ಐಷಾರಾಮಿ ರೈಲು 'ಗೋಲ್ಡನ್ ಚಾರಿಯಟ್'ನಲ್ಲಿ ಕರ್ನಾಟಕ ದರ್ಶನ: ಶೇ. 20ರಷ್ಟು ರೇಟ್ ಕಡಿತ
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಸಂಚರಿಸುತ್ತದೆ. ಈ ರೈಲು, ಇದೀಗ 'ಪ್ರೈಡ್ ಆಫ್ ಕರ್ನಾಟಕ' ಮತ್ತು 'ಜುವೆಲ್ಸ್ ಆಫ್ ಸೌತ್' ಪ್ಯಾಕೇಜ್‌ಗಳ ಮೇಲೆ ಶೇಕಡಾ 20ರಷ್ಟು ದರ ಇಳಿಕೆ ಮಾಡಿದೆ.

ಕರ್ನಾಟಕ ಶ್ರೀಮಂತ ಪರಂಪರೆ
ಕರ್ನಾಟಕವು ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಪಾರಂಪರಿಕ ತಾಣಗಳು ವಿಶ್ವದ ಕೆಲವೇ ರಾಜ್ಯಗಳಲ್ಲಿ ಕಾಣಲು ಸಿಗುತ್ತದೆ. ಇದೇ ಕಾರಣಕ್ಕೆ ಕರ್ನಾಟಕದ ದರ್ಶನ ಮಾಡಿಸುವ ಸಲುವಾಗಿ ಐಷಾರಾಮಿ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಗೋಲ್ಡನ್ ಚಾರಿಯಟ್ (Golden Chariot Train) ರೈಲಿನ ಪ್ರಯಾಣ ಇದಾಗಿದೆ. ಹೆಚ್ಚಾಗಿ ವಿದೇಶಿ ಪ್ರವಾಸಿಗರನ್ನು ಗಮನದಲ್ಲಿ ಇಟ್ಟುಕೊಂಡು ಈ ರೈಲು ಸಂಚಾರ ಆರಂಭಿಸಲಾಗಿದೆ.
ಏನೇನು ಐಷಾರಾಮಿ ಸೌಲಭ್ಯ
80 ಪ್ರಯಾಣಿಕರಿಗೆ ಅವಕಾಶ ಇರುವ ಈ ರೈಲಿನಲ್ಲಿ 80 ಪ್ರಯಾಣಿಕರು ಹೋಗಬಹುದಷ್ಟೇ. ಇದರಲ್ಲಿ 13 ಡಬಲ್ ಬೆಡ್ ಕ್ಯಾಬಿನ್, 26 ಟ್ವಿನ್ ಬೆಡ್ ಕ್ಯಾಬಿನ್ ಹಾಗೂ ವಿಶೇಷ ಚೇತನರಿಗಾಗಿ ಒಂದು ವಿಶೇಷ ಕ್ಯಾಬಿನ್ ವ್ಯವಸ್ಥೆ ಇದೆ. ಸೀಟುಗಳ ಹೊಸ ಪೀಠೋಪಕರಣಗಳು, ಮರದ ಮೇಲ್ಮೈಗಳಿಗೆ ಪಾಲಿಶ್, ಉನ್ನತ ದರ್ಜೆಯ ಹಾಸಿಗೆ, ಹೊದಿಕೆ ಹಾಗೂ ಆಧುನಿಕ ಶೈಲಿಯ ಬಾತ್‌ರೂಮ್ ಸೌಲಭ್ಯಗಳು ರೈಲಿನ ಸೌಂದರ್ಯವನ್ನು ಹೆಚ್ಚಿಸಿವೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾ, ಸುಧಾರಿತ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ವೃತ್ತಿಪರ ಆತಿಥ್ಯ ನೀಡಲು ದಕ್ಷ ಸಿಬ್ಬಂದಿ ವರ್ಗವನ್ನು ನಿಯೋಜಿಸಲಾಗಿದೆ.
