- Home
- Entertainment
- TV Talk
- Karna- Brahmagantu: ಆಹಾರ ಎಸೆಯೋದನ್ನು ಕಲಿಸ್ತಿವೆ ಸೀರಿಯಲ್ಗಳು! ನೆಟ್ಟಿಗರ ಭಾರಿ ಆಕ್ರೋಶ
Karna- Brahmagantu: ಆಹಾರ ಎಸೆಯೋದನ್ನು ಕಲಿಸ್ತಿವೆ ಸೀರಿಯಲ್ಗಳು! ನೆಟ್ಟಿಗರ ಭಾರಿ ಆಕ್ರೋಶ
ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಕರ್ಣ' ಮತ್ತು 'ಬ್ರಹ್ಮಗಂಟು' ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿವೆ. ಈ ಎರಡೂ ಸೀರಿಯಲ್ಗಳಲ್ಲಿ ಆಹಾರವನ್ನು ಅನಗತ್ಯವಾಗಿ ವ್ಯರ್ಥ ಮಾಡುವ ದೃಶ್ಯಗಳನ್ನು ತೋರಿಸಲಾಗಿದ್ದು, ಇದು ಅನ್ನಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೀವನದ ಅಂಗ
ಸಿನಿಮಾ ಮತ್ತು ಸೀರಿಯಲ್ಗಳೇ ಎಷ್ಟೋ ವೀಕ್ಷಕರ ನಿತ್ಯ ಜೀವನದ ಅಂಗವಾಗಿಬಿಟ್ಟಿವೆ. ಚಿತ್ರತಾರೆಯರನ್ನೇ ತಮ್ಮ ದೇವರು ಎಂದುಕೊಂಡು, ಅಭಿಮಾನದ ಹೆಸರಿನಲ್ಲಿ ಅವರನ್ನೇ ಅನುಸರಿಸಿ ಅಪರಾಧ ಕೃತ್ಯಗಳಿಗೂ ಇಳಿದವರು ಇದ್ದಾರೆ. ಲಾಂಗು, ಮಚ್ಚುಗಳನ್ನು ಹಿಡಿದುಕೊಂಡು, ಸಿಗರೆಟ್, ಮದ್ಯ ಸೇವನೆ ಮಾಡಿಕೊಂಡು ಪೋಸ್ ನೀಡುವ ನಾಯಕರು ಇಂದು ಮಾಮೂಲಾಗಿರುವ ಕಾರಣ, ಅವರನ್ನೇ ಅನುಸರಿಸಿ ಪೊಲೀಸರ ಅತಿಥಿಯಾಗಿಯೋ ಇಲ್ಲವೇ ಬೇರೆಯವರ ಪ್ರಾಣ ತೆಗೆಯುವ ವರ್ಗವೂ ಇದೆ.
ಒಳ್ಳೆತನಕ್ಕೆ ಬೆಲೆ ಇಲ್ಲ
ಅಷ್ಟಕ್ಕೂ ಒಳ್ಳೆಯತನವನ್ನು ತೋರಿಸಿದರೆ ಅದನ್ನು ಅನುಕರಿಸುವವರು ತುಂಬಾ ಕಡಿಮೆ, ಆದರೆ ಅದೇ ಹೀರೋ ಆದವ ರಕ್ತ*ಪಾತ ಹರಿಸಿ ಲಾಂಗು ಮಚ್ಚು ಹಿಡಿದುಕೊಂಡು ಬಂದರೆ ಇನ್ನಿಲ್ಲದ ಉತ್ಸಾಹ ಈ ಅಭಿಮಾನಿಗಳಿಗೆ ಬರುತ್ತದೆ. ಸೀರಿಯಲ್ಗಳ ವೀಕ್ಷಕರು ಕೂಡ ಇದಕ್ಕೆ ಹೊರತಾಗಿಲ್ಲ.
ಮಿಸ್ ಮಾಡದೇ ನೋಡುವ ಜನ
ಮನೆಹಾಳು ಸೀರಿಯಲ್ಗಳು ಎಂದು ಬೈದುಕೊಳ್ಳುತ್ತಲೇ ಒಂದು ದಿನವೂ ಮಿಸ್ ಮಾಡದೇ, ಒಂದು ದಿನವೇನಾದ್ರೂ ಮಿಸ್ ಆಗಿ ಹೋಯಿತು ಎಂದರೆ ಏನೋ ಚಡಪಡಿಸುತ್ತಾ, ಇವತ್ತು ಕಥೆ ಏನಾಯ್ತಪ್ಪಾ ಎಂದು ನೊಂದುಕೊಳ್ಳುತ್ತಾ ಇರುವ ದೊಡ್ಡ ವರ್ಗವೇ ಇರುವುದರಿಂದಲೇ ಇದು ಸೀರಿಯಲ್ಗಳ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಜೊತೆಗೆ ಅದರ ವೀಕ್ಷಕರು ಕೂಡ ಬೈದುಕೊಳ್ಳುತ್ತಲೇ ನೋಡುತ್ತಿದ್ದಾರೆ. ಅಲ್ಲಿನ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ಆಸ್ವಾದಿಸುತ್ತಾರೆ.
