ಮುಂಗಾರು ಸಮಯದಲ್ಲಿ ಈ ರಾಜ್ಯಕ್ಕೆ ಭೇಟಿ ಕೊಡ್ತೀರಾ? ಅತಿ ಹೆಚ್ಚು ಹಾವುಗಳಿರುವ ಪ್ರದೇಶಗಳಿವು
Snake biodiversity hotspots in india: ದೇಶದಲ್ಲೇ ಅತಿ ಹೆಚ್ಚು ಹಾವುಗಳನ್ನು ಹೊಂದಿರುವ ಟಾಪ್ ರಾಜ್ಯಗಳು ಯಾವುವು ಮತ್ತು ಮಳೆಗಾಲದಲ್ಲಿ ಆ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳೇನು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಜೀವವೈವಿಧ್ಯತೆಯ ಸಂಶೋಧನೆಗಳ ಪ್ರಕಾರ
ಭಾರತದಲ್ಲಿ 300ಕ್ಕೂ ಹೆಚ್ಚು ಪ್ರಬೇಧದ ಹಾವುಗಳು ವಾಸಿಸುತ್ತಿವೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಕಿಂಗ್ ಕೋಬ್ರಾ (ಕಾಳಿಂಗ ಸರ್ಪ), ಇಂಡಿಯನ್ ಕೋಬ್ರಾ (ನಾಗರಹಾವು), ರಸ್ಸೆಲ್ಸ್ ವೈಪರ್ (ಕೊಳಕು ಮಂಡಲ), ಕ್ರೈಟ್ (ಕಟ್ಟುಹಾವು) ನಂತಹ ಅತ್ಯಂತ ವಿಷಕಾರಿ ಹಾವುಗಳೊಂದಿಗೆ ಅನೇಕ ಅಪರೂಪದ ತಳಿಗಳು ಭಾರತದ ಕಾಡುಗಳಲ್ಲಿ ಕಂಡುಬರುತ್ತವೆ. ಅಧಿಕೃತವಾಗಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹಾವುಗಳಿವೆ ಎಂಬ ಪಟ್ಟಿ ಇಲ್ಲದಿದ್ದರೂ, ಜೀವವೈವಿಧ್ಯತೆಯ ಸಂಶೋಧನೆಗಳ ಪ್ರಕಾರ ಕೆಲವು ರಾಜ್ಯಗಳನ್ನು ಹಾವುಗಳ ಪ್ರಮುಖ ನೆಲೆಗಳಾಗಿ ಗುರುತಿಸಲಾಗಿದೆ. ಮುಂಗಾರು ಸಮಯದಲ್ಲಿ ಈ ರಾಜ್ಯಗಳಿಗೆ ಭೇಟಿ ನೀಡುವ ಪರಿಸರ ಪ್ರೇಮಿಗಳು ಮತ್ತು ಪ್ರವಾಸಿಗರು ಹಾವುಗಳ ಕಾಟಕ್ಕೆ ಸಿಲುಕದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಕೇರಳ
ಕೇರಳ
ಹಾವುಗಳು ಅತ್ಯಧಿಕ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದಕ್ಕಾಗಿಯೇ ಕೇರಳವನ್ನು ಭಾರತದ ‘ಸ್ನೇಕ್ ಡೈವರ್ಸಿಟಿ ಕ್ಯಾಪಿಟಲ್’ (ಹಾವುಗಳ ವೈವಿಧ್ಯತೆಯ ರಾಜಧಾನಿ) ಎಂದೂ ಸಹ ಕರೆಯಲಾಗುತ್ತದೆ. ಪಶ್ಚಿಮ ಘಟ್ಟಗಳ ಪ್ರಭಾವದಿಂದಾಗಿ ಕೇರಳದಲ್ಲಿ ಅತಿ ಹೆಚ್ಚು ಜಾತಿಯ ಹಾವುಗಳು ಕಂಡುಬರುತ್ತವೆ. ಕಿಂಗ್ ಕೋಬ್ರಾ ಮತ್ತು ಮಲಬಾರ್ ಪಿಟ್ ವೈಪರ್‌ನಂತಹ ಅಪರೂಪದ ತಳಿಗಳು ಇಲ್ಲಿ ಹೆಚ್ಚಾಗಿವೆ. ವಯನಾಡ್, ತೇಕ್ಕಡಿ ಮತ್ತು ಪೆರಿಯಾರ್ ಪ್ರದೇಶಗಳಲ್ಲಿ ಹಾವುಗಳ ಜೀವವೈವಿಧ್ಯತೆ ಹೆಚ್ಚಾಗಿರುವುದರಿಂದ, ಅಲ್ಲಿಗೆ ಟ್ರೆಕ್ಕಿಂಗ್ ಹೋಗುವ ಪ್ರವಾಸಿಗರು ಜೂನ್‌ನಿಂದ ಸೆಪ್ಟೆಂಬರ್ ಅವಧಿಯ ಮಳೆಗಾಲದಲ್ಲಿ ಜಾಗರೂಕರಾಗಿರಬೇಕು.
