70 ನಿಲ್ದಾಣ ದಾಟಿದ್ರೂ ಎಲ್ಲೂ ನಿಲ್ಲದ ಭಾರತದ ಏಕೈಕ ರೈಲು; 5 ರಾಜ್ಯ ಸಂಪರ್ಕಿಸೋ ಟ್ರೈನ್
Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.

ಭಾರತೀಯ ರೈಲ್ವೆ
ಭಾರತೀಯ ರೈಲ್ವೆಯು ವಿಶ್ವದ ಅತಿದೊಡ್ಡ ಸಾರಿಗೆ ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲುಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಕೆಲವು ರೈಲುಗಳು ಪ್ರತಿಯೊಂದು ಪ್ರಮುಖ ನಗರದಲ್ಲೂ ನಿಲ್ಲುತ್ತವೆ. ಆದರೆ, ದೂರದ ಪ್ರಯಾಣಿಕರ ಸಮಯ ಉಳಿಸಲು, ಕೆಲವೇ ನಿಲ್ದಾಣಗಳಲ್ಲಿ ನಿಲ್ಲುವ ಸೂಪರ್‌ಫಾಸ್ಟ್ ಸೇವೆಗಳೂ ಇವೆ.
ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್
ಅಂತಹ ಒಂದು ವಿಶಿಷ್ಟ ಸೂಪರ್‌ಫಾಸ್ಟ್ ರೈಲು ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್. ಈ ರೈಲು ಬಿಹಾರ ರಾಜ್ಯದ ಮೂಲಕ ಬಹಳ ದೂರ ಸಾಗಿದರೂ, ಯಾವುದೇ ನಿಲ್ದಾಣದಲ್ಲಿಯೂ ನಿಲುಗಡೆಯಾಗಲ್ಲ. ಸುಮಾರು 70 ನಿಲ್ದಾಣಗಳು ಬಂದರೂ ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ನಿಲುಗಡೆ ಆಗಲ್ಲ. ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ಮಾರ್ಗ, ಸಂಖ್ಯೆ ಮತ್ತು ಸಮಯ ಮತ್ತಿತ್ತರ ಮಾಹಿತಿ ಇಲ್ಲಿದೆ.
ರೈಲು ಸಂಖ್ಯೆ 12820/12819
ರೈಲು ಸಂಖ್ಯೆ 12820 ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್, ಆನಂದ್ ವಿಹಾರ್ ಟರ್ಮಿನಲ್ (ದೆಹಲಿ) ನಿಂದ ಭುವನೇಶ್ವರದವರೆಗೆ ಚಲಿಸುತ್ತದೆ. ಭುವನೇಶ್ವರದಿಂದ ಆನಂದ್ ವಿಹಾರ್‌ಗೆ ಹಿಂದಿರುಗುವಾಗ ರೈಲು ಸಂಖ್ಯೆ 12819 ಆಗಿರುತ್ತದೆ. ಈ ರೈಲು ಸುಮಾರು 1,782 ಕಿಲೋಮೀಟರ್ ದೂರವನ್ನು ಸುಮಾರು 28 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಮೂಲಕ ಹಾದುಹೋಗುವ ಈ ರೈಲು, ತನ್ನ ಸಂಪೂರ್ಣ ಪ್ರಯಾಣದಲ್ಲಿ ಕೇವಲ 13 ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಈ ಭಾಗದ ದೀರ್ಘ ಪ್ರಯಾಣಿಕರಿಗೆ ಇದು ರೈಲು ಅನುಕೂಲವಾಗಲಿದೆ.
ಬಿಹಾರದಲ್ಲಿ ನಿಲುಗಡೆಯೇ ಇಲ್ಲ
ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ಬಿಹಾರದ 70ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ದಾಟಿದರೂ ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲ್ಲುವುದಿಲ್ಲ. ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜಂಕ್ಷನ್ ದಾಟಿದ ನಂತರ ಬಿಹಾರವನ್ನು ಪ್ರವೇಶಿಸುವ ಈ ರೈಲು, ಸಸಾರಾಮ್, ಗಯಾ, ಮನ್‌ಪುರ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳನ್ನು ಹಾದುಹೋಗುತ್ತದೆ. ಆದರೂ, ಈ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹತ್ತಲು ಅಥವಾ ಇಳಿಯಲು ಅವಕಾಶವಿಲ್ಲ.
ಇದನ್ನೂ ಓದಿ: ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ: ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?
ಭಾರತದ ಸೂಪರ್‌ಫಾಸ್ಟ್ ರೈಲು
ಈ ಕಾರಣದಿಂದಾಗಿ ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯ ವಿಶಿಷ್ಟ ಸೂಪರ್‌ಫಾಸ್ಟ್ ರೈಲುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಪ್ರಮುಖ ಜಂಕ್ಷನ್ ನಿಲ್ದಾಣಗಳಲ್ಲಿ ಮತ್ತು ತಾಂತ್ರಿಕವಾಗಿ ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ರೈಲು ನಿಲ್ಲುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದೆಹಲಿ ಸೇರಿದಂತೆ ಒಟ್ಟು 5 ರಾಜ್ಯಗಳನ್ನು ಈ ರೈಲು ಸಂಪರ್ಕಿಸುತ್ತದೆ.
ಇದನ್ನೂ ಓದಿ: ಶಿವಮೊಗ್ಗ-ನರಸಿಂಹರಾಜಪುರ- ಕೊಪ್ಪ ಮಾರ್ಗವಾಗಿ ಶೃಂಗೇರಿ ರೇಲ್ವೆ ಮಾರ್ಗ; ಆಗುಂಬೆ ಸುರಂಗ ಮಾರ್ಗ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

