ನಮ್ಮ ದೇಹದಲ್ಲಿ ಕಾರ್ಟಿಸೋಲ್ (Cortisol) ಎಂಬ ಹಾರ್ಮೋನ್ ಸಹಜವಾಗಿ ಬಿಡುಗಡೆಯಾಗುತ್ತದೆ. ಇದು ದೇಹವನ್ನು ಎಚ್ಚರಗೊಳ್ಳಲು ಸಿದ್ಧಪಡಿಸುವ ಪ್ರಕ್ರಿಯೆಯ ಭಾಗವಾಗಿದೆ. ಸಾಮಾನ್ಯವಾಗಿ ಬೆಳಗಿನ ಸಮಯ ಸಮೀಪಿಸುತ್ತಿದ್ದಂತೆ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ.

ಬೆಳಗ್ಗಿನ ಜಾವ ನಿದ್ದೆ ಬರುತ್ತಿಲ್ಲವೆ? ಚಿಂತೆ ಮಾಡ್ಬೇಡಿ.. ಈ ಸ್ಟೋರಿ ನೋಡಿ!

ರಾತ್ರಿ ಯಾವುದೋ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತೀರಿ. ಸಮಯ ನೋಡಿದರೆ ಇನ್ನೂ ನಸುಕಿನ (Sleeping Problem) ಮೂರೂವರೆ. ಈಗೇಕೆ ಎಚ್ಚರವಾಯಿತು ಎಂದು ಅಚ್ಚರಿ ಗೊಳ್ಳುತ್ತೀರಿ. ಕೆಟ್ಟ ಕನಸೇನೂ ಬಿದ್ದಿಲ್ಲ, ಸೆಕೆ-ಚಳಿ ಎಲ್ಲವೂ ಹದವಾಗಿಯೇ ಇದೆ. ಹೀಗೇಕಾಯಿತು ಎಂದು ಯೋಚಿಸುತ್ತಾ ಮಗ್ಗುಲು ಬದಲಿಸಿ ನಿದ್ದೆ ಮಾಡಲು ಯತ್ನಿಸುತ್ತೀರಿ. ಊಹುಂ, ನಿಚ್ಚಳವಾಗಿ ಎಚ್ಚರವಾಗಿಬಿಟ್ಟಿದೆ. ಬಾತ್‌ರೂಂ ಭೇಟಿ ಮಾಡುತ್ತೀರಿ, ನೀರು ಕುಡಿಯುತ್ತೀರಿ… ಏನು ಮಾಡಿದರೂ ನಿದ್ರೆ ಬರುತ್ತಿಲ್ಲ. ಹೀಗೇಕಾಯಿತು? ಇದರಿಂದ ಆರೋಗ್ಯಕ್ಕೆ ಸಮಸ್ಯೆಯೇ?

ನಸುಕಿನಲ್ಲಿ ಪದೇ ಪದೆ ಎಚ್ಚರವಾಗುತ್ತಿದೆಯೇ? ನಿರ್ಲಕ್ಷ್ಯ ಬೇಡ, ನಿದ್ರೆ ಹಾಳಾಗಲು ಈ ಕಾರಣಗಳಿರಬಹುದು!

ರಾತ್ರಿ ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದಾಗ ನಸುಕಿನ ಜಾವದಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗುತ್ತಿದೆಯೇ? ಮತ್ತೆ ಮಲಗಲು ಪ್ರಯತ್ನಿಸಿದರೂ ನಿದ್ರೆ ಬರುತ್ತಿಲ್ಲವೇ? ಒಮ್ಮೊಮ್ಮೆ ಹೀಗಾಗುವುದು ಸಾಮಾನ್ಯ. ಆದರೆ ಪದೇ ಪದೆ ಇದೇ ಸಮಸ್ಯೆ ಎದುರಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ನಿದ್ರೆಯ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾದರೆ ನಸುಕಿನಲ್ಲಿ ಎಚ್ಚರವಾಗಲು ಕಾರಣವೇನು? ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ?

ಒತ್ತಡವೂ ನಿದ್ರೆಗೆ ಅಡ್ಡಿಯಾಗಬಹುದು!

ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಜಾವ ಎಚ್ಚರವಾಗಿ ಮತ್ತೆ ನಿದ್ರೆ ಮಾಡಲು ಸಾಧ್ಯವಾಗದಿರುವುದಕ್ಕೆ ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು. ಕೆಲಸದ ಒತ್ತಡ, ಕುಟುಂಬದ ಸಮಸ್ಯೆಗಳು, ಭವಿಷ್ಯದ ಚಿಂತೆ ಹೀಗೆ ಹಲವು ವಿಚಾರಗಳು ಮನಸ್ಸನ್ನು ಕಾಡುತ್ತಿದ್ದರೆ ನಿದ್ರೆಯ ಗುಣಮಟ್ಟ ಕುಸಿಯಬಹುದು. ರಾತ್ರಿ ಮಲಗಿದರೂ ಮನಸ್ಸು ಮಾತ್ರ ಚಿಂತೆಯಲ್ಲೇ ಮುಳುಗಿದ್ದರೆ, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಸಿಗುವುದು ಕಷ್ಟವಾಗುತ್ತದೆ.

