ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ: ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?
ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ ಆರಂಭಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶಾಸಕ ದೊಡ್ಡನಗೌಡ ಪಾಟೀಲರ ಒತ್ತಡವನ್ನೂ ಉಲ್ಲೇಖಿಸಿ, ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ
ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ ಆರಂಭಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಸಲ್ಲಿಸಿದ ಮನವಿಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಬೇಡಿಕೆ ಗಮನದಲ್ಲಿಟ್ಟುಕೊಂಡು ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮನವಿ ಸಲ್ಲಿಕೆ
ಬಾದಾಮಿಯಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನವೀಕರಿಸಲಾದ ರೈಲು ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ನಿವಾಸದಲ್ಲಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬೆಂಗಳೂರಿಗೆ ನೇರ ರೈಲು
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್, ಗದಗ–ವಾಡಿ ರೈಲು ಯೋಜನೆಯಡಿ ಕುಷ್ಟಗಿಗೆ ರೈಲು ಸಂಪರ್ಕ ದೊರೆತಿರುವುದು ಸಾರ್ವಜನಿಕರಿಗೆ ಅನುಕೂಲವಾಗಿದೆ. ಆದರೆ ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಇಲ್ಲದ ಕಾರಣ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
ಕುಷ್ಟಗಿವರೆಗೂ ವಿಸ್ತರಣೆ
ಬೆಂಗಳೂರು–ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲನ್ನು ಗದಗ ಜಂಕ್ಷನ್‌ವರೆಗೆ ವಿಸ್ತರಿಸುವ ಪ್ರಸ್ತಾವನೆ ಇದ್ದು, ಅದನ್ನು ಕುಷ್ಟಗಿವರೆಗೂ ವಿಸ್ತರಿಸಿದರೆ ಕುಷ್ಟಗಿ–ಬೆಂಗಳೂರು ನೇರ ರೈಲು ಸೇವೆ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: 2ನೇ ವಿಮಾನ ನಿಲ್ದಾಣ ಕನಕಪುರಕ್ಕೆ ಬೇಡ; ಸಿಎಂಗೆ ಪತ್ರ ಬರೆದು ಸ್ಥಳ ಹೇಳಿದ ವಿಜಯೇಂದ್ರ
ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ ಒತ್ತಡ
ಮನವಿ ಸ್ವೀಕರಿಸಿದ ಸಚಿವ ವಿ.ಸೋಮಣ್ಣ, ದೇಶದಾದ್ಯಂತ ಹೊಸ ರೈಲು ಮಾರ್ಗ, ರೈಲು ಸೇವೆಗಳ ವಿಸ್ತರಣೆ ಹಾಗೂ ವಿವಿಧ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಬೇಡಿಕೆಗಳಿವೆ.ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಆದ್ಯತೆ ಆಧಾರದ ಮೇಲೆ ಪರಿಗಣಿಸಲಾಗುತ್ತಿದೆ. ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸೇವೆ ಆರಂಭಿಸುವ ಕುರಿತು ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ ಒತ್ತಡ ಹೇರಿದ್ದು, ಈ ಬೇಡಿಕೆಯ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮಹಾಂತಯ್ಯ ಅರಳೇಲಿಮಠ, ಬಾಬು ಘೋರ್ಪಡೆ, ಶರಣಪ್ಪ ಲಿಂಗಶೆಟ್ಟರ ಸೇರಿದಂತೆ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

