ರಕ್ತದಾನವು ಜೀವರಕ್ಷಕ ಕಾರ್ಯವಾಗಿದ್ದು, ಶಸ್ತ್ರಚಿಕಿತ್ಸೆಗಳು, ಅಪಘಾತಗಳು, ರಕ್ತಹೀನತೆ, ಕ್ಯಾನ್ಸರ್ ಮತ್ತು ಹಿಮೋಫಿಲಿಯಾದಂತಹ ದೀರ್ಘಕಾಲದ ಕಾಯಿಲೆಗಳಿಂದ ನಷ್ಟವಾದ ರಕ್ತವನ್ನು ಮರುಪೂರೈಸಲು ಸಹಾಯ ಮಾಡುತ್ತದೆ. 

ಶಸ್ತ್ರಚಿಕಿತ್ಸೆಗಳು, ಅಪಘಾತಗಳು, ರಕ್ತಹೀನತೆ, ಕ್ಯಾನ್ಸರ್ ಅಥವಾ ಹಿಮೋಫಿಲಿಯಾದಂತಹ ದೀರ್ಘಕಾಲದ ಕಾಯಿಲೆಗಳಿಂದಾಗಿ ನಷ್ಟವಾದ ರಕ್ತವನ್ನು ಮರುಪೂರೈಸುವಲ್ಲಿ ರಕ್ತದಾನವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನೇರವಾಗಿ ಜೀವಗಳನ್ನು ಉಳಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಈ ಕಾರ್ಯವು ಜೀವರಕ್ಷಣೆಯ ಕಾರ್ಯದಲ್ಲಿ ಅತ್ಯಗತ್ಯವಾಗಿದೆ. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಅದನ್ನು ಜೀವಂತ, ಆರೋಗ್ಯವಂತ ದಾನಿಯಿಂದ ಮಾತ್ರ ಪಡೆಯಬಹುದು. ಒಂದೇ ರಕ್ತದ ಮಾದರಿಯಿಂದ ಕೆಂಪು ರಕ್ತಕಣಗಳು, ಪ್ಲಾಸ್ಮಾ ಹಾಗೂ ಪ್ಲೇಟ್ಲೇಟ್ಸ್ ಭಾಗಗಳನ್ನು ಬೇರ್ಪಡಿಸಿ ಸುಟ್ಟಗಾಯಗಳು, ಕ್ಯಾನ್ಸರ್, ಅನೇಮಿಯಾ (ರಕ್ತ ಹೀನತೆ) ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಯಾವುದೇ ರೀತಿಯಲ್ಲೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ಆದರೆ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಬಹಳ ಮುಖ್ಯ . ಒಬ್ಬ ದಾನಿಯಿಂದ ಮೂರು ಜೀವಗಳನ್ನು ರಕ್ಷಿಸಬಹುದು ಹೀಗಾಗಿ ರಕ್ತದಾನದ ಬಗ್ಗೆ ಅರಿವು, ಜಾಗೃತಿ ಬಹಳ ಮುಖ್ಯ.

ರಕ್ತದಾನ ಮಾಡಲು ಯಾರು ಅರ್ಹರು?
18 ರಿಂದ 60 ವರ್ಷ ವಯಸ್ಸಿನ ಪ್ರತಿಯೊಬ್ಬ ಆರೋಗ್ಯವಂತ ವಯಸ್ಕರು ರಕ್ತದಾನ ಮಾಡಬಹುದು. ಕನಿಷ್ಠ 45 ಕೆಜಿ ತೂಕ ಮತ್ತು ಕನಿಷ್ಠ 12.5 ಗ್ರಾಂ/ಡಿಎಲ್ ಹಿಮೋಗ್ಲೋಬಿನ್ ಅಗತ್ಯವಿರುತ್ತದೆ. ಒಟ್ಟಾರೆಯಾಗಿ ಉತ್ತಮ ಆರೋಗ್ಯ ಹೊಂದಿರುವುದು ಕಡ್ಡಾಯ ಮತ್ತು ರಕ್ತದಾನದ ಸಮಯದಲ್ಲಿ ರಕ್ತದಾನ ಮಾಡುವವರು ಯಾವುದೇ ಸೋಂಕುಗಳು ಅಥವಾ ಕಾಯಿಲೆಗಳಿಂದ ನರಳುತ್ತಿರಬಾರದು. ದೀರ್ಘಕಾಲದ ಅಸ್ವಸ್ಥತೆಗಳು, ಹೃದಯ ಕಾಯಿಲೆಗಳು ಅಥವಾ ಅಟೋಇಮ್ಯೂನ್ ಅಸ್ವಸ್ಥೆಗಳಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳು ರಕ್ತದಾನಕ್ಕೆ ಅವಕಾಶ ನೀಡುವುದಿಲ್ಲ.