ಕರ್ನಾಟಕ
ಕರ್ನಾಟಕ
ಕರ್ನಾಟಕಕ್ಕೆ ಭಾರತದ ‘ಕೋಬ್ರಾ ಕ್ಯಾಪಿಟಲ್’ ಎಂಬ ಹೆಗ್ಗಳಿಕೆ ಇದೆ. ಇಲ್ಲಿನ ಪಶ್ಚಿಮ ಘಟ್ಟಗಳ ಪ್ರದೇಶವು ಹಾವುಗಳಿಗೆ ಬಲವಾದ ಆಶ್ರಯತಾಣವಾಗಿದೆ. ಮುಖ್ಯವಾಗಿ ಆಗುಂಬೆ ಪ್ರದೇಶದಲ್ಲಿ ಕಾಳಿಂಗ ಸರ್ಪಗಳ (King Cobra) ಸಂಖ್ಯೆ ಗಣನೀಯವಾಗಿದೆ. ಕಾಳಿಂಗ ಸರ್ಪದ ಜೊತೆಗೆ ವೈನ್ ಸ್ನೇಕ್ಸ್ (ಹಸಿರು ಹಾವು), ಪಿಟ್ ವೈಪರ್ಸ್, ಕೋರಲ್ ಸ್ನೇಕ್ಸ್ ಮತ್ತು ಕೆರೆಹಾವುಗಳಂತಹ (Rat Snake) ತಳಿಗಳು ಇಲ್ಲಿ ಕಂಡುಬರುತ್ತವೆ.
ಮಹಾರಾಷ್ಟ್ರ
ಮಹಾರಾಷ್ಟ್ರ
ಈ ರಾಜ್ಯದ ಪಶ್ಚಿಮ ಘಟ್ಟಗಳು, ಕೊಂಕಣ ಕರಾವಳಿಯಲ್ಲಿ ಹಾವುಗಳ ಜೀವವೈವಿಧ್ಯತೆ ಹೆಚ್ಚಾಗಿದೆ. ಅಂಬೋಲಿ, ತಡೋಬಾ ಮತ್ತು ಸಹ್ಯಾದ್ರಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಹಾವುಗಳ ಪ್ರಮುಖ ನೆಲೆಗಳಾಗಿವೆ. ಈ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಟ್ರೆಕ್ಕಿಂಗ್ ಹೋಗುವ ಪ್ರವಾಸಿಗರು ವಿಶೇಷ ಎಚ್ಚರಿಕೆ ವಹಿಸಬೇಕು.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ
ಈ ರಾಜ್ಯದಲ್ಲಿರುವ ಸುಂದರಬನದ ಮ್ಯಾಂಗ್ರೋವ್ ಕಾಡುಗಳು ಹಾವುಗಳ ವೈವಿಧ್ಯತೆಗೆ ಹೆಸರಾಗಿವೆ. ನಾಗರಹಾವುಗಳು, ಕಟ್ಟುಹಾವುಗಳು ಮತ್ತು ರಸ್ಸೆಲ್ಸ್ ವೈಪರ್ಸ್ (ಕೊಳಕು ಮಂಡಲ) ರಾಜ್ಯಾದ್ಯಂತ ಕಂಡುಬರುತ್ತವೆ. ಸುಂದರಬನದ ಕಾಡುಗಳನ್ನು ವೀಕ್ಷಿಸಲು ಹೋಗುವ ಪ್ರವಾಸಿಗರು ಜಾಗರೂಕರಾಗಿರಬೇಕು.
