುತ್ತದೆ. ಆದರೆ ಅದು ಅತಿಯಾದರೆ, ದೇಹಕ್ಕೆ ಹಾನಿಯಾಗಬಹುದು.
2) ಹೆಚ್ಚು ಬಿಸಿ ನೀರಿನ ಸ್ನಾನ: ಮಳೆಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಸಹಜ. ಆದರೆ ಈ ನೀರಿನ ಉಷ್ಣತೆ 32 ಡಿಗ್ರಿ ಸೆಲ್ಸಿಯಸ್‌ವರೆಗೆ ಮಾತ್ರ ಇರಬೇಕು ಎಂದು ಸಂಶೋಧನೆಗಳು ಹೇಳುತ್ತವೆ. ಇದಕ್ಕಿಂತ ಹೆಚ್ಚು ಬಿಸಿನೀರಿನ ಸ್ನಾನ ಮಾಡಿದರೆ ಚರ್ಮ ಮತ್ತು ಕೂದಲಿಗೆ ಹಾನಿಯಾಗುತ್ತದೆ. ಚರ್ಮದ ಸೋಂಕುಗಳು ಕಾಡಬಹುದು. ಹೆಚ್ಚು ಬಿಸಿನೀರಿನಿಂದ ಚರ್ಮದ ಅಂಗಾಂಶಗಳು ಹಾನಿಗೀಡಾಗಬಹುದು. ಚರ್ಮ ಮುದುಡಿಕೊಳ್ಳಬಹುದು, ಸುಕ್ಕುಗಳು ಉಂಟಾಗಬಹುದು.
3) ಅತಿಯಾಗಿ ಕೋಲ್ಡ್ ಕ್ರೀಂ ಬಳಕೆ: ಚರ್ಮದ ಶುಷ್ಕತೆಯನ್ನು ತಡೆಗಟ್ಟಲು ನೀವು ಪದೇ ಪದೇ ಎಣ್ಣೆ ಅಥವಾ ಜಿಗುಟಾದ ಕ್ರೀಮ್ ಅನ್ನು ಚರ್ಮಕ್ಕೆ ಹಚ್ಚುತ್ತಿದ್ದೀರಾ? ಅದು ಧೂಳು ಮತ್ತು ಸೂಕ್ಷ್ಮಜೀವಿಗಳನ್ನು ಆಕರ್ಷಿಸಿ ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ.
4) ತುಂಬಾ ದಪ್ಪದ ಬಟ್ಟೆ ಧರಿಸುವುದು: ದೇಹವನ್ನು ಬೆಚ್ಚಗಿಡಲು ಒಂದು ಜರ್ಕಿನ್ ಧರಿರಬಹುದು. ಆದರೆ ಕೆಲವರು ಒಂದರ ಮೇಲೊಂದರಂತೆ ಹಲವು ಬಟ್ಟೆಗಳನ್ನು ಧರಿಸುತ್ತಾರೆ. ಇದರಿಂದ ದೇಹ ತುಂಬಾ ಬಿಸಿಯಾಗುತ್ತದೆ. ನಮ್ಮ ದೇಹದ ಇಮ್ಯುನಿಟಿ ವ್ಯವಸ್ಥೆಯೇ ಶೀತದ ಬಾಧೆ ತಡೆಯಲು ಸಾಕಾಗುತ್ತದೆ. ಇದು ದೇಹವನ್ನು ಸೋಂಕುಗಳಿಂದ ಸುರಕ್ಷಿತವಾಗಿರಿಸುತ್ತದೆ. ಆದರೆ ದೇಹ ಹೆಚ್ಚು ಬಿಸಿಯಾದಾಗ ಪ್ರತಿರೋಧ ವ್ಯವಸ್ಥೆಯು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ.
5) ನೀರು ಸೇವಿಸದಿರುವುದು: ಮಳೆಗಾಲದಲ್ಲಿ ಹೆಚ್ಚು ಬಾಯಾರಿಕೆಯಾಗುವುದಿಲ್ಲ, ಹೀಗಾಗಿ ಜನ ನೀರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಈ ರೀತಿ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ದೇಹ ನಿರ್ಜಲೀಕರಣಗೊಳ್ಳಲು ಆರಂಭಿಸುತ್ತದೆ. ಮೂತ್ರಪಿಂಡ ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.
6) ಮಿತಿ ಮೀರಿದ ಆಹಾರ: ಕುಳಿತಲ್ಲೇ ಕುಳಿತ ಕಾರಣ ಹೆಚ್ಚು ತಿನ್ನಲಾರಂಭಿಸುತ್ತೇವೆ. ದೇಹದ ಕ್ಯಾಲೋರಿಗಳು ಹೆಚ್ಚು ಖರ್ಚಾಗುವುದಿಲ್ಲ. ನಾವು ಅಗತ್ಯಕ್ಕಿಂತ ಹೆಚ್ಚು ತಿನ್ನಲು ಪ್ರಾರಂಭಿಸುತ್ತೇವೆ. ಜತೆಗೆ ಎಣ್ಣೆತಿಂಡಿ ಸೇವನೆಯನ್ನೂ ಮಾಡುತ್ತೇವೆ. ಇದರಿಂದ ಆರೋಗ್ಯಕ್ಕೆ ಹಾನಿ ಖಚಿತ.
ಎದ್ದ ತಕ್ಷಣ ಫೋನ್ ನೋಡೋದ್ರಿಂದ ಆಗೋ ಅಪಾಯ ಗೊತ್ತಾ?
7) ಅತಿಯಾದ ನಿದ್ರೆ: ಮಳೆಗಾಲದಲ್ಲಿ ಬೆಚ್ಚಗಿನ ಹಾಸಿಗೆಯಲ್ಲಿ ಸಮಯ ಕಳೆಯುವುದು ಆನಂದಕರ. ಮಲಗಿದ ತಕ್ಷಣ ನಿದ್ರೆ ಬರಬಹುದು. ಬೆಳಿಗ್ಗೆ ತಡವಾಗಿ ಏಳುತ್ತೇವೆ. ಮಧ್ಯಾಹ್ನವೂ ನಿದ್ದೆ ಮಾಡುತ್ತೇವೆ. ಆದರೆ ಇದೆಲ್ಲಾ ದೇಹದ ನಿಗದಿತ ಜೈವಿಕ ಚಕ್ರವನ್ನು ಏರುಪೇರು ಮಾಡುತ್ತದೆ. ಮಳೆಗಾಲ ಮುಗಿದ ಬಳಿಕದ ದಿನಚರಿ ಇದರಿಂದ ಕಷ್ಟವಾಗಬಹುದು.
8) ವಾಕಿಂಗ್ ಕೈಬಿಡುವುದು: ತುಂಬಾ ಮಂದಿ ಈ ಮಳೆಯ ನಡುವೆ ವಾಕಿಂಗ್ ಯಾಕೆ ಎಂದುಕೊಂಡು ಹಾಸಿಗೆಯಲ್ಲೇ ಮುದುಡುತ್ತಾರೆ. ಮುಂಜಾನೆಯ ವಾಕಿಂಗ್ ಕ್ಯಾನ್ಸಲ್ ಮಾಡುತ್ತಾರೆ. ಇದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ನಿಯಮಿತ ವ್ಯಾಯಾಮ ದೇಹವನ್ನು ಬೆಚ್ಚಗಾಗಿಸುತ್ತದೆ. ಮುಂಜಾನೆ ಆಗದಿದ್ದರೆ ಸಂಜೆಯ ವಾಕಿಂಗನ್ನಾದರೂ ಮಾಡಬೇಕು.
