Soaking Rice: ಅನ್ನ ಮಾಡುವ ಮುನ್ನ ಅಕ್ಕಿಯನ್ನು ಯಾಕೆ ನೆನೆಸಬೇಕು?
Cooking rice tips: ಇದು ಕೇವಲ ರುಚಿಗಾಗಿ ಅಥವಾ ಅಭ್ಯಾಸಕ್ಕಾಗಿ ಅಲ್ಲ, ಆರೋಗ್ಯಕರ ಪದ್ಧತಿ ಕೂಡ. ಆಧುನಿಕ ಜೀವನಶೈಲಿಯಲ್ಲಿ, ಅನೇಕರು ಅವಸರದಲ್ಲಿ ಅಕ್ಕಿಯನ್ನು ನೇರವಾಗಿ ತೊಳೆದು ಬೇಯಿಸುತ್ತಾರೆ. ಆದರೆ ಅಕ್ಕಿಯನ್ನು ನೀರಿನಲ್ಲಿ ನೆನೆಸುವುದರ ಹಿಂದೆ ಹಲವು ಆರೋಗ್ಯ ರಹಸ್ಯಗಳಿವೆ.

ಹಲವಾರು ಆರೋಗ್ಯ ರಹಸ್ಯಗಳು
ನಮ್ಮ ಆಹಾರದಲ್ಲಿ ಅಕ್ಕಿಗೆ ಬಹಳ ಮುಖ್ಯ ಸ್ಥಾನವಿದೆ. ಯಾಕಂದ್ರೆ ದೋಸೆಯಿಂದ ಹಿಡಿದು ರಾತ್ರಿ ಊಟದವರೆಗೂ ಅಕ್ಕಿ ಬೇಕೇಬೇಕು. ಆದರೆ ನಮ್ಮ ಹಿರಿಯರು ಅನ್ನ ಮಾಡುವ ಮುನ್ನ ಸ್ವಲ್ಪ ಹೊತ್ತು ಅಕ್ಕಿಯನ್ನು ನೀರಿನಲ್ಲಿ ನೆನೆಸುವ ಅಭ್ಯಾಸ ಹೊಂದಿದ್ದರು. ಇದು ಕೇವಲ ರುಚಿಗಾಗಿ ಅಥವಾ ಅಭ್ಯಾಸಕ್ಕಾಗಿ ಅಲ್ಲ, ಆರೋಗ್ಯಕರ ಪದ್ಧತಿ ಕೂಡ. ಆಧುನಿಕ ಜೀವನಶೈಲಿಯಲ್ಲಿ, ಅನೇಕರು ಅವಸರದಲ್ಲಿ ಅಕ್ಕಿಯನ್ನು ನೇರವಾಗಿ ತೊಳೆದು ಬೇಯಿಸುತ್ತಾರೆ. ಆದರೆ ಅಕ್ಕಿಯನ್ನು ನೀರಿನಲ್ಲಿ ನೆನೆಸುವುದರ ಹಿಂದೆ ಹಲವು ಆರೋಗ್ಯ ರಹಸ್ಯಗಳಿವೆ.