ಕೆಲವು ಶಸ್ತ್ರಚಿಕಿತ್ಸೆಗಳು ಅಥವಾ ವೈದ್ಯಕೀಯ ಕಾರ್ಯವಿಧಾನಗಳು ವಿಶ್ರಾಂತಿಗೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಇಂತಹ ಸಂದರ್ಭದಲ್ಲೂ ರಕ್ತದಾನ ಸೂಕ್ತವಲ್ಲ. ಎಚ್ಐವಿ, ಹೆಪಟೈಟಿಸ್ ಅಥವಾ ಎಸ್ಟಿಐಗಳಂತಹ ಕೆಲವು ಸೋಂಕು ರೋಗಗಳನ್ನು ಹೊಂದಿರುವ ಜನರು ಮತ್ತು ಕೆಲವು ನಿರ್ದಿಷ್ಟ ಔಷಧಿಗಳನ್ನು ತೆಗೆದುಕೊಳ್ಳುವವರು ರಕ್ತದಾನ ಮಾಡುವ ವಿಚಾರವಾಗಿ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನಿರ್ಬಂಧಕ್ಕೆ ಒಳಗಾಗಬಹುದು.

ಚಿಕಿತ್ಸೆಯಲ್ಲಿ ಹೇಗೆ ಬಳಸಲಾಗುತ್ತದೆ?
ಕೊರತೆ ಇರುವ ರಕ್ತದ ಪ್ರಮಾಣವನ್ನು ಮರುಪೂರ್ಣಗೊಳಿಸುವ ಮೂಲಕ, ಕೆಂಪು ರಕ್ತ ಕಣಗಳು, ಪ್ಲೆಟ್ಲೆಟ್ಸ್ , ಪ್ಲಾಸ್ಮಾ ಹಾಗೂ ಕ್ರಯೊಪ್ರೆಸಿಪಿಟೆಟ್ ವಿವಿಧ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಲು ನೆರವಾಗುತ್ತವೆ.

ಸಂಗ್ರಹಿಸಿಟ್ಟ ಕೆಂಪು ರಕ್ತ ಕಣಗಳು ಅನಿಮಿಯಾ ಹಾಗೂ ರಕ್ತ ನಷ್ಟದಂತಹ ಸಮಸ್ಯೆಯನ್ನು ಗುಣಪಡಿಸಲು ಉಪಯೋಗಿಸಲಾಗುತ್ತದೆ.

ಪ್ಲೇಟ್ಲೆಟ್ಸ್‌ ಕೊರತೆಯಿಂದ ಉಂಟಾಗುವ ರಕ್ತಸೋರಿಕೆ ಸಮಸ್ಯೆಯನ್ನು ಪ್ಲೇಟ್ಲೆಟ್ಸ್ ನೀಡುವ ಮೂಲಕ ಹಾಗೂ ರಕ್ತಸ್ರಾವ ನಿಯಂತ್ರಿಸಿ ರಕ್ತ ಹೆಪ್ಪುಗಟ್ಟಲು ನೆರವಾಗುವ ಅಂಶದ ಕೊರತೆಗೆ ಫ್ರೋಜನ್ ಪ್ಲಾಸ್ಮಾವನ್ನು ಬಳಸಲಾಗುತ್ತದೆ.

ತೀವ್ರ ರಕ್ತಸ್ರಾವ, ಟ್ರಾಮಾ , ಅಧಿಕವಾಗಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ (ಡಿಐಸಿ) ಚಿಕಿತ್ಸೆಗೆ ಕ್ರಯೊಪ್ರೆಸಿಪಿಟೆಟ್ನಲ್ಲಿರುವ ಪ್ರೊಟೀನ್ ಎಸೆನ್ಶಿಯಲ್ ಫಿಬ್ರಿನೊಜಿನ್ ಬಳಸಲಾಗುತ್ತದೆ.

