- Home
- Entertainment
- TV Talk
- ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ದಾಖಲೆ: ಟಾಪ್-4ರಲ್ಲಿ ಮೂವರು ಮಹಿಳೆಯರು; ಗಿಲ್ಲಿಗೆ ತಪ್ಪುತ್ತಾ ಟ್ರೋಫಿ?
ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ದಾಖಲೆ: ಟಾಪ್-4ರಲ್ಲಿ ಮೂವರು ಮಹಿಳೆಯರು; ಗಿಲ್ಲಿಗೆ ತಪ್ಪುತ್ತಾ ಟ್ರೋಫಿ?
ಬಿಗ್ ಬಾಸ್ ಕನ್ನಡ ಸೀಸನ್ 12 ಹೊಸ ದಾಖಲೆ ಬರೆದಿದೆ. ಮೊದಲ ಬಾರಿಗೆ ಟಾಪ್-4ರಲ್ಲಿ ಮೂವರು ಮಹಿಳಾ ಸ್ಪರ್ಧಿಗಳು ಸ್ಥಾನ ಪಡೆದಿದ್ದು, ಇದು ಹಾಟ್ ಫೇವರಿಟ್ ಗಿಲ್ಲಿ ನಟನ ಟ್ರೋಫಿ ಗೆಲ್ಲುವ ಸಾಧ್ಯತೆ ಬಗ್ಗೆ ಅನುಮಾನ ಮೂಡಿಸಿದೆ. ನಟಿ ಶೃತಿ ಆಗಮನದಿಂದ ಮಹಿಳಾ ಸ್ಪರ್ಧಿಯೇ ವಿಜೇತರಾಗುವ ಸಾಧ್ಯತೆ ಹೆಚ್ಚಾಗಿದೆ.

ಬಿಗ್ ಬಾಸ್ ಹೊಸ ದಾಖಲೆ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 12 ಇದೀಗ ಅಂತಿಮ ಘಟ್ಟ ತಲುಪಿದ್ದು, ಈ ಬಾರಿ ಕಾರ್ಯಕ್ರಮವು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಹೊಸ ದಾಖಲೆಯನ್ನು ಬರೆದಿದೆ. ಕಳೆದ 11 ಸೀಸನ್‌ಗಳಲ್ಲಿ ಕಾಣದ ವಿಶೇಷವೊಂದು ಈ ಬಾರಿ ಸಂಭವಿಸಿದೆ; ಅದೇನೆಂದರೆ ಟಾಪ್-4 ಹಂತಕ್ಕೆ ತಲುಪಿರುವ ಸ್ಪರ್ಧಿಗಳಲ್ಲಿ ಮೂವರು ಮಹಿಳೆಯರು ಸ್ಥಾನ ಪಡೆದಿದ್ದಾರೆ!
ಮಹಿಳಾ ಸ್ಪರ್ಧಿಗಳ ಹೊಸ ಮೈಲಿಗಲ್ಲು
ಬಿಗ್ ಬಾಸ್ ಮನೆಯಲ್ಲಿ ಒಟ್ಟು 16 ವಾರಗಳ ಕಾಲ ನಡೆದ ಈ ಸುದೀರ್ಘ ಪಯಣದಲ್ಲಿ 24 ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಅಂತಿಮವಾಗಿ ಉಳಿದಿರುವ ನಾಲ್ವರು ಸ್ಪರ್ಧಿಗಳ ಪೈಕಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ಶೈವ ಎಂಬ ಮೂವರು ಮಹಿಳೆಯರಿದ್ದರೆ, ಪುರುಷರ ಪರವಾಗಿ ಗಿಲ್ಲಿ ನಟ ಒಬ್ಬನೇ ಏಕೈಕ ಅಭ್ಯರ್ಥಿಯಾಗಿ ಕಣದಲ್ಲಿದ್ದಾನೆ. ಈ ಮೂಲಕ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಟಾಪ್-4ನಲ್ಲಿ ಅತಿ ಹೆಚ್ಚು ಮಹಿಳಾ ಪ್ರಾತಿನಿಧ್ಯವಿರುವ ಮೊದಲ ಸೀಸನ್ ಎಂಬ ಹೆಗ್ಗಳಿಕೆಗೆ ಈ ಬಾರಿ ಪಾತ್ರವಾಗಿದೆ.