ನೆನೆಸಿದ ಅಕ್ಕಿ ಜೀರ್ಣಕ್ರಿಯೆಗೆ ಸುಲಭ
ಅಕ್ಕಿಯನ್ನು ನೀರಿನಲ್ಲಿ ನೆನೆಸಿದಾಗ ಅದರಲ್ಲಿರುವ ಫೈಟಿಕ್ ಆಮ್ಲದ ಮಟ್ಟ ಕಡಿಮೆಯಾಗುತ್ತದೆ. ಈ ಆಮ್ಲವು ದೇಹಕ್ಕೆ ಬೇಕಾದ ಕಬ್ಬಿಣ, ಕ್ಯಾಲ್ಸಿಯಂ, ಜಿಂಕ್‌ನಂತಹ ಖನಿಜಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ನೆನೆಸುವುದರಿಂದ ಈ ಅಡಚಣೆ ಕಡಿಮೆಯಾಗಿ, ದೇಹವು ಖನಿಜಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಇದು ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಹೆಚ್ಚು ಪ್ರಯೋಜನಕಾರಿ. ಮೂಳೆಗಳ ಬಲ ಹೆಚ್ಚುತ್ತದೆ, ರಕ್ತಹೀನತೆ ಕಡಿಮೆಯಾಗುತ್ತದೆ. ನೆನೆಸಿದ ಅಕ್ಕಿ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಹೊಟ್ಟೆ ಉರಿ, ಗ್ಯಾಸ್, ಅಜೀರ್ಣ ಸಮಸ್ಯೆ ಇರುವವರಿಗೆ ಇದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಇಂಧನ ಬಳಕೆ ಕಡಿಮೆಯಾಗಿ ಖರ್ಚು ಉಳಿಯುತ್ತೆ
ಅಕ್ಕಿ ನೆನೆಸುವುದರಿಂದ ಅಡುಗೆ ಪ್ರಕ್ರಿಯೆಯೂ ಸುಧಾರಿಸುತ್ತದೆ. ನೀರಿನಲ್ಲಿ ನೆನೆಸಿದ ಅಕ್ಕಿ ಮೊದಲೇ ಸ್ವಲ್ಪ ಮೃದುವಾಗುತ್ತದೆ. ಇದರಿಂದ ಬೇಯಿಸುವಾಗ ಅನ್ನ ಸಮವಾಗಿ ಬೇಯುತ್ತದೆ. ಅನ್ನ ಉದುರುದುರಾಗಿ, ಮೃದುವಾಗಿ ಆಗುತ್ತದೆ. ರುಚಿಯೂ ಚೆನ್ನಾಗಿರುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ, ಅಡುಗೆ ಸಮಯ ಕಡಿಮೆಯಾಗುತ್ತದೆ. ಗ್ಯಾಸ್ ಅಥವಾ ಇಂಧನ ಬಳಕೆ ಕಡಿಮೆಯಾಗಿ ಖರ್ಚು ಉಳಿಯುತ್ತದೆ. ಇದು ಸಣ್ಣ ವಿಷಯ ಎನಿಸಿದರೂ, ದೀರ್ಘಕಾಲದಲ್ಲಿ ಇದೊಂದು ಉತ್ತಮ ಅಭ್ಯಾಸ. ಪ್ರತಿದಿನ ಅನ್ನ ಮಾಡುವ ಕುಟುಂಬಗಳಿಗೆ ಇದು ತುಂಬಾ ಉಪಯುಕ್ತ.
ಅರ್ಧ ಗಂಟೆ ನೆನೆಸಿದರೆ ಸಾಕು
ಆದರೆ ಅಕ್ಕಿ ನೆನೆಸುವಾಗ ಕೆಲವು ಎಚ್ಚರಿಕೆಗಳು ಬೇಕು. ಹೆಚ್ಚು ಹೊತ್ತು ನೀರಿನಲ್ಲಿಟ್ಟರೆ ಕೆಲವು ಪೋಷಕಾಂಶಗಳು ನೀರಿಗೆ ಹೋಗಬಹುದು. ಸಾಮಾನ್ಯವಾಗಿ ಅರ್ಧ ಗಂಟೆಯಿಂದ ಎರಡು ಗಂಟೆಗಳ ಕಾಲ ನೆನೆಸಿದರೆ ಸಾಕು. ಬಿಸಿ ವಾತಾವರಣದಲ್ಲಿ ಹೆಚ್ಚು ಹೊತ್ತು ಇಡಬೇಡಿ. ನೆನೆಸಿದ ನೀರನ್ನು ಚೆಲ್ಲಿ, ಶುದ್ಧ ನೀರಿನಿಂದ ಅನ್ನ ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಒಟ್ಟಿನಲ್ಲಿ, ಅಕ್ಕಿ ನೆನೆಸುವುದು ನಮ್ಮ ಹಿರಿಯರ ಆರೋಗ್ಯಕರ ಸಂಪ್ರದಾಯ. ಆಧುನಿಕ ವಿಜ್ಞಾನವೂ ಇದನ್ನು ಒಪ್ಪುತ್ತದೆ. ದೈನಂದಿನ ಆಹಾರದಲ್ಲಿ ಈ ಸಣ್ಣ ಬದಲಾವಣೆ ದೀರ್ಘಕಾಲದ ಆರೋಗ್ಯ ಪ್ರಯೋಜನ ನೀಡುತ್ತದೆ. ಹಾಗಾಗಿ ಅವಸರ ಬಿಟ್ಟು, ಅಕ್ಕಿ ನೆನೆಸುವ ಅಭ್ಯಾಸ ಎಲ್ಲರಿಗೂ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