ಕಳೆದ ವರ್ಷ ದಾಖಲೆ
ಕಳೆದ ವರ್ಷ ತನ್ನ ಇತಿಹಾಸದಲ್ಲೇ ಅತ್ಯಧಿಕ ಅಂದರೆ 64 ಪ್ರಯಾಣಿಕರನ್ನು ಒಂದೇ ಬಾರಿಗೆ ಹೊತ್ತೊಯ್ಯುವ ಮೂಲಕ ಈ ರೈಲು ಹೊಸ ದಾಖಲೆ ಬರೆದಿದೆ. ಇದೀಗ ಶೇಕಡಾ 20ರಷ್ಟು ಪ್ರಯಾಣ ದರವನ್ನು ಇಳಿಸಲಾಗಿದೆ. ಕರ್ನಾಟಕ ಸುತ್ತಾಟಕ್ಕೆ ವಿಶೇಷ ಪ್ಯಾಕೇಜ್ ಐದು ರಾತ್ರಿ ಮತ್ತು ಆರು ದಿನಗಳ ಈ ಪ್ಯಾಕೇಜ್‌ನಲ್ಲಿ ಬೆಂಗಳೂರು, ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಹಾಗೂ ಗೋವಾ ಸೇರಿದಂತೆ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಮುಂಗಡ ಬುಕ್ಕಿಂಗ್‌ಗೆ ಹೆಚ್ಚುವರಿ ರಿಯಾಯಿತಿ ಜೂನ್ 30ರೊಳಗೆ ಮುಂಗಡ ಪಾವತಿ ಮಾಡುವ ಪ್ರವಾಸಿಗರಿಗೆ ಹೆಚ್ಚುವರಿಯಾಗಿ 5% ಆರಂಭಿಕ ರಿಯಾಯಿತಿ ನೀಡಲಾಗುತ್ತದೆ.
ಯಾಕೆ ಈ ಹೆಸರು?
ಹಾಗೆಂದು ಇದು ನಮ್ಮ ಕನ್ನಡಿಗರಿಗೆ ದುಬಾರಿನೇ ಬಿಡಿ. ಏಕೆಂದ್ರೆ ಮೊದಲೇ ಹೇಳಿದ ಹಾಗೆ ಇದು ಇರುವುದು ವಿದೇಶಿ ನಾಗರಿಕರಿಗೆ. ಅಂದಹಾಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯ ವಿಠ್ಠಲ ದೇವಸ್ಥಾನದ ಐತಿಹಾಸಿಕ 'ಕಲ್ಲಿನ ರಥ'ದಿಂದ ಸ್ಫೂರ್ತಿ ಪಡೆದು ಈ ರೈಲಿಗೆ ಹೆಸರಿಡಲಾಗಿದೆ.
ವಿಶೇಷ ರಿಯಾಯಿತಿ
2028ರವರೆಗೆ ಯೋಜಿಸಲಾಗಿರುವ ಒಟ್ಟು 12 ಪ್ರವಾಸಗಳ ಪೈಕಿ 10 ಪ್ರವಾಸಗಳಿಗೆ ಈ ವಿಶೇಷ ರಿಯಾಯಿತಿ ಅನ್ವಯವಾಗಲಿದೆ. ಈ ವರ್ಷ ರೈಲ್ವೆಯು ಮೂರು ವಿಭಿನ್ನ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದ್ದು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದ 'ಪ್ರೈಡ್ ಆಫ್ ಕರ್ನಾಟಕ' ಪ್ಯಾಕೇಜ್ ಪ್ರವಾಸಿಗರ ಮೊದಲ ಆಯ್ಕೆಯಾಗಿದೆ. ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಈ ಪ್ಯಾಕೇಜ್ ಪ್ರವಾಸಿಗರಲ್ಲಿ ಹೆಚ್ಚಿನ ಕುತೂಹಲ ಮತ್ತು ಜನಪ್ರಿಯತೆ ಗಳಿಸಿದೆ.
ವಿದೇಶಿಗರಿಗೆ ಅನುಕೂಲ
ಈ ಪ್ಯಾಕೇಜ್‌ನ ಒಬ್ಬರ ಟಿಕೆಟ್ ದರ ಮೊದಲು ಸುಮಾರು ರೂ.4.8 ಲಕ್ಷ (5,000 ಡಾಲರ್ ) ಇತ್ತು. ಶೇಕಡಾ 20 ರಷ್ಟು ರಿಯಾಯಿತಿಯ ನಂತರ ಇದು ಸುಮಾರು ರೂ.3.8 ಲಕ್ಷ (4,000 ಡಾಲರ್) ಆಗಲಿದೆ. 'ಜುವೆಲ್ಸ್ ಆಫ್ ಸೌತ್' ಪ್ಯಾಕೇಜ್‌ಗೂ ರಿಯಾಯಿತಿ ಕರ್ನಾಟಕದ ಜೊತೆಗೆ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿರುವ "ಜುವೆಲ್ಸ್ ಆಫ್ ಸೌತ್" ಪ್ಯಾಕೇಜ್‌ನ ದರವೂ ಇಳಿಕೆಯಾಗಿದೆ. ಮೊದಲು ಸುಮಾರು ರೂ.3.3 ಲಕ್ಷ (3,400 ಡಾಲರ್) ಇದ್ದ ದರ ಈಗ ಸುಮಾರು ರೂ.2.6 ಲಕ್ಷ (2,720 ಡಾಲರ್)ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