ನೆಚ್ಚಿನ ಸೀರಿಯಲ್ಗಳು
ಜೀ ಕನ್ನಡದ ಕರ್ಣ ಮತ್ತು ಬ್ರಹ್ಮಗಂಟು ಎರಡೂ ಸೀರಿಯಲ್ಗಳಿಗೆ ದೊಡ್ಡ ಮಟ್ಟದ ವೀಕ್ಷಕರು ಇದ್ದಾರೆ. ಕರ್ಣನ ಒಳ್ಳೆಯ ಗುಣ ಹಾಗೂ ರೂಪಕ್ಕಿಂತಲೂ ಗುಣವೇ ಮೇಲು ಎಂದು ಬಿಂಬಿಸುವ ಬ್ರಹ್ಮಗಂಟು ಎರಡೂ ವೀಕ್ಷಕರಿಗೆ ಅಚ್ಚುಮೆಚ್ಚು. ಆದರೆ, ಈ ಎರಡೂ ಸೀರಿಯಲ್ಗಳಲ್ಲಿ ಇದೀಗ ಆಹಾರವನ್ನು ವೇಸ್ಟ್ ಮಾಡುವ, ಅದನ್ನು ಬೀಸಾಕುವ, ಡಸ್ಟ್ಬಿನ್ನಲ್ಲಿ ಚೆಲ್ಲುವ ದೃಶ್ಯವನ್ನು ತೋರಿಸಲಾಗಿದೆ. ಇದರ ವಿರುದ್ಧ ನೆಟ್ಟಿಗರು ಈಗ ಕಿಡಿ ಕಾರುತ್ತಿದ್ದಾರೆ. ಸೀರಿಯಲ್ಗಳಲ್ಲಿ ಈ ದೃಶ್ಯದ ಅನಿವಾರ್ಯತೆಯೇ ಇರಲಿಲ್ಲ. ಆದರೂ ಇದನ್ನು ತುರುಕಿಸಿ ಆಹಾರವನ್ನು ವೇಸ್ಟ್ ಮಾಡಿರುವುದು ಸಹ್ಯವಲ್ಲ ಎನ್ನುತ್ತಿದ್ದಾರೆ.
ಕರ್ಣದಲ್ಲಿ ಆಗಿದ್ದೇನು?
ಕರ್ಣ ಸೀರಿಯಲ್ (Karna Serial)ನಲ್ಲಿ ಕರ್ಣನಿಗಾಗಿ ಅಮ್ಮ ತಯಾರು ಮಾಡಿಟ್ಟ ಪದಾರ್ಥಗಳನ್ನೆಲ್ಲಾ ವಿಲನ್ ರಮೇಶ್ ಡಸ್ಟ್ಬಿನ್ನಲ್ಲಿ ಚೆಲ್ಲಿದ್ದಾನೆ. ಅವನು ಅನ್ನ ಚೆಲ್ಲಿದರೆ, ಪತ್ನಿಯನ್ನು ಹೆದರಿಸಿ ಎಲ್ಲಾ ಆಹಾರಗಳನ್ನೂ ಡಸ್ಟ್ಬಿನ್ಗೆ ಚೆಲ್ಲಿಸಿದ್ದಾನೆ.
ಬ್ರಹ್ಮಗಂಟುವಿನಲ್ಲಿ ಚಿರು ಮಾಡಿದ್ದೇನು?
ಅದೇ ಬ್ರಹ್ಮಗಂಟು ಸೀರಿಯಲ್ (Brahmagantu Serial)ನಲ್ಲಿ ದೀಪಾ ಅಪಾರ್ಥ ಮಾಡಿಕೊಂಡು ಗಂಡ ಚಿರುವಿನಿಂದ ದೂರ ಇದ್ದಾಳೆ. ಆದರೆ ಆಕೆಯನ್ನು ಮನಸ್ಸನ್ನು ಗೆಲ್ಲಲು ಚಿರು ಅವಳ ಅಮ್ಮನ ಮನೆಗೆ ಬಂದಿದ್ದಾನೆ. ಗಂಡ ಕಷ್ಟಪಡುವುದನ್ನು ನೋಡಲಾಗದೇ ದೀಪಾ ಊಟ ಕೊಟ್ಟು ಕಳುಹಿಸಿದ್ದಾಳೆ. ಆದರೆ ತಾನು ಕೊಟ್ಟಿದ್ದು ಎಂದು ಹೇಳಬೇಡ ಎಂದು ಮಕ್ಕಳಿಗೆ ಹೇಳಿದ್ದಾಳೆ. ಈ ಊಟ ದೀಪಾ ಕೊಟ್ಟಿಲ್ಲ ಎಂದು ನೊಂದುಕೊಂಡ ಚಿರು ಅದನ್ನು ಅಲ್ಲಿಯೇ ಎಸೆದಿದ್ದಾನೆ! ಇವೆರಡೂ ಸೀರಿಯಲ್ಗಳಲ್ಲಿ ಅನಗತ್ಯ ದೃಶ್ಯ ತುರುಕಿ ಆಹಾರ ವೇಸ್ಟ್ ಮಾಡಿರುವುದು ಸರಿಯಲ್ಲ ಎಂದು ನೆಟ್ಟಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