ಟಾಪ್-6ರಲ್ಲಿ ಹೊರಬಿದ್ದ ಇಬ್ಬರು ಪುರುಷರು
ಫಿನಾಲೆ ರೇಸ್‌ನಲ್ಲಿದ್ದ ಆರು ಜನರಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರಿದ್ದರು. ಆದರೆ, ಅಂತಿಮ ಹಂತದಲ್ಲಿ 5ನೇ ರನ್ನರ್ ಅಪ್ ಆಗಿ ಧನುಷ್ ಗೌಡ ಮತ್ತು 4ನೇ ರನ್ನರ್ ಅಪ್ ಆಗಿ ಮ್ಯೂಟೆಂಟ್ ರಘು ಮನೆಯಿಂದ ಹೊರಬಂದಿದ್ದಾರೆ. ಇದರಿಂದಾಗಿ ಗಿಲ್ಲಿ ನಟನ ಸುತ್ತಲೂ ಮಹಿಳಾ ಸ್ಪರ್ಧಿಗಳೇ ಸುತ್ತುವರಿದಂತಾಗಿದ್ದು, ಫೈಟ್ ಈಗ ಮತ್ತಷ್ಟು ರೋಚಕವಾಗಿದೆ.
ಶ್ರುತಿ ಎಂಟ್ರಿ ಮತ್ತು ಟ್ರೋಫಿ ಲೆಕ್ಕಾಚಾರ
ಬಿಗ್ ಬಾಸ್ ಸೀಸನ್ 3ರಲ್ಲಿ ನಟಿ ಶ್ರುತಿ ಅವರು ಟ್ರೋಫಿ ಗೆಲ್ಲುವ ಮೂಲಕ ಏಕೈಕ ಮಹಿಳಾ ವಿಜೇತೆ ಎನಿಸಿಕೊಂಡಿದ್ದರು. ಅದಾದ ನಂತರದ ಏಳು ಸೀಸನ್‌ಗಳಲ್ಲಿ ಒಬ್ಬನೇ ಒಬ್ಬ ಮಹಿಳಾ ಸ್ಪರ್ಧಿಯೂ ಕಪ್ ಗೆದ್ದಿಲ್ಲ. ಆದರೆ, ಈ ಬಾರಿ ಸ್ವತಃ ಶ್ರುತಿ ಅವರೇ ಮನೆಯೊಳಗೆ ಪ್ರವೇಶಿಸಿ ರಘು ಅವರನ್ನು ಹೊರಗೆ ಕರೆತಂದಿರುವುದು ಕುತೂಹಲ ಮೂಡಿಸಿದೆ. ಏಕೈಕ ಮಹಿಳಾ ವಿನ್ನರ್ ಶ್ರುತಿ ಅವರ ಆಗಮನವು ಈ ಬಾರಿಯೂ ಮಹಿಳಾ ಸ್ಪರ್ಧಿಯೇ ವಿನ್ನರ್ ಆಗುವ ಮುನ್ಸೂಚನೆಯೇ ಎಂಬ ಚರ್ಚೆ ಶುರುವಾಗಿದೆ.
ಗಿಲ್ಲಿಗೆ ಆತಂಕ ಶುರುವಾಯಿತೇ?
ಸದ್ಯ ಇಡೀ ರಾಜ್ಯದ ಹಾಟ್ ಫೇವರೀಟ್ ಆಗಿರುವ ಗಿಲ್ಲಿ ನಟನಿಗೆ ಈ 'ಮಹಿಳಾ ಪ್ರಾಬಲ್ಯ' ಆತಂಕ ತಂದೊಡ್ಡುತ್ತಾ ಎಂಬ ಅನುಮಾನ ಕಾಡುತ್ತಿದೆ. ಮತಗಳ ಸಂಖ್ಯೆಯಲ್ಲಿ ಗಿಲ್ಲಿ ಮುಂದಿದ್ದರೂ, ಬಿಗ್ ಬಾಸ್ ನಡೆಸಿಕೊಂಡು ಬಂದಿರುವ ಟ್ರೆಂಡ್ ಹಾಗೂ ಶ್ರುತಿ ಅವರ ಎಂಟ್ರಿ ನೋಡಿದರೆ, ಈ ಬಾರಿಯ ಕಪ್ ಮಹಿಳಾ ಸ್ಪರ್ಧಿಯ ಪಾಲಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