ರಕ್ತದಲ್ಲಿರುವ ಪ್ರತಿಯೊಂದು ಘಟಕವೂ ವಿವಿಧ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ನಿರ್ಮಿತವಾಗಿದೆ.

ಎಷ್ಟು ದಿನ ಶೇಖರಿಸಿಡಬಹುದು?
ಆಸ್ಪತ್ರೆಗಳಲ್ಲಿ, ರಕ್ತದ ಘಟಕಗಳ ಜೀವಿತಾವಧಿಯು ರಕ್ತದ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಕೆಂಪು ರಕ್ತ ಕಣಗಳನ್ನು 2–8°C ನಲ್ಲಿ 42 ದಿನಗಳವರೆಗೆ ಸಂಗ್ರಹಿಸಬಹುದು.

ಪ್ಲೇಟ್ಲೆಟ್‌ಗಳು 20–24°C ನಲ್ಲಿ 5 ದಿನಗಳವರೆಗೆ ಇರುತ್ತವೆ.

ತಾಜಾ ಹೆಪ್ಪುಗಟ್ಟಿದ ಪ್ಲಾಸ್ಮಾ ಮತ್ತು ಕ್ರಯೋಪ್ರೆಸಿಪಿಟೇಟ್ ಅನ್ನು -30°C ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಒಂದು ವರ್ಷದವರೆಗೆ ಸಂರಕ್ಷಿಸಬಹುದು.

ಎಷ್ಟು ಬಾರಿ ರಕ್ತದಾನ ಮಾಡಬಹುದು?
ಆರೋಗ್ಯವಂತ ವ್ಯಕ್ತಿ ಪ್ರತಿ 12 ವಾರಗಳಿಗೊಮ್ಮೆ ರಕ್ತದಾನ ಮಾಡಬಹುದು. ಮೊದಲ ಬಾರಿಗೆ ರಕ್ತದಾನ ಮಾಡುವವರು ತಮ್ಮ ದೇಹದಲ್ಲಿ ಉತ್ತಮ ನೀರಿನ ಅಂಶ ಹೊಂದಿರಬೇಕು, ಸಮತೋಲಿತ ಆಹಾರ ಸೇವಿಸಬೇಕು ಮತ್ತು ರಕ್ತದಾನ ಮಾಡುವ ಮೊದಲು ಸಾಕಷ್ಟು ನಿದ್ರೆ ಪಡೆಯಬೇಕು. ರಕ್ತದಾನದ ವೇಳೆ ಆರಾಮದಾಯಕ ಬಟ್ಟೆಗಳನ್ನು ಧರಿಸಲು ಸೂಚಿಸಲಾಗುತ್ತದೆ. ಈ ಪ್ರಕ್ರಿಯೆಯ ಸಮಯದಲ್ಲಿ, ತಲೆತಿರುಗುವಿಕೆ ಅಥವಾ ಮೂರ್ಛೆ ಬಂದರೆ, ತಕ್ಷಣ ಸಿಬ್ಬಂದಿಗೆ ತಿಳಿಸಿ. ರಕ್ತದಾನದ ನಂತರ, ಸ್ವಲ್ಪ ವಿಶ್ರಾಂತಿ ಪಡೆಯಿರಿ ಮತ್ತು ನೀರು ಅಥವಾ ಹಣ್ಣಿನ ರಸವನ್ನು ಸೇವಿಸಿ. ಸರಿಯಾದ ಚೇತರಿಕೆಗಾಗಿ ಕನಿಷ್ಠ 24 ಗಂಟೆಗಳ ಕಾಲ ಮದ್ಯ ಮತ್ತು ಧೂಮಪಾನ ತಪ್ಪಿಸಿ.

- ಡಾ.ದೀಪಾ ಅಡಿಗ, ರಕ್ತ ನಿಧಿಯ ಉಸ್ತುವಾರಿ ಹಾಗೂ ಡಾ. ಸಿಂಚನಾ ಕೆ ಎಮ್ , ರಕ್ತನಿಧಿ ಅಧಿಕಾರಿ ಕೆಎಂಸಿ ರಕ್ತ ಕೇಂದ್ರ, ಮಂಗಳೂರು