ಕಾರ್ಟಿಸೋಲ್ ಹಾರ್ಮೋನ್ ಪಾತ್ರವೇನು?

ನಮ್ಮ ದೇಹದಲ್ಲಿ ಕಾರ್ಟಿಸೋಲ್ (Cortisol) ಎಂಬ ಹಾರ್ಮೋನ್ ಸಹಜವಾಗಿ ಬಿಡುಗಡೆಯಾಗುತ್ತದೆ. ಇದು ದೇಹವನ್ನು ಎಚ್ಚರಗೊಳ್ಳಲು ಸಿದ್ಧಪಡಿಸುವ ಪ್ರಕ್ರಿಯೆಯ ಭಾಗವಾಗಿದೆ. ಸಾಮಾನ್ಯವಾಗಿ ಬೆಳಗಿನ ಸಮಯ ಸಮೀಪಿಸುತ್ತಿದ್ದಂತೆ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಆದರೆ ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವ ಕೆಲವರಲ್ಲಿ ನಿದ್ರೆ ಹೆಚ್ಚು ಸೂಕ್ಷ್ಮವಾಗಬಹುದು. ಇದರಿಂದ ಸಣ್ಣ ಶಬ್ದಕ್ಕೂ ಎಚ್ಚರವಾಗುವುದು, ಎಚ್ಚರವಾದ ಬಳಿಕ ಮತ್ತೆ ನಿದ್ರೆ ಮಾಡಲು ಕಷ್ಟವಾಗುವುದು ಸಂಭವಿಸಬಹುದು.

ಹಾಸಿಗೆಯಲ್ಲಿ ಮಲಗಿಕೊಂಡು ಮತ್ತೆ ನಿದ್ರೆ ಬರಲಿ ಎಂದು ಒದ್ದಾಡಿದಷ್ಟೂ ಮನಸ್ಸು ಚುರುಕಾಗಬಹುದು. ಇದರಿಂದ ನಿದ್ರೆಯ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಗಾಢ ನಿದ್ರೆಗಾಗಿ ಈ ಸಲಹೆಗಳನ್ನು ಪಾಲಿಸಿ

* ಮಲಗುವ ಮೊದಲು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಅದರ ಬದಲು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ.

* ರಾತ್ರಿ ಮಲಗುವ ಮುನ್ನ ಆರಾಮದಾಯಕ ಸಂಗೀತ ಕೇಳಿ ಅಥವಾ ನಿಧಾನವಾಗಿ ಉಸಿರಾಟದ ವ್ಯಾಯಾಮ ಮಾಡಿ.

* ಭ್ರಾಮರಿಯಂತಹ ಪ್ರಾಣಾಯಾಮವನ್ನು ಸೂಕ್ತ ವಿಧಾನದಲ್ಲಿ ಅಭ್ಯಾಸ ಮಾಡಬಹುದು.

* ಮಲಗುವ ಕೋಣೆಯನ್ನು ಆರಾಮದಾಯಕವಾಗಿಟ್ಟುಕೊಳ್ಳಿ. ಬೆಳಕು ಮತ್ತು ಶಬ್ದವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

* ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ರೂಢಿಸಿಕೊಳ್ಳಿ.

* ನಸುಕಿನಲ್ಲಿ ಎಚ್ಚರವಾದಾಗ ನಿದ್ರೆ ಬರಲೇಬೇಕು ಎಂದು ಒತ್ತಡ ಹೇರಿಕೊಳ್ಳಬೇಡಿ. ನಿಧಾನವಾಗಿ ಉಸಿರಾಡಿ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸಿ.

ಪದೇ ಪದೆ ನಸುಕಿನಲ್ಲಿ ಎಚ್ಚರವಾಗುವುದು ಹಲವು ವಾರಗಳವರೆಗೆ ಮುಂದುವರಿದರೆ ಅಥವಾ ಹಗಲಿನಲ್ಲಿ ಸುಸ್ತು, ಏಕಾಗ್ರತೆಯ ಕೊರತೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಒತ್ತಡ ಕಡಿಮೆ ಮಾಡುವುದು ಮತ್ತು ಆರೋಗ್ಯಕರ ನಿದ್ರೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ನೆಮ್ಮದಿಯ ನಿದ್ರೆಗೆ ನೆರವಾಗಬಹುದು.