ಅಸ್ಸಾಂ
ಅಸ್ಸಾಂ
ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅಸ್ಸಾಂ ವಿಭಿನ್ನ ಶೈಲಿಯ ಹಾವುಗಳಿಗೆ ಸ್ವರ್ಗಧಾಮದಂತೆ ಕಂಗೊಳಿಸುತ್ತಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಬ್ರಹ್ಮಪುತ್ರ ನದಿಯ ಪ್ರವಾಹ ಮೈದಾನಗಳು ಅನೇಕ ಜಾತಿಯ ಹಾವುಗಳಿಗೆ ಆಶ್ರಯ ನೀಡಿವೆ.
ಅಲ್ಲದೆ, ತಮಿಳುನಾಡು, ಮೇಘಾಲಯ ಮತ್ತು ಒಡಿಶಾ ರಾಜ್ಯಗಳು ಕೂಡ ಸರೀಸೃಪಗಳ ಜೀವವೈವಿಧ್ಯತೆಯಲ್ಲಿ ವಿಶೇಷ ಗುರುತನ್ನು ಪಡೆದಿವೆ. ಇಲ್ಲಿನ ನೀಲಗಿರಿ ಬೆಟ್ಟಗಳು, ನಿತ್ಯಹರಿದ್ವರ್ಣ ಕಾಡುಗಳು ಮತ್ತು ಜೌಗು ಪ್ರದೇಶಗಳು ಹಾವುಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವನ್ನು ಒದಗಿಸುತ್ತವೆ. ಉತ್ತರಾಖಂಡದ ಹಿಮಾಲಯದ ಕಾಡುಗಳು ಮತ್ತು ಉತ್ತರ ಪ್ರದೇಶದ ನದಿ ತೀರದ ಪ್ರದೇಶಗಳನ್ನು ಕೂಡ ಹಾವುಗಳ ಸಂಖ್ಯೆ ಹೆಚ್ಚಿರುವ ಜಾಗಗಳಾಗಿ ಗುರುತಿಸಲಾಗಿದೆ.
ವಿಶೇಷ ಮುನ್ನೆಚ್ಚರಿಕೆಗಳು ಅತ್ಯಗತ್ಯ
ವಿಶೇಷ ಮುನ್ನೆಚ್ಚರಿಕೆಗಳು ಅತ್ಯಗತ್ಯ
ವನ್ಯಜೀವಿ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡುವಾಗ ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು:
*ಕಾಡುಗಳಲ್ಲಿ ಟ್ರೆಕ್ಕಿಂಗ್ ಮಾಡುವಾಗ ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚುವಂತಹ ಗಟ್ಟಿಮುಟ್ಟಾದ ಬೂಟುಗಳು ಅಥವಾ ಪಾದರಕ್ಷೆಗಳನ್ನು ಧರಿಸಬೇಕು.
*ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡದಿರುವುದು ಒಳ್ಳೆಯದು.
*ಸ್ಥಳೀಯ ಗೈಡ್‌ಗಳ (ಮಾರ್ಗದರ್ಶಕರ) ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
*ಹಾವುಗಳ ತೀರಾ ಹತ್ತಿರಕ್ಕೆ ಹೋಗಿ ಫೋಟೋ ಅಥವಾ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಬಾರದು.
ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ
ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ
ಪ್ರಕೃತಿಯಲ್ಲಿ ಹಾವುಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಲಿಗಳು ಮತ್ತು ಕೀಟಗಳನ್ನು ನಿಯಂತ್ರಿಸುವ ಮೂಲಕ ಅವು ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಆದ್ದರಿಂದ, ಅವುಗಳನ್ನು ಕಂಡು ಹೆದರಿ ಕೊಲ್ಲುವ ಬದಲು, ಗೌರವದಿಂದ ಕಂಡು ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.